
ವಿದೇಶ ಪ್ರಯಾಣ ಮಾಡಲು ಯೋಜನೆ ಮಾಡುತ್ತಿದ್ದೀರಾ? ಬೆಂಗಳೂರಿನಿಂದ ಸುಲಭವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಈ ಮೂರು ದೇಶಗಳಿಗೆ ಪ್ರಯಾಣ ಮಾಡಬಹುದು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಹಾಗಾದರೆ ಆ ದೇಶಗಳು ಯಾವುವು, ಅಲ್ಲಿಗೆ ತಲುಪುವುದು ಹೇಗೆ ಹಾಗೂ ಎಷ್ಟು ಹಣ ಬೇಕಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಭಿನ್ನ ಸಂಸ್ಕೃತಿ ಹಾಗೂ ಸುಂದರ ನೋಟಕ್ಕೆ ಹೆಸರುವಾಸಿಯಾಗಿರುವ ಒಮಾನ್, ಥಾಯ್ಲೆಂಡ್ ಮತ್ತು ಮಲೇಷ್ಯಾ ದೇಶಗಳಿಗೆ ಕೈಗೆಟುಕುವ ವಿಮಾನ ದರದಲ್ಲಿ ಭೇಟಿ ನೀಡಬಹುದಾಗಿದೆ.
ಒಮಾನ್:
ಒಮಾನ್ ಪಶ್ಚಿಮ ಏಷ್ಯಾದ ಅರೇಬಿಯನ್ ಪೆನಿನ್ಸುಲಾ ಆಗ್ನೇಯ ಕರಾವಳಿಯಲ್ಲಿರುವ ದೇಶವಾಗಿದೆ. ಇಲ್ಲಿ ಪ್ರಮುಖವಾಗಿ ಒಂಟೆ ಸವಾರಿ, 4x4 ಸಾಮರ್ಥ್ಯದ ವಾಹನದಲ್ಲಿ ಕುಳಿತು ಸಫಾರಿಯ ಜೊತೆಗೆ ಮರುಭೂಮಿಯನ್ನು ನೋಡುವುದು ಪ್ರಮುಖ ಆಕರ್ಷಣೆಯಾಗಿದೆ.
ಐತಿಹಾಸಿಕ ಕೋಟೆಯಾದ ನಿಜ್ವಾ ಕೋಟೆಗೆ ಭೇಟಿ ನೀಡುವುದು ಸುಂದರ ಅನುಭವ ನೀಡುತ್ತದೆ. ಪ್ರಶಾಂತವಾದ ಕುರುಮ್ ಬೀಚ್‌ನಲ್ಲಿ ವಿಶ್ರಾಂತಿ ಪಡೆಯಬಹುದು. ಜೊತೆಗೆ ಸುಂದರವಾದ ಹಜಾರ್ ಪರ್ವತಗಳನ್ನು ಏರಬಹುದು.
ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣ: ಬೆಂಗಳೂರಿನಿಂದ ಮಸ್ಕತ್‌ಗೆ ತಲುಪಲು ವಿಮಾನ ದರ ಸುಮಾರು ₹6,154 ಗಳಿಂದ ಪ್ರಾರಂಭವಾಗುತ್ತವೆ. ಭಾರತೀಯರಿಗೆ ಇ-ವೀಸಾ ಲಭ್ಯವಿದೆ.
ಥಾಯ್ಲೆಂಡ್:
ಥಾಯ್ಲೆಂಡ್ ತನ್ನ ಸುಂದರವಾದ ಕಡಲತೀರ, ಶ್ರೀಮಂತ ಸಂಸ್ಕೃತಿ, ಭವ್ಯವಾದ ದೇವಾಲಯ ಹಾಗೂ ವಿಶಿಷ್ಟ ಆಹಾರ ಪದ್ಧತಿಗೆ ಹೆಸರು ವಾಸಿಯಾಗಿದೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಬೀದಿ ಮಾರುಕಟ್ಟೆಗಳು ಮತ್ತು ವಾಟ್ ಫೋ ನಂತಹ ಪ್ರಸಿದ್ಧ ಬೌದ್ಧ ದೇವಾಲಯಗಳು ಅಲ್ಲಿನ ಧಾರ್ಮಿಕ ಪರಂಪರೆಯನ್ನು ಸಾರುತ್ತವೆ.
ಇಲ್ಲಿನ ಅದ್ಭುತ ಕಡಲ ತೀರಗಳಲ್ಲಿ ವಿಶ್ರಾಂತಿ ಪಡೆಯಬಹುದು. ಚಿಯಾಂಗ್ ಮಾಯ್‌ನಲ್ಲಿನ ಜಲ ಕ್ರೀಡೆಗಳು, ಸ್ನಾರ್ಕ್ಲಿಂಗ್ ಹಾಗೂ ಆನೆಯ ಅಭಯಾರಣ್ಯಗಳನ್ನು ನೋಡಬಹುದು. ಇಲ್ಲಿನ ಸಂಸ್ಕೃತಿ, ಪಾಕಪದ್ಧತಿ ಮತ್ತು ಕಡಲ ತೀರಗಳು ಮೋಜು ಮಸ್ತಿಗೆ ಹೇಳಿ ಮಾಡಿಸಿದ ಸ್ಥಳವಾಗಿವೆ.
ಇಲ್ಲಿಗೆ ತಲುಪಲು ವಿಮಾನ ದರ ₹6,600 ರಿಂದ ಪ್ರಾರಂಭವಾಗುತ್ತವೆ. ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶವಿದೆ.
ಮಲೇಷ್ಯಾ:
ಮಲೇಷ್ಯಾವು ಆಧುನಿಕ ಶೈಲಿಯ ನಗರ, ಐತಿಹಾಸಿಕ ಸ್ಮಾರಕ ಮತ್ತು ನೈಸರ್ಗಿಕ ಸೌಂದರ್ಯಗಳ ಮಿಶ್ರಣವುಳ್ಳ ದೇಶವಾಗಿದೆ. ಕೌಲಾಲಂಪುರದ ಐಕಾನಿಕ್ ಪೆಟ್ರೋನಾಸ್ ಟವರ್ಸ್ ಹಾಗೂ ಇಲ್ಲಿನ ಮಾರುಕಟ್ಟೆಗಳು ವಿಭಿನ್ನ ಅನುಭವ ನೀಡುತ್ತವೆ.
ಇಲ್ಲಿನ ಚಹಾ ತೋಟಗಳಲ್ಲಿ ಚಾರಣ ಮಾಡಬಹುದು. ಲಂಕಾವಿ ಉಷ್ಣವಲಯದ ಕಡಲತೀರಗಳಲ್ಲಿ ವಿಶ್ರಾಂತಿ ಪಡೆಯಬಹುದು. ಸೆಲಂಗೋರ್‌ನಲ್ಲಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಬಹುದು.
ಬೆಂಗಳೂರಿನಿಂದ ವಿಮಾನ ದರ ₹7,000 ಗಳಿಂದ ಪ್ರಾರಂಭವಾಗುತ್ತವೆ. ವಿಮಾನಗಳನ್ನು ಹೊರತುಪಡಿಸಿ ಟೂರ್ ಪ್ಯಾಕೇಜ್‌ಗಳು ₹14,000 ದಿಂದ ಪ್ರಾರಂಭವಾಗುತ್ತವೆ. ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.