ADVERTISEMENT

ಧನ್ ತೇರಸ್ : ಈ ದಿನದಂದು ಚಿನ್ನ ಖರೀದಿಸಿದರೆ ಅದೃಷ್ಟಲಕ್ಷ್ಮಿ ಒಲಿಯುತ್ತಾಳೆ

ಉಮಾ ಅನಂತ್
Published 20 ಅಕ್ಟೋಬರ್ 2025, 9:23 IST
Last Updated 20 ಅಕ್ಟೋಬರ್ 2025, 9:23 IST
   

ಧನ್‌ತೆರಾಸ್.. ಅಥವಾ ಧನತ್ರಯೋದಶಿ, ಇದು ಬಂಗಾರ ಖರೀದಿಗೆ ಶುಭ ಹಾಗೂ ಸೂಕ್ತವಾದ ದಿನ. ಪ್ರತಿ ವರ್ಷ ಅಕ್ಷಯ ತೃತೀಯದಂದು ದಕ್ಷಿಣ ಭಾರತದ ಜನರು ಚಿನ್ನ ಖರೀದಿಗೆ ಉತ್ತಮ ದಿನ ಎಂದು ಕೊಂಡುಕೊಳ್ಳುತ್ತಾರೋ ಹಾಗೆಯೇ ಉತ್ತರ ಭಾರತದ ಜನರು ಧನ್ ತೇರಸ್ ದಿನ ಹಳದಿ ಲೋಹ ಖರೀದಿಸುತ್ತಾರೆ. ಕಾರ್ತೀಕ ಮಾಸದ ಕೃಷ್ಣಪಕ್ಷದ 13ನೇ ದಿನ ಬರುವ ಈ ಹಬ್ಬದಂದು ಧನಲಕ್ಷ್ಮಿ ಪೂಜೆಯೇ ವಿಶೇಷ.

ದೀಪಾವಳಿಗೂ ಮುನ್ನವೇ ಬರುವ ಈ ಧನ್ ತೇರಸ್ ದಿನ ಚಿನ್ನವಲ್ಲದೆ ಅಕ್ಕಿಯನ್ನೂ ಖರೀದಿ ಮಾಡಬಹುದು. ಇಲ್ಲವೇ ಬ್ಯಾಂಕ್‌ ಖಾತೆಗೆ ಹಣವನ್ನು ಜಮಾ ಮಾಡಬಹುದು. ಅಶಕ್ತರಿಗೆ ಅನ್ನ ಹಾಗೂ ಬಟ್ಟೆ ದಾನ ಮಾಡಬಹುದು. ಬಡಮಕ್ಕಳ ಶಾಲೆ ಶುಲ್ಕ ಕಟ್ಟಲು ಹಣ ನೀಡಬಹುದು. ಇಂತಹ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಕುಟುಂಬದಲ್ಲಿ ಸಮೃದ್ಧಿ ಹಾಗೂ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

2025ರ ಈ ವರ್ಷ ಅಕ್ಟೋಬರ್ 18ರಂದು ಧನ್ ತೇರಸ್ ಬಂದಿದೆ. ಆದರೆ ದೀಪಾವಳಿ ಹಬ್ಬಕ್ಕೂ, ಚಿನ್ನದ ಹಬ್ಬಕ್ಕೂ ನಂಟು ಇರುವುದರಿಂದ ಮುಂದಿನ ಮೂರು ದಿನಗಳಲ್ಲಿ ಚಿನ್ನ ಖರೀದಿಸಲು ಉತ್ತಮವಾದ ಕಾಲ ಎಂಬುದು ತಜ್ಞರ ಅಭಿಮತ.

ADVERTISEMENT

ದೀಪಾವಳಿ ಹಬ್ಬಕ್ಕೆ ನಾಂದಿ ಹಾಡುವ ಸಂದೇಶವನ್ನೂ ಧನ್ ತೇರಸ್ ಕೊಡುತ್ತದೆ. ಹೀಗಾಗಿ ಈ ಹಬ್ಬಕ್ಕೆ ಧಾರ್ಮಿಕ ಮಹತ್ವವೂ ಇದೆ. ಸಮಯವನ್ನು ನೋಡಿಕೊಂಡು ಚಿನ್ನ ಖರೀದಿಸಿ ಮನೆಗೆ ತಂದ ಬಳಿಕ ಆ ಚಿನ್ನಕ್ಕೆ ಪೂಜೆ ಮಾಡಲಾಗುತ್ತದೆ.

ಈ ಚಿನ್ನದ ಹಬ್ಬವನ್ನು ಉತ್ತರ ರಾಜ್ಯಗಳಾದ ಒರಿಸ್ಸಾ, ಗುಜರಾತ್, ಪಂಜಾಬ್ ಮತ್ತು ನೆರೆಯ ನೇಪಾಳದ ಜನರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಈ ದಿನ ಚಿನ್ನ ಖರೀದಿಸಿದರೇ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಜೊತೆಗೆ ಅದೃಷ್ಟಲಕ್ಷ್ಮಿ ಒಲಿಯುತ್ತಾಳೆ ಎಂಬುದು ಜನರ ನಂಬಿಕೆಯೂ ಆಗಿದೆ.

