ADVERTISEMENT

ನೋಡಬನ್ನಿ ಕಾರ್ಗಿಲ್‌ನಲ್ಲಿ ಮಡಿದ ವೀರಯೋಧನ ಸ್ಮರಿಸುತ್ತಿರುವ ಈ ವೀರಗಲ್ಲನ್ನು

ಎಸ್.ಎಂ.ಹಿರೇಮಠ
Published 25 ಜುಲೈ 2019, 12:23 IST
Last Updated 25 ಜುಲೈ 2019, 12:23 IST
ಚೊಳಚಗುಡ್ಡ ಗ್ರಾಮದಲ್ಲಿ ಇರುವ ಹುತಾತ್ಮ ಯೋಧ ಶಿವಬಸಯ್ಯ ಕುಲಕರ್ಣಿ ಅವರ ವೀರಗಲ್ಲು
ಚೊಳಚಗುಡ್ಡ ಗ್ರಾಮದಲ್ಲಿ ಇರುವ ಹುತಾತ್ಮ ಯೋಧ ಶಿವಬಸಯ್ಯ ಕುಲಕರ್ಣಿ ಅವರ ವೀರಗಲ್ಲು   

1999ರಲ್ಲಿ ‘ಆಪರೇಷನ್ ವಿಜಯ್’ ಹೆಸರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಸುಮಾರು 572 ಮಂದಿ ಭಾರತೀಯ ಯೋಧರು ಹುತಾತ್ಮರಾದರು. ಅದರಲ್ಲಿ ಹದಿಮೂರು ಸೈನಿಕರು ಕರ್ನಾಟಕದವರು.

ಅದರಲ್ಲಿ ಮೊದಲು ಹುತಾತ್ಮರಾದ ವೀರಯೋಧ , ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಗ್ರಾಮದ ಶಿವಬಸಯ್ಯ ಕುಲಕರ್ಣಿ.

20ನೇ ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದ ಕುಲಕರ್ಣಿ ಅವರು ಜೂನ್‌ 1ರಂದು ದ್ರಾಸ್‌ ವಲಯದಲ್ಲಿ ಮದ್ದು–ಗುಂಡುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಪಾಕಿಸ್ತಾನದ ಗುಂಡಿನ ದಾಳಿಯಿಂದ ವೀರಮರಣವನ್ನಪ್ಪಿದರು.

ವೀರಯೋಧ ಶಿವಬಸಯ್ಯ ಹುತಾತ್ಮರಾದಾಗ ಅವರ ಕುರಿತು ರಚನೆಯಾದ ಲಾವಣಿ, ಜನಪದ ಹಾಡುಗಳು ಮನೆ ಮಾತಾಗಿತ್ತು. ಪ್ರತಿ ವರ್ಷ ಕಾರ್ಗಿಲ್‌ ವಿಜಯ್ ದಿವಸವನ್ನು ಗ್ರಾಮದಲ್ಲಿ ಆಚರಿಸಲಾಗುತ್ತದೆ.

ಶಿವಬಸಯ್ಯ ಕುಲಕರ್ಣಿ ವೀರಮರಣ ಹೊಂದಿದ ಬಳಿಕ ಅವರ ಸ್ಪೂರ್ತಿಯಿಂದ ಅವರ ಸಹೋದರ ಶಶಿಧರ ಕುಲಕರ್ಣಿ ಸೇರಿದಂತೆ 15ಕ್ಕೂ ಅಧಿಕ ಯುವಕರು ಭಾರತೀಯ ಸೇನೆಗೆ ಸೇರುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಇವತ್ತಿಗೂ ಉತ್ತರ ಕರ್ನಾಟಕದಲ್ಲಿ ಸೇನೆ ಸೇರುವುದಕ್ಕೆ ಯುವಕರಿಗೆ ಶಿವಬಸಯ್ಯನಂತಹವರೇ ಪ್ರೇರಣೆಯಾಗುತ್ತಿದ್ದಾರೆ.

ಈ ವೀರಯೋಧನ ಸ್ಮರಣೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 2000 ಜುಲೈ 21ರಂದು ಚೊಳಚಗುಡ್ಡ ಗ್ರಾಮದ ಬಸ್‌ ನಿಲ್ದಾಣದ ಸಮೀಪವಿರುವ ದೇವಾಲಯದ ಪಕ್ಕದಲ್ಲಿ ವೀರಗಲ್ಲನ್ನು ಸ್ಥಾಪಿಸಲಾದೆ. ವಿಶ್ವವಿದ್ಯಾಲಯದ ಅಂದಿನ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರ ನಿರ್ದೇಶನದಂತೆ ವೀರಗಲ್ಲಿನ ಮೇಲೆ ‘ಯೋಧನಿಗೆ ಲೇಸು ಮೃತ್ಯು, ಯುದ್ಧಾಪನಾನಮಲ್ತು ಮೃತ್ಯು, ಮೃತ್ಯುವಿನ ನೋವು ಕ್ಷಣವು ಅಪಮಾನದ ನೋವು ದಿನವೂ’ ಎಂಬ ಸಾಲು ಬರೆಯಿಸಲಾಗಿದೆ. ಪ್ರತಿ ವರ್ಷ, ವಿವಿಧ ಸಂಘಟನೆಗಳು, ಜುಲೈ 26 ಕಾರ್ಗಿಲ್‌ ವಿಜಯ್ ದಿವಸದಂದು, ಈ ವೀರಗಲ್ಲು ಸ್ಥಳದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾಬಂದಿವೆ.

ಇಡೀ ದೇಶ ಕಾರ್ಗಿಲ್‌ ವಿಜಯದ 20ರ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಅದಕ್ಕೆಸಂಬಂಧಿಸಿದ ಮಾಹಿತಿ, ಲೇಖನ, ವಿಶೇಷ ವರದಿಗಳುಪ್ರಜಾವಾಣಿ ಜಾಲತಾಣದಲ್ಲಿಸರಣಿಯಾಗಿ ಪ್ರಕಟವಾಗಲಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.