
ಚಿತ್ರ:ಎಐ
ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳು ಪ್ರವಾಸಕ್ಕೆ ಹೇಳಿ ಮಾಡಿಸಿದ ಸಮಯ. ಅದರಲ್ಲೂ ವಿಶಿಷ್ಟ ಪರಂಪರೆ, ಮಹಲುಗಳು, ರಾಜಮನೆತನಗಳ ಆಳ್ವಿಕೆಯ ಕೋಟೆ, ವಿಸ್ತಾರ ಮರುಭೂಮಿ ಹಾಗೂ ಸರೋವರಗಳಿರುವ ರಾಜಸ್ಥಾನಕ್ಕೆ ಚಳಿಗಾಲದಲ್ಲಿ ಭೇಟಿ ನೀಡುವುದು ಸುಂದರ ಅನುಭವ ನೀಡುತ್ತದೆ.
ರಾಜಸ್ಥಾನ ಎಂದರೆ ಬಿಸಿಲು ಹೆಚ್ಚು ಎಂಬ ಕಲ್ಪನೆ ಇದೆ. ಆದರೆ, ಚಳಿಗಾಲದಲ್ಲಿ ಅಲ್ಲಿನ ಬಿಸಿಲಿನ ತೀವ್ರತೆ ಸಾಕಷ್ಟು ಕಡಿಮೆಯಾಗಿರುತ್ತದೆ. ಆದ್ದರಿಂದ ರಾಜಸ್ಥಾನಕ್ಕೆ ಪ್ರವಾಸ ಮಾಡಲು ಬಯಸುವವರಿಗೆ ಚಳಿಗಾಲ ಉತ್ತಮ ಅನುಭವ ನೀಡುತ್ತದೆ. ರಾಜಸ್ಥಾನದಲ್ಲಿ ನೋಡಬಹುದಾದ ಪ್ರವಾಸಿ ತಾಣಗಳ ಮಾಹಿತಿ ತಿಳಿಯೋಣ.
ಜೈಪುರ:
ಗುಲಾಬಿ ನಗರ ಎಂದು ಖ್ಯಾತಿ ಪಡೆದಿರುವ ಜೈಪುರ, ರಾಜಸ್ಥಾನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ರಾಜಸ್ಥಾನಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರು ನೋಡಲೇಬೇಕಾದ ನಗರವಾಗಿದೆ. ಈ ನಗರದಲ್ಲಿ ವಿವಿಧ ಐತಿಹಾಸಿಕ ಸ್ಥಳಗಳಿವೆ. ಜೈ ನಿವಾಸ ಉದ್ಯಾನ, ಅಂಬರ್ ಅರಮನೆ, ನಗರ ಅರಮನೆ, ಜಂತರ್ ಮಂತರ್, ಹವಾ ಮಹಲ್, ಆಲ್ಬರ್ಟ್ ಹಾಲ್ ಮ್ಯೂಸಿಯಂ, ನಹರ್ಗಢ ಕೋಟೆ, ಜೈಗಢ ಕೋಟೆ, ಜಲ ಮಹಲ್, ರಾಜರ ಸ್ಮಾರಕಗಳು, ಸಿಸೋಡಿಯಾ ರಾಣಿ ಅರಮನೆ ಮತ್ತು ಉದ್ಯಾನ, ವಿದ್ಯಾಧರ್ ಉದ್ಯಾನ ಹಾಗೂ ಸೆಂಟ್ರಲ್ ಪಾರ್ಕ್‌ಗೆ ಭೇಟಿ ನೀಡಬಹುದಾಗಿದೆ.
ತಲುಪುವುದು ಹೇಗೆ: ರಾಜಸ್ಥಾನಕ್ಕೆ ವಿಮಾನ ಸಂಪರ್ಕವಿದೆ. ಅಲ್ಲಿಂದ ಬಸ್ ಹಾಗೂ ರೈಲಿನ ಮೂಲಕ ತಲುಪಬಹುದು.
ಜೈಪುರ
ಜೈಸಲ್ಮೇರ್:
ಜೈಸಲ್ಮೇರ್ ನಗರವು ಪಶ್ಚಿಮ ರಾಜಸ್ಥಾನದಲ್ಲಿದೆ. 'ಸುವರ್ಣ ನಗರ' ಎಂದೇ ಖ್ಯಾತಿ ಪಡೆದಿರುವ ಜೈಸಲ್ಮೇರ್ ಪಾಕಿಸ್ತಾನದ ಗಡಿ ಭಾಗದಲ್ಲಿದ್ದು, ವಿಭಿನ್ನ ಶೈಲಿಯ ಕೋಟೆಗಳನ್ನು ಕಾಣಬಹುದು. ಜೈಸಲ್ಮೇರ್‌ನಲ್ಲಿ ಪ್ರಮುಖವಾಗಿ ಗಡಿಸರ್ ಸರೋವರ, ಜೈಸಲ್ಮೇರ್ ಕೋಟೆ, ಜೈಸಲ್ಮೇರ್ ವಸ್ತು ಸಂಗ್ರಹಾಲಯ, ಜೈಸಲ್ಮೇರ್‌ನ ಜೈನ ದೇವಾಲಯ ಹಾಗೂ ಜೈಸಲ್ಮೇರ್ ಯುದ್ಧ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಬಹುದು.