ಪೌರಾಣಿಕ ಹಿನ್ನೆಲೆ

ಧನ್ ತೇರಸ್ ಆಚರಣೆಗೆ ಪೌರಾಣಿಕ ಹಿನ್ನೆಲೆ ಇದೆ. ಈ ದಿನ ಧನ್ವಂತರಿ ಜಯಂತಿಯೂ ಹೌದು. ಧನ್ವಂತರಿ ಎಂದರೆ ವಿಷ್ಣುವಿನ ಅವತಾರ. ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಇಂದ್ರನ ಅಸಭ್ಯ ವರ್ತನೆಯಿಂದಾಗಿ ಮಹರ್ಷಿ ದೂರ್ವಾಸರು ಮೂರು ಲೋಕಗಳಿಗೆ ಅಮರವಾಗುವಂತೆ ಶಾಪ ನೀಡಿದ್ದರು. ಇದರಿಂದಾಗಿ ಅಷ್ಟಲಕ್ಷ್ಮಿ ಭೂಮಿಯಿಂದ ದೂರ ಹೋಗುತ್ತಾಳೆ. ಇದರಿಂದ ಗಾಬರಿಯಾದ ದೇವತೆಗಳು ಮೂರು ಲೋಕಗಳಲ್ಲಿ ಶ್ರೀಗಳನ್ನು ಸ್ಥಾಪಿಸಲು, ತ್ರಿದೇವರ ಮೊರೆ ಹೋಗಿ ಬಿಕ್ಕಟ್ಟನ್ನು ಹೋಗಲಾಡಿಸಲು ಮನವಿ ಮಾಡಿದರು. ಈ ವೇಳೆಯಲ್ಲಿ ಶಿವನು ದೇವತೆಗಳಿಗೆ ಸಮುದ್ರ ಮಂಥನವನ್ನು ಸೂಚಿಸಿದನು. ಅದನ್ನು ದೇವತೆಗಳು ಮತ್ತು ರಾಕ್ಷಸರು ಸಂತೋಷದಿಂದ ಸ್ವೀಕರಿಸಿದರು.

ಸಾಗರವನ್ನು ಮಂಥನ ಮಾಡುವಾಗ ಮಂದಾರಚಲ ಪರ್ವತವನ್ನು ಮುಖ್ಯವಾಗಿಸಿಕೊಂಡು, ಸರ್ಪರಾಜನಾದ ವಾಸುಕಿಯನ್ನು ಹಗ್ಗವಾಗಿಸಲಾಯಿತು. ಈ ವೇಳೆಯಲ್ಲಿ ವಾಸುಕಿಯ ಮುಖವನ್ನು ರಾಕ್ಷಸರಿಗೆ ನೀಡಲಾಯಿತು ಹಾಗೂ ಬಾಲವನ್ನು ದೇವತೆಗಳು ಹಿಡಿದು ಮಂಥಿಸಲು ಪ್ರಾರಂಭಿಸಿದರು. ಸಾಗರದ ಮಂಥನದಿಂದ ಹದಿನಾಲ್ಕು ಪ್ರಮುಖ ರತ್ನಗಳು ಉತ್ಪತ್ತಿಯಾದವು. ಅದರಲ್ಲಿ ಭಗವಂತ ಧನ್ವಂತರಿಯು ಹದಿನಾಲ್ಕನೆಯ ರತ್ನದ ರೂಪದಲ್ಲಿ ಕಾಣಿಸಿಕೊಂಡನು. ಅವನು ತನ್ನ ಕೈಯಲ್ಲಿ ಅಮೃತದ ಮಡಕೆಯನ್ನು ಹಿಡಿದಿದ್ದನು. ಭಗವಾನ್ ವಿಷ್ಣುವು ಅವನನ್ನು ದೇವತೆಗಳ ವೈದ್ಯನಾಗಿ ಸಸ್ಯಗಳು ಮತ್ತು ಔಷಧಿಗಳ ಅಧಿಪತಿಯಾಗಿ ನೇಮಿಸಿದನು. ಇದರಿಂದಾಗಿ ಮರ-ಗಿಡಗಳಿಗೂ ಚಿಕಿತ್ಸಾ ಶಕ್ತಿ ದೊರಕಿತು. ಹೀಗಾಗಿ ಆರೋಗ್ಯದ ದೇವತೆಯಾಗಿ ಧನ್ವಂತರಿಯನ್ನು ಪೂಜಿಸಲಾಗುತ್ತಿದೆ ಎಂದು ಪೌರಾಣಿಕ ಕಥೆಗಳು ಹೇಳುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.