ADVERTISEMENT

ಆರೋಗ್ಯ | ಚಳಿಗಾಲದ ದಮ್ಮು–ಕೆಮ್ಮುಗಳು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 23:47 IST
Last Updated 24 ನವೆಂಬರ್ 2025, 23:47 IST
   

ದೀಪಾವಳಿ, ತುಳಸಿ ಹಬ್ಬ ಎಲ್ಲಾ ಮುಗೀತು ಅಂದ್ರೆ, ಬಿಸಿಲು, ಮಳೆ ಎಲ್ಲಾ ಹೋಗಿ ಚಳಿರಾಯ ಬರೋ ಕಾಲ ಹತ್ತಿರ ಬಂದಿದೆ ಅಂತ ಅರ್ಥ. ಚಳಿಗಾಲದಲ್ಲಿ ವಾತಾವರಣದ ತಂಪಿನಿಂದಾಗಿ ಕಫ ವಾತಗಳೆರಡೂ ಏಕಕಾಲದಲ್ಲಿ ಹೆಚ್ಚಾಗುವುದರಿಂದ ಅವರವರ ದೇಹ ಸ್ವಭಾವಕ್ಕೆ ಅನುಗುಣವಾಗಿ ಕೆಲವರಲ್ಲಿ ಗಂಟು ನೋವು ಪ್ರಾರಂಭವಾದರೆ, ಕೆಲವರಲ್ಲಿ ಚರ್ಮರೋಗಗಳು, ಮೈಕೈ ನೆವೆ, ದದ್ದುಗಳು, ಅನೇಕರಿಗೆ, ಕೆಮ್ಮು, ದಮ್ಮು, ನೆಗಡಿ ಹೆಚ್ಚಾಗುತ್ತವೆ.

ಕೆಮ್ಮು, ದಮ್ಮು, ನೆಗಡಿಗಳಿಗೆ ದೀಪಾವಳಿಯವರೆಗೆ ಇದ್ದ ಮಳೆ-ಬಿಸಿಲಿನ ಆಟದ ಕಾರಣದಿಂದ ಉತ್ಪನ್ನವಾದ ಪಿತ್ತದ ಅಂಶದೊಂದಿಗೆ, ಚಳಿಗಾಲದ ತಂಪಿನಿಂದಾಗಿ ಹೆಚ್ಚಾಗುವ ಕಫವು ಸೇರಿ ಉರಿಶೀತದ ಉಪಟಳ ಆರಂಭವಾಗುತ್ತವೆ. ಪಿತ್ತದ ಉರಿಯೂ, ಕಫದ ಶೀತವೂ ಸೇರಿ, ಉಸಿರಾಟದ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ಆಗ ಕೆಮ್ಮಿನೊಡನೆ ಕಫ ಬರುತ್ತದೆ ಮತ್ತು ಗಂಟಲು ಮತ್ತು ಮೂಗಿನಲ್ಲಿ ಉರಿಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಖಾರ ಕರಿದ ಪದಾರ್ಥಗಳ ಸೇವನೆಯನ್ನು ನಿಲ್ಲಿಸಬೇಕು, ಕಲ್ಲುಸಕ್ಕರೆಯನ್ನು ಚಪ್ಪರಿಸುವುದು, ದನಿಯಾ ಪುಡಿಗೆ ಸಕ್ಕರೆ ಮತ್ತು ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಕೆಮ್ಮಿದಾಗ ಉತ್ಪನ್ನವಾಗುವ ಉರಿಯು ಕಡಿಮೆಯಾಗುತ್ತದೆ. ತುಳಸಿಹಬ್ಬದಲ್ಲಿ ನೆಲ್ಲಿಕಾಯನ್ನು ತಿನ್ನಲು ಹೇಳುವುದು, ನೆಲ್ಲಿ ಮರದ ಕೆಳಗೆ ಧಾತ್ರಿ ಹವನ ಇತ್ಯಾದಿ ಸಂಪ್ರದಾಯಗಳ ಮೂಲಕ ನೆಲ್ಲಿಕಾಯಿಯ ಸೇವನೆಯನ್ನು ವಿಧಿಸಿರುವುದು ದೇಹದಲ್ಲಿ ಪಿತ್ತದ ಅಂಶ ಕಡಿಮೆಯಾಗಲೆಂದೇ.