ತಲುಪುವುದು ಹೇಗೆ:
ಜೈಸಲ್ಮೇರ್‌ಗೆ ಜೈಪುರ, ದೆಹಲಿ, ಮುಂಬೈ, ಬೆಂಗಳೂರು ಮತ್ತು ಸೂರತ್‌ನಿಂದ ವಿಮಾನ ಸಂಪರ್ಕವಿದೆ.
ಜೋಧ್‌ಪುರ, ಬಿಕಾನೇರ್ ಮತ್ತು ಜೈಪುರಗಳಿಂದ ಬಸ್ ಮತ್ತು ಟ್ಯಾಕ್ಸಿ ಮೂಲಕ ಹೋಗಬಹುದು.
ದೆಹಲಿ ನಡುವೆ ನೇರ ರೈಲು ಸೇವೆ ಇದೆ.
ಜೈಸಲ್ಮೇರ್
ಉದಯಪುರ:
‘ಪೂರ್ವದ ವೆನಿಸ್’ ಎಂದು ಉದಯಪುರವನ್ನು ಕರೆಯಲಾಗುತ್ತದೆ. ಉದಯಪುರದ ಲೇಕ್ ಪ್ಯಾಲೇಸ್ ಇಂದಿನ ಭಾರತದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ವೈಭವದ ಅತ್ಯುತ್ತಮ ಅದ್ಭುತಗಳಲ್ಲಿ ಒಂದಾಗಿದೆ. ಉದಯಪುರದಲ್ಲಿ ಭೇಟಿ ನೀಡಬಹುದಾದ ಪ್ರಮುಖ ಪ್ರವಾಸಿ ತಾಣಗಳೆಂದರೆ, ಪ್ರತಾಪ್ ಸ್ಮಾರಕ, ಜಗದೀಶ ದೇವಾಲಯ, ಫತೇಹ್ ಸಾಗರ್ ಸರೋವರ ಹಾಗೂ ಪಿಚೋಲಾ ಸರೋವರಗಳಿಗೆ ಭೇಟಿ ನೀಡಬಹುದು.
ತಲುಪುವುದು ಹೇಗೆ: ಅಹಮದಾಬಾದ್, ಅಜ್ಮೀರ್, ಸವಾಯಿ ಮಾಧೋಪುರ್, ಜೈಪುರ, ಆಗ್ರಾ, ದೆಹಲಿ, ಮುಂಬೈ ಮತ್ತು ಖಜುರಾಹೊ ನಗರಗಳಿಂದ ರೈಲು ಸಂಪರ್ಕವಿದೆ.
ಉದಯಪುರ
ಜೋಧಪುರ್:
ರಾಜಸ್ಥಾನದ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಜೋಧಪುರ್‌ಗೆ ನೀಲಿ ನಗರ ಎಂಬ ಹೆಸರಿದೆ. ಇಲ್ಲಿ ಮೆಹರಾಂಗಡ್ ಕೋಟೆ , ಉಮೈದ್ ಭವನ ಅರಮನೆ, ಸರ್ದಾರ್ ವಸ್ತು ಸಂಗ್ರಹಾಲಯ ಜೋಧಪುರ ಹಾಗೂ ಘಂಟಾ ಘರ್ ಸ್ಥಳಗಳಿಗೆ ಭೇಟಿ ನೀಡಬಹುದು.
ತಲುಪುವುದು ಹೇಗೆ: ವಿಮಾನ ಹಾಗೂ ರೈಲಿನ ಮೂಲಕ ತಲುಪಬಹುದು.
ಜೋಧಪುರ್
ಮೌಂಟ್ ಅಬು:
ಮೌಂಟ್ ಅಬು ರಾಜಸ್ಥಾನದ ಏಕೈಕ ಗಿರಿಧಾಮವಾಗಿದೆ. ಇಲ್ಲಿ ನಕ್ಕಿ ಸರೋವರ, ಗುರು ಶಿಖರ್, ಜೈನ ದೇವಾಲಯ, ಮೌಂಟ್ ಅಬು ಅಭಯಾರಣ್ಯ ಹಾಗೂ ಸ್ಥಳೀಯವಾಗಿರುವ ವಿವಿಧ ಕೋಟೆಗಳಿಗೆ ಭೇಟಿ ನೀಡಬಹುದು.
ತಲುಪುವುದು ಹೇಗೆ: ಮಹಾರಾಣಾ ಪ್ರತಾಪ್ ವಿಮಾನ ನಿಲ್ದಾಣದಿಂದ 176 ಕಿ.ಮೀ ದೂರದಲ್ಲಿದೆ. ರಾಜಸ್ಥಾನ ರೈಲು ನಿಲ್ದಾಣದಿಂದ 28 ಕಿ.ಮೀ ಇದೆ.
ಮೌಂಟ್ ಅಬು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.