
ಪುದುಚೇರಿ ಪ್ರವಾಸ
ಪ್ರಜಾವಾಣಿ ಚಿತ್ರ
ಇನ್ನೇನು 2026 ಆರಂಭವಾಗಲು ಬೆರಳೆಣಿಕೆಯಷ್ಟು ದಿನಗಳು ಬಾಕಿಯಿವೆ. ಹೊಸ ವರ್ಷದ ಆರಂಭವನ್ನು ಸದಾ ನೆನಪಿನಲ್ಲಿ ಇರುವ ಹಾಗೆ ಒಂದೊಳ್ಳೆ ಸ್ಥಳದಲ್ಲಿ ಆಚರಿಸಬೇಕು ಎಂದುಕೊಂಡರೆ ಅದಕ್ಕೆ ಉತ್ತಮ ಮತ್ತು ಬಜೆಟ್ ಸ್ನೇಹಿ ಜಾಗ ಎಂದರೆ ಪುದುಚೇರಿ (ಪಾಂಡಿಚೇರಿ).
ಬಂಗಾಳ ಕೊಲ್ಲಿಯ ಅಂಚಿನಲ್ಲಿರುವ ಪುದುಚೇರಿ ಒಬ್ಬಂಟಿ (ಸೋಲೊ) ಪ್ರವಾಸಿಗರಿಂದ ಹಿಡಿದು, ದಂಪತಿ, ಸ್ನೇಹಿತರೊಂದಿಗಿನ ಭೇಟಿಗೂ ಉತ್ತಮ ಜಾಗವಾಗಿದೆ.
ಕಡಿಮೆ ಖರ್ಚಿನಲ್ಲಿ ಉಳಿದುಕೊಳ್ಳಲು ಹೋಟೆಲ್‌ಗಳೂ ಇಲ್ಲಿ ಲಭ್ಯವಿವೆ. ಅಲ್ಲದೆ ಸಮುದ್ರ ಅಂಚಿನಲ್ಲಿ ಉಳಿದುಕೊಳ್ಳಲು ಬಯಸಿದರೆ ಹೋಮ್‌ಸ್ಟೇಗಳೂ ಲಭ್ಯವಿವೆ. ಆದರೆ ಇವು ತುಸು ದುಬಾರಿಯಾಗಬಹುದು.
ಫ್ರೆಂಚರ್ ಆಳ್ವಿಕೆಗೆ ಒಳಪಟ್ಟ ಈ ನಗರ ಈಗಲೂ ವಿದೇಶಿ ಶೈಲಿಯ ಕಟ್ಟಡ, ಬೀದಿಗಳನ್ನು ಉಳಿಸಿಕೊಂಡಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿ ಸ್ವಚ್ಛ ನಗರವೂ ಆಗಿದೆ. ಸಮುದ್ರದ ಹೊರತಾಗಿ ಇವುಗಳೇ ಪುದುಚೇರಿಯ ಆಕರ್ಷಣೆಯ ಕೇಂದ್ರಗಳು.
ಸಮುದ್ರ ತೀರ
ಪುದುಚೇರಿಯಲ್ಲಿ ಹೀಗೆ ಸಮಯ ಕಳೆಯಿರಿ
ಅರೋವಿಲ್ಲೆಗೆ ಭೇಟಿ ನೀಡಬಹುದು. ಇದು ಧ್ಯಾನಕೇಂದ್ರವಾಗಿದ್ದು, ಹಸಿರು ಪರಿಸರದಲ್ಲಿ ನಡೆದು ಸಾಗಿದರೆ ವೃತ್ತಾಕಾರದ ಧ್ಯಾನಕೇಂದ್ರ ಕಾಣಸಿಗುತ್ತದೆ.
ಪುದುಚೇರಿ ನಗರದಲ್ಲಿ ಚರ್ಚ್‌ಗಳಿಗೆ ಭೇಟಿ ಕೊಡಬಹುದು.
ನಗರದ ಬೀದಿಗಳಲ್ಲಿ ಕಪ್ಪೆಚಿಪ್ಪುಗಳಿಂದ ಮಾಡಿದ ಆಭರಣ, ಮನೆಯಲಂಕಾರಿಕ ವಸ್ತುಗಳು, ಪುಸ್ತಕಗಳು. ಫ್ರಿಡ್ಜ್ ಮ್ಯಾಗ್ನೆಟ್‌ಗಳು ಹೀಗೆ ಹಲವು ರೀತಿಯ ವಸ್ತುಗಳನ್ನು ಶಾಪಿಂಗ್ ಮಾಡಬಹುದು.
