
ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದೊಳಗೆ ಸಾಗುತ್ತಿರುವ ಭಕ್ತರು
ಚಿತ್ರಗಳು: ಫಕ್ರುದ್ದೀನ್ ಎಚ್.
ಇಲ್ಲಿರುವ ಗುಹೆಯ ಪ್ರವೇಶಕ್ಕೂ ಮುನ್ನ ಪುಷ್ಕರಣಿ (ನಾಗ ಕೊಳ)ಯಲ್ಲಿ ಸ್ನಾನಮಾಡಬೇಕು. ಒದ್ದೆ ಬಟ್ಟೆಯಲ್ಲಿಯೇ ಸಾಗಬೇಕು. ಗುಹೆಯ ಪ್ರವೇಶಕ್ಕೆ ಅಣಿಯಾಗುತ್ತಿದ್ದಂತೆ ದೇವಸ್ಥಾನದವರೊಬ್ಬರು ಎಣ್ಣೆಯ ದೀಪ ಹಿಡಿದುಕೊಂಡು ಮುಂದೆ ಸಾಗುತ್ತಾರೆ. ಕಡಿದಾದ ಗುಹೆಯಲ್ಲಿ ಮೊದಲು ತೆವಳುತ್ತ ಸಾಗಬೇಕು. ಆ ನಂತರ ಅಂಬೆಗಾಲಿಡುತ್ತ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಬಾಗಿ ನಡೆಯುತ್ತ, ಕೊನೆಗೆ ಎದ್ದು ನಿಂತು ಹೋಗಬೇಕು. ಮುಂದೆ ಮುಂದೆ ಸಾಗಿದಾಗ ಅಲ್ಲಿ ಸಿಗುವ ‘ಸರೋವರ’ ಬೆರಗುಗೊಳಿಸುತ್ತದೆ.
ಗುಹೆಯೊಳಗಿನ ಸರೋವರದ ಬಳಿ ಶಿವನ ಮೂರ್ತಿ ಇದೆ. ಸರೋವರದಲ್ಲಿ ಭಕ್ತರು ತೀರ್ಥಸ್ನಾನ ಮಾಡಿ, ಸರೋವರದ ನೀರಿನಿಂದ ಶಿವನ ಮೂರ್ತಿಗೆ ತಮ್ಮ ಕೈಯಿಂದಲೇ ನೀರು ಹಾಕಿ ಅಭಿಷೇಕ ಮಾಡುತ್ತಾರೆ. ಅದೇ ನೀರನ್ನು ತೀರ್ಥದಂತೆ ಸೇವಿಸುತ್ತಾರೆ.
ಹಸಿರು ಹೊದ್ದು ಮಲಗಿರುವ ಮನೋರಮೆಯ ಮಡಿಲಲ್ಲಿರುವ ‘ನೆಲ್ಲಿತೀರ್ಥ’ (ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯವು ) ಪೌರಾಣಿಕ ಐತಿಹ್ಯ ಸಾರುವ ಪ್ರಮುಖ ಕ್ಷೇತ್ರ. ಇದು ಮಂಗಳೂರು ತಾಲ್ಲೂಕು ನೀರುಡೆ ಬಳಿಯಿದೆ. ಇದರ ‘ಗುಹಾ ಯಾನ’ ವಿಶಿಷ್ಟ ಅನುಭವ ಕಟ್ಟಿಕೊಡುತ್ತದೆ.
ದೇವಾಲಯದ ಬಲಕ್ಕೆ ಬೃಹತ್ ಮೊಸಳೆಯೊಂದು ಬಾಯ್ತೆರೆದು ಮಲಗಿದಂತೆ ಮೊದಲ ನೋಟಕ್ಕೆ ಕಾಣುವ ಗುಹೆಯು ಪ್ರಾಕೃತಿಕ ವಿಸ್ಮಯ. ಗುಹೆಯ ಒಳಗೆ ಹೋಗುವ ದಾರಿಯು ಸ್ವಲ್ಪ ಕಡಿದಾಗಿದ್ದರೂ, ತೀರ್ಥ ಸರೋವರ ಹಾಗೂ ಶಿವಲಿಂಗ ಇರುವ ಜಾಗವು ನೂರಾರು ಜನರು ಒಟ್ಟಿಗೆ ನಿಂತು ಆನಂದಿಸಬಹುದಾದಷ್ಟು ವಿಶಾಲ ಹಾಗೂ ಎತ್ತರವಿದೆ. ಗುಹೆಯು ಇಲ್ಲಿಗೆ ಕೊನೆಯಾಗುವುದಿಲ್ಲ. ಇನ್ನು ಬಹಳಷ್ಟು ಮುಂದುವರಿಯುತ್ತದಂತೆ. ಆದರೆ, ಸರೋವರದಿಂದಾಚೆಗೆ ಯಾರಿಗೂ ಹೊಗಲು ಅವಕಾಶ ಕೊಡುವುದಿಲ್ಲ.
