
ಪ್ರಾತಿನಿಧಿಕ ಚಿತ್ರ
ಶಿವನು ಯೋಗಿಗಳಿಗೆ ಮಹಾಯೋಗಿ; ಗೃಹಸ್ಥರಿಗೆ ಮಹಾಕುಟುಂಬಿ. ಅವನು ಎಲ್ಲ ತಪಸ್ಸುಗಳಿಗೂ ಫಲವನ್ನು ಕೊಡುವವನು. ನಮಿಸಿದ ಭಕ್ತರ ಬೇಡಿಕೆಗಳನ್ನೆಲ್ಲ ಪೂರೈಸುವಷ್ಟು ಅಖಂಡವಾದ ಐಶ್ವರ್ಯಸಂಪನ್ನ. ಇದೇ ಕಾರಣಕ್ಕೆ ಶಿವನ ಆರಾಧನೆ ನಿರಂತರ. ಅದರಲ್ಲೂ ಶಿವರಾತ್ರಿ ಬಂತೆಂದರೆ ಆಲಯಗಳಿಗೆ ತೆರಳಿ ನೀರು, ಹಾಲಿನಭಿಷೇಕ ಮಾಡಿ, ಬಿಲ್ವ ಪತ್ರೆ, ಪುಷ್ಪಗಳಿಂದ ಪೂಜಿಸುತ್ತಾರೆ.
ಈ ಬಾರಿ ಫೆಬ್ರುವರಿ 15ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ಶಿವರಾತ್ರಿಗೆ ಎಲ್ಲಾದರೂ ಒಳ್ಳೆಯ ಜಾಗಕ್ಕೆ ಹೋಗಬೇಕು, ಶಿವನ ದರ್ಶನ ಪಡೆಯಬೇಕು ಎಂದುಕೊಂಡವರಿಗೆ ಇಲ್ಲಿವೆ ವಿವರ...
ಬನವಾಸಿಯ ಮಧುಕೇಶ್ವರ ದೇಗುಲ
ಮಧುಕೇಶ್ವರ ನೆಲೆಸಿರುವ ಬನವಾಸಿ ಶಿವರಾತ್ರಿಯಂದು ಭೇಟಿಗೆ ಉತ್ತಮ ಸ್ಥಳ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನ ಭಕ್ತಿಯ ಸೆಲೆ, ಕಲೆಯ ನೆಲೆ. ಕನ್ನಡದ ಮೊದಲ ರಾಜವಂಶ ಕದಂಬರ ಕೊಡುಗೆಯಾಗಿದೆ.
ದೇವಾಲಯದಲ್ಲಿ ಶೈವಾಗಮ ಪದ್ಧತಿಯಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಶಿವರಾತ್ರಿಯಂದು ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿರಸಿಯಿಂದ ಬನವಾಸಿಗೆ ನೇರವಾಗಿ ಕರ್ನಾಟಕ ಸಾರಿಗೆ ಬಸ್ ವ್ಯವಸ್ಥೆ ಇದೆ.
ಬನವಾಸಿಯ ಬಳಿಯೇ ಇರುವ ಗುಡ್ನಾಪುರದಲ್ಲಿ ಬಂಗಾರೇಶ್ವರ ದೇವಾಲಯವಿದೆ. ಇಲ್ಲಿ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ಪಕ್ಕದಲೇ ಇರುವ ಕೆರೆಯ ಮೂಲಕ ನೀರು ತಂದು ಶಿವಲಿಂಗಕ್ಕೆ ಹಾಕಿ ಪೂಜೆ ಮಾಡಬಹುದು. ಇಲ್ಲಿ ಕದಂಬರ ಕಾಲದ ರಾಣಿ ಅರಮನೆ ಕುರುಹು, ಗುಡ್ನಾಪುರ ಶಾಸನಗಳನ್ನು ಇಲ್ಲಿ ಕಾಣಬಹುದಾಗಿದೆ.
ಶಿವರಾತ್ರಿಯಂದು ಬಾದಾಮಿಯ ಐತಿಹಾಸಿಕ ಮಾಲೆಗಿತ್ತಿ ಶಿವಾಲಯಕ್ಕೆ ಭೇಟಿ ನೀಡಬಹುದು. ಇದರ ಜತೆಗೆ ಪಟ್ಟದಕಲ್ಲಿನಲ್ಲಿ ವಿರೂಪಾಕ್ಷ ದೇವಾಲಯ, ಜಂಬುಲಿಂಗ ದೇವಾಲಯ ಹಾಗೂ ಮಲ್ಲಿಕಾರ್ಜುನ ಮಂದಿರಗಳಿಗೂ ತೆರಳಿ ಶಿವನ ದರ್ಶನ ಪಡೆಯಬಹುದು. ಶಿವಧ್ಯಾನ, ಬಿಲ್ವಾರ್ಚನೆ ಪೂಜೆ, ಭಜನೆಯಲ್ಲಿ ಪಾಲ್ಗೊಳ್ಳಬಹುದು.
ಕೋಲಾರ ಬಳಿಯ ಕೋಟಿಲಿಂಗಕ್ಕೆ ಮಹಾಶಿವರಾತ್ರಿಯಂದು ಭೇಟಿ ನೀಡಬಹುದು. 108 ಅಡಿಗಳ ಬೃಹತ್ ಲಿಂಗ ಮತ್ತು ಅದರ ಮುಂದಿನ ನಂದಿ ವಿಗ್ರಹ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಬೃಹತ್ ಲಿಂಗ ಮತ್ತು ನಂದಿಯನ್ನು ಹೋಲುವ ಸಣ್ಣ ಪ್ರಮಾಣದ ಲಿಂಗವನ್ನು ಇಲ್ಲಿ ಕಾಣಬಹುದು.
