ನಮ್ಮದೇ ರಾಜ್ಯದ ಕಾಫಿನಾಡಿನವರಾದ ಲೇಖಕಿ, ಬಾಲಿ ಪ್ರವಾಸದ ವೇಳೆ ವಿಶ್ವದ ಅತ್ಯಂತ ದುಬಾರಿ ಮತ್ತು ವಿಶಿಷ್ಟವಾದ ಕಾಫಿಯ ರುಚಿಯನ್ನು ನೋಡಿದ್ದಾರೆ. ಆ ಕಾಫಿ ಬೆಲೆ ಏಕೆ ಅಷ್ಟು ದುಬಾರಿ, ಅದರ ವೈಶಿಷ್ಟ್ಯವೇನು ಎನ್ನುವುದನ್ನು ತಮ್ಮದೇ ಅನುಭವದ ಮೂಲಕ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ.
ಇತ್ತೀಚೆಗೆ ಇಂಡೊನೇಷ್ಯಾದ ಬಾಲಿ ದ್ವೀಪಕ್ಕೆ ಪ್ರವಾಸ ಹೋಗಿದ್ದೆ. ನಾನು ಕಾಫಿನಾಡಿನವಳಾದ್ದರಿಂದ ಅಲ್ಲಿಯ ಒಂದು ವಿಶಿಷ್ಟ ವಿಶ್ವ ಪ್ರಸಿದ್ಧ ಕಾಫಿಯ ಬಗ್ಗೆ ಹೇಳುತ್ತಿದ್ದೇನೆ.
ನಮ್ಮ ಗೈಡ್ ಬಾಲಿ ದ್ವೀಪದ ಬಗೆಗೆ ಬಹಳಷ್ಚು ವಿಷಯಗಳನ್ನು ವಿವರಿಸುತ್ತಲೇ ಈ ದಿನ ಕಾಫಿ ಪ್ಲಾಂಟೇಶನ್‌ಗೆ ಹೋಗೋಣ ಎಂದಳು. ಸರಿ ಎಂದು ಹೊರಟೆವು. ಇಲ್ಲಿಯ ವಿಶ್ವ ಪ್ರಸಿದ್ಧ ಕಾಫಿಯ ಬಗ್ಗೆ ಓದಿದ್ದು ನೆನಪಿತ್ತು. ‘Sariuma Luwak coffee (ಸಾರಿ ಉಮ ಲುವಾಕ್ ಕಾಫಿ) ಎಂಬಲ್ಲಿಗೆ ಹೋದೆವು. ಅದೇನು ದೊಡ್ಡ ಕಾಫಿ ಪ್ಲಾಂಟೇಶನ್ ಅಲ್ಲ. ನಮ್ಮ ಕರ್ನಾಟಕದ ಕಾಫಿನಾಡಿನ ನೂರಾರು ಎಕರೆ ಫ್ಲಾಂಟೇಶನ್ ಕಂಡ ನನಗೆ ಸ್ವಲ್ಪ ಕಾಫಿ ಗಿಡಗಳನ್ನು ಕಂಡು ಆಶ್ಚರ್ಯವಾಯಿತು. ಪ್ರವಾಸಿಗರಿಗೆಂದು ಈ ಲುವಾಕ್ ಕಾಫಿ ತೋರಿಸುವುದಕ್ಕಾಗಿಯೇ ಇರುವ ಸ್ಥಳವಿದ್ದರೂ ಇರಬಹುದು ಅನಿಸಿತು. ಸ್ವಲ್ಪ ಜಾಗದಲ್ಲಿ ದೊಡ್ಡದಾಗಿ ಬೆಳೆದ ‘ಅರೇಬಿಕಾ’ ಕಾಫಿ ತಳಿಯನ್ನಷ್ಟೇ ನೋಡಿ ಓಹೋ ಎಂದೆವು. ಒಳಗಡೆ ಮರದ ಅಟ್ಟಣಿಗೆಯಲ್ಲಿ ಸಣ್ಣ ಎರಡು ಪಂಜರಗಳಲ್ಲಿ ಸಿವೆಟ್ ಬೆಕ್ಕುಗಳನ್ನು ಇಡಲಾಗಿತ್ತು. ಅವುಗಳಲ್ಲಿ ಒಂದು ಕಡುಗಪ್ಪು ಕಣ್ಣುಗಳನ್ನು ಫಳಫಳಿಸುತ್ತಾ, ನಮ್ಮನ್ನೇ ನೋಡುತ್ತಿದೆಯೇನೋ ಅನಿಸಿತು. ಕಪ್ಪನೆಯ ತುಪ್ಪಳ ಮಿರ ಮಿರನೇ ಮಿಂಚುತ್ತಿತ್ತು. ಗಾತ್ರದಲ್ಲಿ ಬಹಳ ದೊಡ್ಡ ಬೆಕ್ಕಿನ ಗಾತ್ರವೂ ಇರಲಿಲ್ಲ. ಮತ್ತೊಂದು ಸಿವೆಟ್ ಮೈಮುದುಡಿಕೊಂಡು ಮಲಗಿಕೊಂಡಿತ್ತು. ಅಲ್ಲಿಯ ಕಾಫಿ ಪ್ಲಾಂಟೇಶನ್ ಗೈಡ್ ನಮ್ಮೊಂದಿಗೆ ಬಂದು ‘ಕಾಫಿ’ಯ ಬಗ್ಗೆ ಬಹಳಷ್ಟು ವಿಷಯಗಳನ್ನು ವಿವರಿಸುತ್ತಿದ್ದಳು. ಸಿವೆಟ್ ಅನ್ನು ಹಣ್ಣಿನ ಕಾಲದಲ್ಲಿ ತೋಟದಲ್ಲಿ ಬಿಡುತ್ತಾರೆ. ಅದು ಚೆನ್ನಾಗಿ ಕೆಂಪಾಗಿ ಹಣ್ಣಾದ ಉತ್ತಮ ಹಣ್ಣುಗಳನ್ನು ಮಾತ್ರ ತಿನ್ನುತ್ತವೆ. ತಿಂದ ನಂತರ ತೋಟದ ಒಳಗಡೆ ಓಡಾಡಿ ಹಿಕ್ಕೆ ಹಾಕುತ್ತವೆ. ನಂತರ ತೋಟದವರು ಅದನ್ನು ಆಯ್ದು ತರುತ್ತಾರೆ. ಅದು ಉಂಡೆ ಉಂಡೆಯಾಗಿ ಕಾಫಿ ಹಣ್ಣುಗಳು, ಕಾಫಿ ಬೀಜಗಳಾಗಿ ಇರುತ್ತವೆ. ನಾವು ಕಾಫಿ ಹಣ್ಣನ್ನು ಪಲ್ಪ್ ಮಾಡಿದಾಗ ಹೇಗಿರುತ್ತದೋ ಹಾಗೆ! ತಿಂದ ಕಾಫಿಯ
ಹಣ್ಣು ಸಿವೆಟ್‌ನ ಹೊಟ್ಟೆಯಲ್ಲಿ ಪ್ರೊಸೆಸ್ ಆಗಿ ಕಾಫಿಬೀಜ ಹೊರಬರುತ್ತದೆ. ಅದನ್ನು ಚೆನ್ನಾಗಿ ತೊಳೆದು ಒಣಗಿಸಿ ಹುರಿದು ಪುಡಿಯಾಗಿಸುವ ಸಂಭ್ರಮ ಹೀಗೆ ಎಲ್ಲವನ್ನೂ ವಿವರಿಸುತ್ತಾ ತೋರಿಸಿದರು.
