ADVERTISEMENT

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ: ಇಲ್ಲಿದೆ ಈ ಬಾರಿಯ ವಿಷಯ ವಸ್ತು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:57 IST
Last Updated 10 ಅಕ್ಟೋಬರ್ 2025, 6:57 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಆರೋಗ್ಯ ಎಂದರೆ, ದೈಹಿಕವಾಗಿ ಆರೋಗ್ಯವಾಗಿರುವುದು ಮಾತ್ರವಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ಇಂದಿನ ಕಾಲದಲ್ಲಿ ಹೆಚ್ಚು ಮಂದಿ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡುತ್ತಿದ್ದು, ಮಾನಸಿಕ ಆರೋಗ್ಯದ ಮಹತ್ವವನ್ನು ಅಲಕ್ಷ್ಯ ಮಾಡುತ್ತಿದ್ದಾರೆ. ನಿಜವಾದ ಆರೋಗ್ಯ ಎಂದರೆ ದೇಹದ ಶಕ್ತಿಯಷ್ಟೇ ಅಲ್ಲ, ಮನಸ್ಸಿನ ಶಾಂತಿ ಹಾಗೂ ಸಮಾಜದೊಡನೆ ಹೊಂದಾಣಿಕೆಯುಳ್ಳ ಜೀವನವೂ ಆಗಿದೆ.

ಆಧುನಿಕ ಯುಗದಲ್ಲಿ ತಂತ್ರಜ್ಞಾನ, ಸ್ಪರ್ಧೆ, ಕೆಲಸದ ಒತ್ತಡ, ಹಾಗೂ ಜೀವನದ ಬೇಡಿಕೆಗಳು ನಿರಂತರವಾಗಿ ಹೆಚ್ಚಾಗುತ್ತವೆ. ಈ ವೇಗಕ್ಕೆ ಹೊಂದಿಕೊಳ್ಳಲು ವ್ಯಕ್ತಿ ಶಾರೀರಿಕವಾಗಿ ಚುರುಕಾಗಿದ್ದರೂ, ಮನಸ್ಸು ನಿರಂತರವಾಗಿ ಚಿಂತೆ, ಆತಂಕ, ಒತ್ತಡ ಹಾಗೂ ಭಯಗಳಿಂದ ತುಂಬಿಕೊಂಡಿರುತ್ತದೆ.

ADVERTISEMENT

ಮಾನಸಿಕ ಆರೋಗ್ಯದ ಕೊರತೆಯಿಂದ ಇಂದು ಹಲವರಲ್ಲಿ ಖಿನ್ನತೆ, ಆತ್ಮವಿಶ್ವಾಸದ ಕೊರತೆ, ಕೋಪ, ನಿರಾಶೆ, ಒಂಟಿತನದಂತಹ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳು ಕೇವಲ ವ್ಯಕ್ತಿಯಲ್ಲದೇ, ಅವರ ಕುಟುಂಬ ಮತ್ತು ಸಮಾಜದ ಮೇಲೆಯೂ ಪರಿಣಾಮ ಬೀರುತ್ತವೆ. ಆದ್ದರಿಂದ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜೀವನದ ಅತ್ಯಂತ ಅಗತ್ಯವಾದ ಅಂಶವಾಗಿದೆ.

ಇಂದು ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಈ ದಿನವನ್ನು ವಿಶ್ವದಾದ್ಯಂತ ಮಾನಸಿಕ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳಲು, ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮನೋವೈಕಲ್ಯ ಹೊಂದಿರುವವರ ಕಡೆ ಸಹಾನುಭೂತಿ ಬೆಳೆಸಲು ಆಚರಿಸಲಾಗುತ್ತದೆ.

ಈ ವರ್ಷದ (2025) ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ವಿಷಯ ವಸ್ತು:

‘ಆಪತ್ತುಗಳು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯದ ಸೇವೆಗಳ ಲಭ್ಯತೆ‘ ಎಂಬುದಾಗಿದೆ.

ಈ ವಿಷಯ ನಮಗೆ ಮುಖ್ಯವಾದ ಅರ್ಥ ಹೇಳುತ್ತದೆ, ಯುದ್ಧ, ನೆರೆ, ಭೂಕಂಪ, ರೋಗ, ಅಥವಾ ಬೇರೆ ತುರ್ತು ಪರಿಸ್ಥಿತಿಗಳಲ್ಲಿ ಜನರ ಮನಸ್ಸು ತುಂಬಾ ಕಂಗೆಡುವುದು ಸಹಜ. ಅಂಥ ಸಮಯದಲ್ಲಿ ಜನರಿಗೆ ಮಾನಸಿಕ ಧೈರ್ಯ ನೀಡುವ ಮಾತು, ಸಹಾಯ ಹಾಗೂ ಮಾನಸಿಕ ಆರೋಗ್ಯ ಸೇವೆಗಳು ಸಿಗಬೇಕು.

ವಿಶ್ವ ಆರೋಗ್ಯ ಸಂಸ್ಥೆಯು ಹೇಳುವಂತೆ, ಯಾವುದೇ ಆಪತ್ತಿನ ಸಮಯದಲ್ಲಿ ದೇಹದ ಸಹಾಯ ಮಾತ್ರವಲ್ಲ, ಮನಸ್ಸಿನ ಆರೈಕೆಯೂ ಬಹಳ ಮುಖ್ಯ. ಏಕೆಂದರೆ ಮನಸ್ಸು ಶಾಂತವಾಗಿದ್ದರೆ ಮಾತ್ರ ನಾವು ಜೀವನವನ್ನು ಮತ್ತೆ ಸುಂದರವಾಗಿ ಕಟ್ಟಿಕೊಳ್ಳಬಹುದು. ಮನಸ್ಸಿನ ಆರೈಕೆಯೇ ಶಾಂತಿ ಮತ್ತು ಸಮಾಜದ ಬಲವಾದ ಆಧಾರವಾಗಿರುತ್ತದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.