ಅತಿ ಶೀತ ಪದಾರ್ಥಗಳ ನಿರಂತರ ಸೇವನೆ, ತಂಗಳು ಆಹಾರ ಸೇವನೆ, ಬೆಳಗಿನ ಜಾವದಲ್ಲಿ ವಾಯುವಿಹಾರ, ಅತಿಯಾದ ನಿದ್ದೆ ಇವುಗಳಿಂದಾಗಿ ಹೆಚ್ಚಾದ ಕಫದಿಂದಾಗಿ ಎದೆಗೂಡು, ಪಕ್ಕೆಲುಬುಗಳಲ್ಲಿ ನೋವು ಜಿಗುಟಾದ ಕಫದಿಂದ ಕೂಡಿರುವ ಕೆಮ್ಮು ಉಂಟಾಗುತ್ತದೆ. ಬಿಸಿ ಪದಾರ್ಥಗಳ ಸೇವನೆ, ದೇಹವನ್ನು ಬೆಚ್ಚಗಿಡುವುದು, ಬಿಸಿನೀರಿಗೆ ತುಪ್ಪ ಬೆರೆಸಿ ಸೇವಿಸುವುದು, ತುಳಸಿ, ಶುಂಠಿ ರಸಗಳಿಗೆ ಜೇನು ಬೆರೆಸಿ ಸೇವಿಸುವುದು, ಅರ್ಧ ಚಮಚ ಅರಿಶಿನ ಮತ್ತು ಒಂದೆರಡು ಕಾಳುಮೆಣಸನ್ನು ಪುಡಿ ಮಾಡಿ, ಅರ್ಧಲೋಟ ಹಾಲು ಮತ್ತು ನೀರಿನೊಂದಿಗೆ ಬೆರೆಸಿ, ಹಾಲು ಮಾತ್ರಾ ಇಂಗುವಷ್ಟು ಕುದಿಸಿ, ದಿನಕ್ಕೆರಡುಬಾರಿ ಸೇವಿಸುವುದರಿಂದ ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ. ಹುಳಿ ಪದಾರ್ಥಗಳ, ಜೀರ್ಣಿಸಲು ಕಷ್ಟವಾಗುವ ಪದಾರ್ಥಗಳ ಸೇವನೆಯನ್ನು ನಿಲ್ಲಿಸಬೇಕು,

ADVERTISEMENT

ಅತಿಯಾದ ತಂಪು ನೀರನ್ನು ಮಂಜುಗಡ್ಡೆಯಾಗಿ ಪರಿವರ್ತಿಸುವಂತೆ, ನಿರಂತರವಾಗಿ ತಂಪಾದ ವಾತಾವರಣದಲ್ಲಿ ಇರುವಾಗ ಪುಪ್ಪುಸದಲ್ಲಿ ಕಫವು ಒಣಗಿ ಹಿಡಿದು, ಹಿಡಿದು ಕೆಮ್ಮು  ಬರುತ್ತದೆ, ಕಫವು ಹೊರಗೆ ಬರುವುದಿಲ್ಲ. ಬಿಸಿನೀರಿನ ಸೇವನೆ, ಬಿಸಿ ಬಿಸಿ ಆಹಾರದ ಸೇವನೆ, ಕೇವಲ ಜೀರಿಗೆ ಪುಡಿಗೆ ತುಪ್ಪ ಬೆರೆಸಿ ಸೇವಿಸುವುದು, ಅಥವಾ ದ್ರಾಕ್ಷಿ ಮತ್ತು ಜೀರಿಗೆಯನ್ನು ಬೆರೆಸಿ ಉಂಡೆ ಮಾಡಿ ಬಾಯಿಯಲ್ಲಿ ಇಟ್ಟು ಚಪ್ಪರಿಸುವುದರಿಂದ, ಎದೆಭಾಗಕ್ಕೆ ಒಗ್ಗರಣೆ ಎಣ್ಣೆ ಹಚ್ಚಿ ಶಾಖ ಕೊಡುವುದರಿಂದ ಕಫವು ಕರಗಿ ಕೆಮ್ಮು ಕಡಿಮೆಯಾಗುತ್ತದೆ.