ಧರ್ಮಸ್ಥಳದಲ್ಲಿ ಶಿವರಾತ್ರಿಯಂದು ವಿಶೇಷ ಪೂಜೆ ಇರುತ್ತದೆ. ಮಂಜುನಾಥೇಶ್ವರನ ಸನ್ನಿಧಿಯಾದ ಧರ್ಮಸ್ಥಳಕ್ಕೆ ಅಪಾರ ಸಂಖ್ಯೆಯ ಜನರು ಭೇಟಿ ನೀಡುತ್ತಾರೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ ಬಳಿಯ ಸೋಂದಾ ಕ್ಷೇತ್ರದ ಶಾಲ್ಮಲೆಯ ಒಡಲಲ್ಲಿ ಸಹಸ್ರಾರು ಲಿಂಗಗಳಿರುವ ಕಾರಣಕ್ಕೆ ಈ ಸ್ಥಳಕ್ಕೆ ಸಹಸ್ರಲಿಂಗ ಕ್ಷೇತ್ರ ಎಂದು ಕರೆಯಲಾಗುತ್ತದೆ. ಮಹಾಶಿವರಾತ್ರಿಯ ದಿನ ಇಲ್ಲಿನ ಶಿವಲಿಂಗಗಳಿಗೆ ಪೂಜಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತಾರೆ ಎನ್ನುವ ನಂಬಿಕೆಯಿದೆ.
ವಿರೂಪಾಕ್ಷ ನೆಲೆಸಿರುವ ಹಂಪಿ, ಶಿವರಾತ್ರಿಯ ದಿನ ಭೇಟಿಗೆ ಉತ್ತಮ ಜಾಗವಾಗಿದೆ. ತುಂಗಾ ನದಿಯಲ್ಲಿ ಸ್ನಾನ ಮಾಡಿ, ವಿರೂಪಾಕ್ಷ ದೇಗುಲದವರೆಗೆ ಬರಿಗಾಲಲ್ಲಿ ನಡೆದು ಬಂದು ಅನೇಕರು ವಿರೂಪಾಕ್ಷನ ದರ್ಶನ ಪಡೆಯುತ್ತಾರೆ.
ಆತ್ಮಲಿಂಗ ಮುಟ್ಟಿ ಶಿವನ ದರ್ಶನ ಪಡೆಯಬಹುದಾದ ಜಾಗ ಗೋಕರ್ಣ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅರಬ್ಬಿ ಸಮುದ್ರದ ದಂಡೆಯ ಮೇಲಿರುವ ಗೋಕರ್ಣ ಮಹಾಬಲೇಶ್ವರನ ಸನ್ನಿಧಿ. ಇದು ಪುರಾಣ ಪ್ರಸಿದ್ಧ ಕ್ಷೇತ್ರ. ಶಿವನ ಪಂಚ ಕ್ಷೇತ್ರಗಳಲ್ಲಿ ಒಂದು. ಎರಡು ನದಿಗಳ ಮಧ್ಯದ ಈ ಭೂಪ್ರದೇಶ ಗೋವಿನ ಕಿವಿಯ ಆಕಾರದಲ್ಲಿ ಇರುವುದರಿಂದ ಇದಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ. ಮಹಾಬಲೇಶ್ವರ ದೇವಸ್ಥಾನದಲ್ಲಿ ಪರಶಿವನ ಆತ್ಮಲಿಂಗ ಇದೆ. ಜಾತಿ- ಮತಗಳ ಬೇಧವಿಲ್ಲದೆ ಎಲ್ಲರೂ ಗರ್ಭಗುಡಿಯೊಳಕ್ಕೆ ಹೋಗಿ ಆತ್ಮಲಿಂಗವನ್ನು ಮುಟ್ಟಿ ನಮಸ್ಕರಿಸುವ ಅವಕಾಶವಿದೆ. ಹೀಗಾಗಿ ಶಿವರಾತ್ರಿಯಂದು ಶಿವನ ದರ್ಶನಕ್ಕೆ ಉತ್ತಮ ಸ್ಥಳವಾಗಿದೆ.
ಬೆಂಗಳೂರಿನಲ್ಲಿ ಅನೇಕ ಶಿವ ದೇವಾಲಯಗಳಿದ್ದು, ಶಿವರಾತ್ರಿಯಂದು ಭೇಟಿ ನೀಡಿ ಪೂಜೆ ಸಲ್ಲಿಸಬಹುದಾಗಿದೆ. ಬೆಂಗಳೂರಿನ ಇತಿಹಾಸ ಪ್ರಸಿದ್ಧ ಗವಿಗಂಗಾಧರ ದೇವಸ್ಥಾನ, ಕಾಡು ಮಲ್ಲೇಶ್ವರ, ಶಿವೋಮ್ ದೇಗುಲ, ಚಿಕ್ಕಬಳ್ಳಾಪುರ ಬಳಿಯ ಆದಿಯೋಗಿ ಸ್ಥಳಕ್ಕೆ ಭೇಟಿ ನೀಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.