ADVERTISEMENT

ಚೆಂಬೆಳಗು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:30 IST
Last Updated 25 ನವೆಂಬರ್ 2019, 19:30 IST
ರವಿ ಹೊಮ್ಮಿಸಿದ ಹೊನ್ನಿನ ಬೆಳಕಿಗೆ ರಂಗೆೇರಿದ ಕೆರೆಯ ಅಂಗಳದಲ್ಲಿ ದಿನದ ಕಾಯಕಕ್ಕೆ ತೆಪ್ಪದಲ್ಲಿ ಸಾಗುತ್ತಿರುವ ಮೀನುಗಾರ
ರವಿ ಹೊಮ್ಮಿಸಿದ ಹೊನ್ನಿನ ಬೆಳಕಿಗೆ ರಂಗೆೇರಿದ ಕೆರೆಯ ಅಂಗಳದಲ್ಲಿ ದಿನದ ಕಾಯಕಕ್ಕೆ ತೆಪ್ಪದಲ್ಲಿ ಸಾಗುತ್ತಿರುವ ಮೀನುಗಾರ   

ಹುಲಿಯೂರು ದುರ್ಗದಿಂದ ಮಾಗಡಿ ರಸ್ತೆಯಲ್ಲಿರುವ ದೀಪಾಂಬುದಿ ಕೆರೆಯ ಮುಂಜಾವು ನಿಜಕ್ಕೂ ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ’ ಪದ್ಯದ ಸಾಕ್ಷಾತ್ ದರ್ಶನ ಮಾಡಿಸುತ್ತದೆ. ಆದರೆ ನಸುಕಿಗೇ ದೋಣಿಯೇರಿ ಗಾಳ ಹಿಡಿದು, ತೆಪ್ಪ ಏರಿ ಹೊರಟ ಮೀನುಗಾರನಿಗೆ ಕೊಳದ ಮೇಲೆ ಮಿಂಚುವ ಚಿನ್ನದ ಬಣ್ಣಕ್ಕಿಂತ ತಳದಲ್ಲಿ ಬಳುಕಾಡುವ ಬಗೆಬಗೆ ಮೀನುಗಳ ಮೇಲೇ ಗಮನ. ಸೌಂದರ್ಯ ಸವಿಯುವುದರಲ್ಲಿ ಮೈಮರೆತರೆ ತುಂಬುವ ಹೃದಯ ಕೆಳಗೇ ಇರುವ ಹಸಿವ ಹೊಟ್ಟೆ ಮಾತಾಡತೊಡಗುತ್ತದಲ್ಲವೇ?

ಆಹಾ! ಚಿನ್ನದ ನೀರಿನ ಎರಕದ ಮೇಲೆ/ರವಿಬಿಡಿಸಿದ ಹೊಳೆಯುವ ರಂಗೋಲಿ/ಕನ್ನಡಿ ಕೊಳದಲಿ ಬಿಂಬವ ನೋಡಿ/ನಾಚಿಕೆ ಮೂಡಿತೆ ಮುಗಿಲಿನ ಮನದಲ್ಲಿ...

‘ಕೆಂಪಾದವೋ ಎಲ್ಲ ಕೆಂಪಾದವೋ’ ಹಾಡು ಸಾಕ್ಷಾತ್ಕರಿಸುವ ಆ ಸುಂದರ ಗಳಿಗೆಯಲ್ಲಿ ಎಂಥ ಕಲ್ಲುಹೃದಯದಲ್ಲಿಯೂ ಕಾವ್ಯ ಸಾಲುಗಳು ಚಿಗುರೊಡೆಯದೇ ಇರಲಾರದು. ನಿಸರ್ಗವೇ ಜೀವಂತಕಾವ್ಯವನ್ನು ಬರೆಯುವ ಅಮೋಘ ದಿವ್ಯಕ್ಷಣವದು. ರಾತ್ರಿಯ ನೀರವ ಕತ್ತಲಲ್ಲಿ ಚಂದ್ರನ ಬೆಳಕಲ್ಲಿ ತಣ್ಣಗೇ ಮಲಗಿದ್ದ ಕೆರೆ ಬೆಳಗಿನ ಹೊತ್ತಿಗೆ ಲಗುಬಗೆಯಲ್ಲಿ ಏರಿಬರುವ ರವಿಕಿರಣದ ನವಿರು ಸ್ಪರ್ಶಕ್ಕೆ ಎಚ್ಚೆತ್ತುಕೊಳ್ಳುತ್ತದೆ. ಹೊಂಗಿರಣದಲ್ಲಿ ಮೋರೆ ತೊಳೆದುಕೊಳ್ಳುತ್ತ, ಸುತ್ತಿ ಸುಳಿವ ಗಾಳಿಗೆ ತುಳುಕುವಾಗ ಕೆರೆಯ ಮೈತುಂಬ ಹೊಳೆವ ಮಣಿಗಳ ದೀಪೋತ್ಸವ. ‘ದೀಪಾಂಬುದಿ’ ಎಂಬ ಹೆಸರು ಬಂದಿದ್ದು ಸುಮ್ಮನೆ ಅಲ್ಲ!