ತಂಪಾದ ವಾತಾವರಣದಲ್ಲಿ ಕೆಲಸ ಮಾಡುವುದರ ಜೊತೆಗೆ, ವಿರುದ್ಧ ಆಹಾರಗಳಾದ ಹಾಲು ಮಜ್ಜಿಗೆ ಅಥವಾ ಮೊಸರನ್ನು, ಹಣ್ಣುಗಳನ್ನು ಬೆರೆಸಿ ಮಿಲ್ಕ್ ಶೇಕ್, ಸ್ಮೂದಿ ಇತ್ಯಾದಿ ಆಹಾರಗಳನ್ನು ನಿರಂತರವಾಗಿ ಸೇವಿಸುವುದು, ಹಣ್ಣು ಮತ್ತು ಐಸ್ಕ್ರೀಂಗಳ ಮಿಶ್ರಣವನ್ನು ಸೇವಿಸುವುದು, ಇವುಗಳು ಎದೆ ಭಾಗದ ಮತ್ತು ಶ್ವಾಸಕೋಶದ ಮಾಂಸಖಂಡಗಳ ಸಂಕೋಚವನ್ನು ಮಾಡಿ ದಮ್ಮನ್ನು ಉತ್ಪತ್ತಿ ಮಾಡುತ್ತದೆ. ಇಂತಹ ಆಹಾರ ವಿಹಾರಗಳು ಜೀರ್ಣಶಕ್ತಿಯನ್ನೂ ಕುಂದಿಸುತ್ತವೆ, ಕೆಲವೊಮ್ಮೆ ಮಲಬದ್ದತೆಯನ್ನೂ ಉಂಟುಮಾಡಬಹುದು. ಹಾಗಾಗಿ ಜೀರ್ಣ ಶಕ್ತಿ ಹೆಚ್ಚಿಸುವ ಆಹಾರಗಳ ಸೇವನೆ ಎಂದರೆ ಮೆಣಸಿನ ಸಾರು, ಹಿಪ್ಪಲಿಯನ್ನು ಜೇನಿನಲ್ಲಿ ಬೇರೆಸಿ ಸೇವಿಸುವುದು, ಸೈಂದುಪ್ಪು ಮತ್ತು ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಚೆನ್ನಾಗಿ ರಂಗಳಿಸಿ ಎದೆಯ ಭಾಗಕ್ಕೆ ಚೆನ್ನಾಗಿ ಉಜ್ಜಿ ಶಾಖ ಕೊಡುವುದರಿಂದ ಶ್ವಾಸಕೋಶದಲ್ಲಿರುವ ಕಫವು ಕರಗಿ ಹೊರಬರುತ್ತದೆ. ಇದರಿಂದ ದಮ್ಮು ಕಡಿಮೆ ಆಗುತ್ತದೆ. ಮಲ ಪ್ರವೃತ್ತಿ ಸರಿಯಾಗಿ ಆಗದಿದ್ದಲ್ಲಿ ಮಲಪ್ರವೃತ್ತಿ ಸರಿಯಾಗುವಂತಹ ಆಹಾರಗಳ ಸೇವನೆ, ಬಿಸಿನೀರಿಗೆ ತುಪ್ಪ ಬೆರೆಸಿ ಮಲಗುವಾಗ ಸೇವಿಸುವುದರಿಂದ ದಮ್ಮು ಕಡಿಮೆಯಾಗುತ್ತದೆ.

ತಂಪಾದ ವಾತಾವರಣದಲ್ಲಿ ನಿರಂತರವಾಗಿ ಕೆಲಸ ಮಾಡುವುದು, ತಣ್ಣೀರಿನಲ್ಲಿ ಸ್ನಾನ ಮಾಡುವುದು, ಹಿಮದಲ್ಲಿ ಓಡಾಡುವುದು, ರಾತ್ರಿ ಹೊತ್ತಿನಲ್ಲಿ ತಂಪಾದ ಆಹಾರ ಸೇವಿಸುವುದು, ಇನ್ನಿತರ ಕಾರಣಗಳಿಂದ ತಲೆಯ ಭಾಗದಲ್ಲಿ ಕಫ ಸೇರುವುದರಿಂದ, ವಿಪರೀತ ಖಾರವಾದ, ಮಸಾಲೆಯಿಂದ ಕೂಡಿರುವ ಆಹಾರ ಮತ್ತು ತಂಪಾದ ಆಹಾರಗಳನ್ನು ಒಟ್ಟಿಗೆ ಸೇವನೆ ಮಾಡುವುರಿಂದ, ಆಜೀರ್ಣ, ಹೊಟ್ಟೆಯುಬ್ಬರ, ಬಾಯಿರುಚಿ ಹಾಳಾಗುವುದರೊಂದಿಗೆ ನೆಗಡಿ ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಹಿತಕರವಾದ ಆಹಾರ ಸೇವನೆ ಅತ್ಯಗತ್ಯ. ಜೊತೆಗೆ ತುಳಸಿರಸದಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆಯಲ್ಲಿ ಸಂಚಿತವಾಗಿರುವ ಕಫವು ಕರಗಿ ನೆಗಡಿಯನ್ನು ಕಡಿಮೆಯಾಗುತ್ತದೆ. ಅರಿಶಿನದ ಕೊಂಬನ್ನು ತುಪ್ಪದಲ್ಲಿ ಅದ್ದಿ, ಸುಟ್ಟು ಅದರ ಧೂಪವನ್ನು ಸೇವಿಸುವುದರಿಂದಲೂ ನೆಗಡಿ ಕಡಿಮೆಯಾಗುತ್ತದೆ.