ನಮ್ಮಲ್ಲಿಯೂ ಕಾಡು ಬೆಕ್ಕು ಬಂದು ಕಾಫಿ ಹಣ್ಣು ತಿಂದು ಹಿಕ್ಕೆ ಹಾಕಿ ಹೋಗಿದೆ ಅಂತ ಅದರ ಉಂಡೆಗಳನ್ನು ಸಂಗ್ರಹಿಸಿ ಇಟ್ಟಿದ್ದನ್ನು ನೋಡಿದ್ದೇನೆ. ಆದರೆ ಇಷ್ಟು ಚಂದವಾಗಿಸಿ ಕಾಫಿ ಪುಡಿ ತಯಾರಿಸುವುದನ್ನು ನಾನಂತು ಕಂಡಿಲ್ಲ. ಇಪ್ಪತ್ತೆರಡು ಬಗೆಯ ಫ್ಲೇವರ್‌ಗಳುಳ್ಳ ಕಾಫಿಯನ್ನು ರುಚಿ ನೋಡಲು ಕೊಡುತ್ತಾರೆ. ಕೋಕೊನಟ್ ಫ್ಲೇವರ್, ಅವಕಾಡೋ ಫ್ಲೇವರ್ ಹೀಗೆ.. ಬಹಳಷ್ಟು ರುಚಿಯ ಕಾಫಿಗಳನ್ನು ನೀಡುತ್ತಾರೆ. ವಿತ್ ಕ್ರೀಮ್, ವಿತ್ ಶುಗರ್, ಬ್ಲಾಕ್ ಕಾಫಿ.. ಹೀಗೆ ಬಹಳಷ್ಟು ಕಾಫಿಗಳ ರುಚಿ ನೋಡಿದೆ. ಯಾಕೋ ನಮ್ಮ ಮನೆಯಲ್ಲಿ ಡಿಕಾಕ್ಷನ್ ಹಾಕಿದಾಗ ಬರುವ ಘಮಲೂ, ನಮ್ಮ ಕಾಫಿಯ ರುಚಿಯೂ ನನಗೆ ದಕ್ಕಲಿಲ್ಲ. ಲೂವಾಕ್ ಕಾಫಿಯ ರುಚಿ ನೋಡಬೇಕೆಂದರೆ ಹಣ ಕೊಟ್ಟೇ ತೆಗೆದುಕೊಳ್ಳಬೇಕು. ನಮ್ಮಲ್ಲಿ ಕೆಲವರು ‘ಅಯ್ಯೋ, ಆ ಹಿಕ್ಕೆ ಕಾಫಿ ನಮಗೆ ಬೇಡ’ ಎಂದು ಮೂಗು ಮುರಿದರು. ನಾನಂತು ವಿಶ್ವದ ಅತ್ಯಂತ ಪ್ರಸಿದ್ಧ ಅತೀ ದುಬಾರಿ ಬೆಲೆಯ ಕಾಫಿಯ ರುಚಿ ನೋಡಲೇಬೇಕೆಂದು ಕೊಂಡುಕೊಂಡು ವಿತ್ ಶುಗರ್, ವಿತ್ ಕ್ರೀಮ್ ಅಂತ ಹಾಕಿಸಿಕೊಂಡು ತೆಗೆದುಕೊಂಡು ಬಂದೆ. ಸ್ವಲ್ಪ ಸ್ವಲ್ಪವನ್ನೇ ನಾಲಿಗೆಯ ಮೇಲೆ ತಂದುಕೊಂಡು ಮೆಲ್ಲನೇ ರುಚಿ ನೋಡುತ್ತಾ ಕುಡಿದಿದ್ದೆ ಬಂತು, ಆಹಾ ಎನ್ನುವಂತಹ ಪರಿಮಳವೇನಿರಲಿಲ್ಲ. ಆದರೂ ಒಂದು ರೀತಿಯ ವಿಶಿಷ್ಟ ರುಚಿಯನ್ನು ಆಸ್ವಾದಿಸಿದೆ. ಬಹಳ ಸಮಯದ ತನಕ ಅದರ ಕಡು ಸ್ವಾದ ಇಷ್ಟವಾಯಿತೆಂದೇ ಹೇಳಬಹುದು.
ಅಲ್ಲೇ ಒಂದು ಚಿಕ್ಕ ಕಾಫಿ ಪುಡಿಯ ಮಳಿಗೆಯೂ ಇತ್ತು. ಆಕರ್ಷಕ ಪ್ಯಾಕ್‌ಗಳಲ್ಲಿ ಕಾಫಿ ಪುಡಿಯನ್ನು ಹಲವು ಬೆಲೆಗಳಲ್ಲಿ ಮಾರಾಟಕ್ಕೆ ಇಡಲಾಗಿತ್ತು. ನಾನು ಐವತ್ತು ಗ್ರಾಂನ ಎರಡು ಪೊಟ್ಟಣಗಳನ್ನು (ಮೂರು ಸಾವಿರ ನಮ್ಮ ರೂಪಾಯಿಗಳಲ್ಲಿ) ಖರೀದಿಸಿದೆ. ಮನೆಗೆ ಬಂದ ಮೇಲೆ ಅದರ ಕಾಫಿಯನ್ನು ಇನ್ನೂ ತಯಾರಿಸಿಲ್ಲ. ಮಕ್ಕಳು ಮನೆಗೆ ಬಂದಾಗ ಸಿವೆಟ್ ಹಿಕ್ಕೆಯ ವಿಶ್ವದ ಅತ್ಯಂತ ದುಬಾರಿಯ ಕಾಫಿ ತಯಾರಿಸಿಕೊಡಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.