ADVERTISEMENT

ಹುಲಿಯೂರು ದುರ್ಗದಿಂದ ಮಾಗಡಿ ರಸ್ತೆಯಲ್ಲಿರುವ ದೀಪಾಂಬುದಿ ಕೆರೆಯ ಮುಂಜಾವು ನಿಜಕ್ಕೂ ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ’ ಪದ್ಯದ ಸಾಕ್ಷಾತ್ ದರ್ಶನ ಮಾಡಿಸುತ್ತದೆ. ಆದರೆನಸುಕಿಗೇ ದೋಣಿಯೇರಿ ಗಾಳ ಹಿಡಿದು, ತೆಪ್ಪ ಏರಿ ಹೊರಟ ಮೀನುಗಾರನಿಗೆ ಕೊಳದ ಮೇಲೆ ಮಿಂಚುವ ಚಿನ್ನದ ಬಣ್ಣಕ್ಕಿಂತ ತಳದಲ್ಲಿ ಬಳುಕಾಡುವ ಬಗೆಬಗೆ ಮೀನುಗಳ ಮೇಲೇ ಗಮನ. ಸೌಂದರ್ಯ ಸವಿಯುವುದರಲ್ಲಿ ಮೈಮರೆತರೆ ತುಂಬುವ ಹೃದಯ ಕೆಳಗೇ ಇರುವ ಹಸಿವ ಹೊಟ್ಟೆ ಮಾತಾಡತೊಡಗುತ್ತದಲ್ಲವೇ?

ತುಸು ಮಧ್ಯಾಹ್ನವಾದರೆ ಕೊಳದ ನೀರಿಗೆ ಬೇರೆಯದೇ ಹೊಳಪು. ಕೆಂಗಿರಣದ ಜೊತೆಗಿನ ಚೆನ್ನಾಟ ಮುಗಿದು ತುಸು ಗಂಭೀರವಾಗಿ ಮುಗಿಲ ನಿಟ್ಟಿಸುತ್ತವೆ. ಆಗಲೇ ಎಲ್ಲೆಲ್ಲಿಂದಲೋ ಈ ಕೆರೆಯ ಕರೆಗೆ ಓಗೊಟ್ಟು ಬರುವ ಹಕ್ಕಿಗಳ ಚಿಲಿಪಿಲಿಗಳಿಂದ ಮೈದುಂಬಿಕೊಳ್ಳುತ್ತದೆ. ಕೆರೆಯ ಒಡಲು ನಮಗೆ ಸೌಂದರ್ಯದ ಖನಿ, ಅವುಗಳಿಗೆ ಭಕ್ಷ್ಯ ಭೋಜನದ ತಟ್ಟೆಯಾಗಿ ಕಾಣಿಸುತ್ತಿರಲಿಕ್ಕೂ ಸಾಕು!

ತುಮಕೂರು ಜಿಲ್ಲೆ ಹುಲಿಯೂರು ದುರ್ಗದಿಂದ ಆರು ಕಿ.ಮೀ ದೂರದಲ್ಲಿ ಎಡಕ್ಕೆ ದೀಪಾಂಬುದಿ ಕಾಳಿಕಾಂಬ ದೇವಸ್ಥಾನದ ಹೆಬ್ಬಾಗಿಲು ಸಿಗುತ್ತದೆ. ಹೆಬ್ಬಾಗಿಲಿನಿಂದ ಒಂದರ್ಧ ಕಿಲೋಮೀಟರು ಒಳಬಂದರೆ ದೇವಿಯ ದೇವಸ್ಥಾನವಿದೆ. ದೇವಾಲಯದ ಬಲಭಾಗಕ್ಕೆ ವಿಶಾಲವಾಗಿ ಹರಡಿಕೊಂಡಿದೆ ದೀಪಾಂಬುದಿ ಕೆರೆ. ಸುತ್ತಮುತ್ತ ಒಂದಷ್ಟು ಚದುರಿದಂತೆ ಕಿರುಅರಣ್ಯವಿದೆ, ಬೆಟ್ಟ ಗುಡ್ಡಗಳಿವೆ. ಕೆಲವೊಂದು ಬೆಟ್ಟಗಳಲ್ಲಿ ಸೈಜುಗಲ್ಲು, ಜಲ್ಲಿಕಲ್ಲುಗಳಿಗಾಗಿ ಗಣಿಗಾರಿಕೆಯೂ ನಡೆಯುತ್ತಿದೆ. ಬೇಸಿಗೆಯ ದಿನಗಳಲ್ಲೂ ಇಲ್ಲಿನ ನೀರು ಪೂರ್ತಿಯಾಗಿ ಬತ್ತಿಹೋಗುವುದಿಲ್ಲ. ಹಾಗಾಗಿಯೇ, ಇಲ್ಲಿ ವರ್ಷ ಪೂರ್ತಿ ‘ಹಸಿರೋತ್ಸವ’.

ಸೂರ್ಯೋದಯದ ಸೌಂದರ್ಯ ಸವಿಯಲು ಸೊಗಸಾದ ಸ್ಥಳವಿದು. ಮೋಡಗಳ ಚೆಲ್ಲಾಟ, ಮೋಡಗಳ ಮರೆಯಲ್ಲಿ ಮೂಡುವ ರವಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರ, ಮೋಡಗಳಿಲ್ಲದ ಸಮಯದಲ್ಲಿ ಕೆರೆಯಂಗಳಕ್ಕೆ ಬಾಚಿಕೊಂಡಷ್ಟೂ ಮುಗಿಯದಷ್ಟು ಹೊಂಬಣ್ಣವನ್ನು ರವಿ ಬಿಸುಟುವ ಪರಿಯ ವೀಕ್ಷಣೆಯಲ್ಲಿ ನಿಂತರೆ ಸಮಯ ಸರಿಯುವುದೇ ತಿಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.