ನೆಗಡಿ, ಕೆಮ್ಮು, ದಮ್ಮು ಇವುಗಳ ಜೊತೆಗೆ ಮೈಕೈ ನೋವು, ತಲೆನೋವುಗಳು ಸಾಮಾನ್ಯ. ಅಗ ಜೀರ್ಣಕ್ಕೆ ಸುಲಭವಾಗುವ, ಅಲ್ಪಾಹಾರ ಸೇವನೆ, ಸಮಯಕ್ಕೆ ಸರಿಯಾಗಿ ಸುಖವಾದ ನಿದ್ರೆ, ಬಿಸಿನೀರನ್ನು ಆಗಾಗ ಕುಡಿಯುವುದು, ಹೀಗೆ ನಮ್ಮ ದಿನಚರಿಯನ್ನು ಸರಿಮಾಡಿಕೊಂಡಾಗ ಆ ಎಲ್ಲಾ ರೋಗಗಳೂ ಹತೋಟಿಯಲ್ಲಿರುತ್ತವೆ. ಅತಿಯಾದಾಗ ಸೂಕ್ತವಾದ ವೈದ್ಯರ ಸೂಕ್ತವಾದ ಸಲಹೆ ಅನಿವಾರ್ಯ.

ಇನ್ನು ಚಳಿಗಾಲ ಬಂತೆಂದರೆ ಅನೇಕರಿಗೆ ಗಂಟು ನೋವು ಪ್ರಾರಂಭವಾಗುತ್ತದೆ. ಇದೇ ತಂಪಿನ ವಾತಾವರಣದಿಂದಾಗಿ ಗಂಟುಗಳಲ್ಲಿ ಕಫವು ಗಟ್ಟಿಯಾಗಿ, ವಾಯುವಿನ ಸಂಚಾರಕ್ಕೆ ಎಂದರೆ ಗಂಟುಗಳ ಚಲನೆಗೆ ತೊಂದರೆ ಕೊಟ್ಟಾಗ ತೀವ್ರವಾದ ಗಂಟುವೋವು ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ ಬರುವ ಗಂಟು ನೋವಿಗೆ ಎಣ್ಣೆ ಹಚ್ಚಿ ವ್ಯಾಯಾಮವನ್ನು ನಿರಂತರವಾಗಿ ಮಾಡುವುದರಿಂದ ತಡೆಗಟ್ಟಬಹುದು. ಅಲ್ಲದೆ ಶುಂಠಿಯನ್ನು ಅರೆದು ಗಂಟುಗಳಿಗೆ ಲೇಪ ಹಾಕುವುದರಿಂದಲೂ, ಗಂಟುಗಳಿಗೆ ಬಿಸಿನೀರ ಶಾಖ ಕೊಡುವುದರಿಂದಲೂ ಗಂಟುನೋವು ಕಡಿಮೆ ಆಗುತ್ತದೆ.

ಇದೆಲ್ಲಾ ತೊಂದರೆಗಳು ಪ್ರಾರಂಭವಾದಾಗ ಮನೆಯಲ್ಲಿಯೇ ಮಾಡಬಹುದಾದ ಪ್ರಥಮ ಚಿಕಿತ್ಸೆಗಳಾದರೂ ತೊಂದರೆ ಹೆಚ್ಚಾದಾಗ ವೈದ್ಯರ ಸಲಹೆಯಂತೆ ಮುಂದುವರಿಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.