ಈ ಕ್ಷೇತ್ರದ ಆನುವಂಶಿಕ ಅರ್ಚಕ ಮತ್ತು ವ್ಯವಸ್ಥಾಪನಾ ಕುಟುಂಬದ ಹರಿಪ್ರಸಾದ್ ನೆಲ್ಲಿತೀರ್ಥ ಅವರು ಇದರ ಮಹತ್ವದ ಕುರಿತು ಹೇಳುವುದು ಹೀಗೆ..‘ ಮಹರ್ಷಿ ಜಾಬಾಲಿಯ ತಪಸ್ಸಿನ ತಾಣವಾದ ಈ ಗುಹೆ ಒಳಭಾಗದಲ್ಲಿ ಸದಾ ನೆಲ್ಲಿಕಾಯಿ ಆಕಾರದಲ್ಲಿ ನೀರು ತೊಟ್ಟುಕ್ಕುತ್ತಿರುತ್ತದೆ. ಹಾಗಾಗಿ ಈ ಗುಹಾ ದೇವಾಲಯಕ್ಕೆ ನೆಲ್ಲಿತೀರ್ಥ ಎಂಬ ಹೆಸರು ಬಂದಿದೆ. ನೈಸರ್ಗಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾದ ಈ ದೇವಾಲಯದಲ್ಲಿ ಭಕ್ತರು ಆಧ್ಯಾತ್ಮಿಕತೆ ಮತ್ತು ಪ್ರಕೃತಿಯ ವೈಭವವನ್ನು ಏಕಕಾಲದಲ್ಲಿ ಆನಂದಿಸಬಹುದು’.
ಗುಹಾ ಪ್ರವೇಶ ವರ್ಷದಲ್ಲಿ ಆರು ತಿಂಗಳು ಮಾತ್ರ ಇದ್ದರೆ, ಗುಹೆಯ ಹೊರಗಿರುವ ಮುಖ್ಯ ದೇವಾಲಯದಲ್ಲಿ ಶ್ರೀ ಸೋಮನಾಥನ ಹಾಗೂ ಶ್ರೀ ಮಹಾಗಣಪತಿಯ ದೇವರ ನಿತ್ಯ ಪೂಜೆ, ಆರಾಧನೆ, ಉತ್ಸವಗಳು ನಿತ್ಯ ನಡೆಯುತ್ತವೆ. ಕರ್ನಾಟಕ ಸರ್ಕಾರವು ಇದನ್ನು ಪ್ರಮುಖ ಪ್ರವಾಸಿ ಕೇಂದ್ರವೆಂದು ಗುರುತಿಸಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟಿದ್ದು, ಸಿ ವರ್ಗದ ದೇವಾಲಯ ಇದಾಗಿದೆ.
ಹೋಗುವುದು ಹೇಗೆ?
ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯವು (ನೀರುಡೆ, ಕೊಂಪದವು ಗ್ರಾಮ, ಮಂಗಳೂರು ತಾಲ್ಲೂಕು) ಮಂಗಳೂರಿನಿಂದ 25 ಕಿ.ಮೀ. ದೂರ ಇದೆ. ಬಜಪೆ (6ಕಿಮೀ), ಮುಚ್ಚೂರು (3ಕಿಮೀ), ಕಟೀಲು (10 ಕಿ.ಮೀ) ವರೆಗೆ ಬಸ್‌ನಲ್ಲಿ ಹೋಗಿ ಅಲ್ಲಿಂದ ಆಟೊಗಳಲ್ಲಿ ತೆರಳಬಹುದು. ಇಲ್ಲವೇ ಸ್ವಂತ ವಾಹನದಲ್ಲಿ ಸಾಗಬಹುದು. ಗುಹಾ ಪ್ರವೇಶವು ಅಕ್ಟೋಬರ್ 17ರಿಂದ ಆರಂಭಗೊಂಡಿದ್ದು, 2026ರ ಏಪ್ರಿಲ್ 14ರ ವರೆಗೆ (ನಿತ್ಯ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12.30ರವರೆಗೆ) ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.