ಇಲ್ಲಿರುವ ತರಹೇವಾರಿ ಹೋಟೆಲ್‌ಗಳಲ್ಲಿ ಪ್ರೆಂಚರ ತಿನಿಸುಗಳು, ದಕ್ಷಿಣ, ಉತ್ತರ ಭಾರತದ ಆಹಾರ, ವಿಶೇಷ ಕಾಫಿಯನ್ನು ಸವಿಯಬಹುದು.
ಪುದುಚೇರಿಯಲ್ಲಿ ರಾಕ್ ಬೀಚ್‌ನಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು. ಇದಕ್ಕೆ ಪ್ರೊಮೆನೇಡ್ ಬೀಚ್ ಎಂತಲೂ ಕರೆಯುತ್ತಾರೆ. ಈ ಬೀಚ್ ಪಕ್ಕದಲೇ ಪಬ್‌ಗಳಿದ್ದು ಸಂಗೀತ ಸಂಜೆಯನ್ನೂ ಆನಂದಿಸಬಹುದು.
ರಾಕ್ ಬೀಚ್ ಎದುರಿನಲ್ಲೇ ಪುದುಚೇರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಟ್ಟಡವಿದೆ.
ಪುದುಚೇರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಟ್ಟಡ
ಪ್ಯಾರಡೈಸ್ ಮತ್ತು ಈಡನ್ ಬೀಚ್‌ನಲ್ಲಿ ಸ್ವಚ್ಛವಾಗಿರುವ ನೀರಿನಲ್ಲಿ ಆಟವಾಡಬಹುದು. ವಾಟರ್ ಗೇಮ್ಸ್‌ಗಳೂ ಇಲ್ಲಿ ಸಿಗುತ್ತವೆ. ಕಪ್ಪೆಚಿಪ್ಪುಗಳನ್ನು ಕಲೆಹಾಕಬಹುದು.
ಸೆರೆನಿಟಿ ಬೀಚ್‌ನಲ್ಲಿ ಸರ್ಫಿಂಗ್‌ಗೆ ಅವಕಾಶವಿದೆ. ಜತೆಗೆ ಸಮುದ್ರ ಮಧ್ಯದಲ್ಲಿ ಸಾಗುವ ಮೀನುಗಾರಿಕಾ ದೋಣಿಗಳನ್ನು ಕಣ್ತುಂಬಿಕೊಳ್ಳಬಹುದು.
ಪುದುಚೇರಿಯ ಇನ್ನೊಂದು ಪ್ರಮುಖ ಆಕರ್ಷಣೆ ‘ಫ್ರೆಂಚ್ ಕಾಲೋನಿಗಳು’. ಫ್ರೆಂಚರ ಕಾಲದಲ್ಲಿ ನಿರ್ಮಿಸಿದ ಕಟ್ಟಡಗಳು, ಅವುಗಳಿಗೆ ಬಳಿದ ಬಣ್ಣಗಳು ಆಕರ್ಷಿಸುತ್ತವೆ. ಫೋಟೋಶೂಟ್‌ಗಳಿಗೆ ಹೇಳಿ ಮಾಡಿಸಿದ ಜಾಗವಿದು.
ಮ್ಯಾಂಗ್ರೋವ್ ಫಾರೆಸ್ಟ್ ಬೋಟಿಂಗ್‌ಗೆ ಭೇಟಿ ನೀಡಿದರೆ ಸಮುದ್ರ ಮಧ್ಯದಲ್ಲಿ ಮತ್ತು ಕಾಂಡ್ಲಾವನದಲ್ಲಿ ಬೋಟ್ ರೈಡ್ ಮಾಡಬಹುದು.
ಎರಡು ದಿನಗಳಲ್ಲಿ ಪುದುಚೇರಿಯನ್ನು ಸುತ್ತಾಡಿ ನೆನಪುಗಳ ಬುತ್ತಿಯೊಂದಿಗೆ ವಾಪಸಾಗಬಹುದು.
ಅಕ್ಟೋಬರ್‌ನಿಂದ–ಮಾರ್ಚ್‌ವರೆಗೆ ಪುದುಚೇರಿ ಭೇಟಿಗೆ ಉತ್ತಮ ಸಮಯವಾಗಿದೆ.
ಸಮುದ್ರ ತೀರ
ಸಾಗುವುದು ಹೇಗೆ?
ಬೆಂಗಳೂರಿನಿಂದ ಪುದುಚೇರಿಗೆ 316 ಕಿ.ಮೀ ದೂರ
ರೈಲು ಅಥವಾ ವಿಮಾನದ ಮೂಲಕ ಸಾಗಬಹುದು.
ಕಾರಿನಲ್ಲಿ ಹೋಗುತ್ತಿರಿ ಎಂದರೆ 5-6 ಗಂಟೆಗಳ ಪ್ರಯಾಣ
ಸಮುದ್ರ ತೀರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.