
ಚಿತ್ರಗಳು: ಚಂದ್ರಪ್ಪ ವಿ
‘ಒಂಚೂರು ಒಗರು–ಸ್ವಲ್ಪ ಸಿಹಿ. ರಾಂಪುರ ವೀಳ್ಯದೆಲೆಯನ್ನು ಬಾಯಿಗಿಟ್ಟರೆ ಮನಸ್ಸು ಹಗುರಾಗುತ್ತೆ, ಬಾಯಿ ಘಮ್‌ಗುಡುತ್ತೆ...’ ಎಂದು ಚಿತ್ರದುರ್ಗದ ಅಜ್ಜಿಯೊಬ್ಬರು ಹೇಳಿದ್ದರು. ನಾನು ಅವರ ಮಾತಿನ ಜಾಡುಹಿಡಿದು ‘ಎಲೆ ರಾಂಪುರ’ಕ್ಕೆ ಹೊರಟೆ.
ಅಲ್ಲಿನ ಖಾಸಗಿ ಬಸ್ ನಿಲ್ದಾಣದ ಕಟ್ಟೆ ಮೇಲೆ ಕುಳಿತಿದ್ದ ರೈತರೊಂದಿಗೆ ಮಾತಿಗಿಳಿದು, ‘ರಾಂಪುರ ಎಲೆ ನೋಡಬೇಕು, ತೋಟಗಳು ಎಲ್ಲಿವೆ’ ಎಂದೆ. ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಮುಗುಳ್ನಕ್ಕರು. ‘ಸಂತೆಯ ದಿನವೇ ಬಂದಿದ್ದೀರಿ, ಸೀದಾ ಹೋಗಿ, ಅಲ್ಲಿ ವೀಳ್ಯದೆಲೆ ಮಾರುತ್ತಿದ್ದಾರೆ, ಅವರನ್ನ ಕೇಳಿ’ ಎಂದರು.
ಬ್ರಹ್ಮರಿಗಿ ಬೆಟ್ಟದ ತಟ ಅಶೋಕ ಸಿದ್ದಾಪುರ ಗ್ರಾಮದಲ್ಲಿರುವ ಅಶೋಕ ಶಾಸಕವನ್ನು ಸಂರಕ್ಷಣೆ ಮಾಡಿರುವುದು
ಎಲೆಪಿಂಡಿ ಮುಂದೆ ನಿಂತು ‘ಇವು ರಾಂಪುರ ಎಲೆಯೇ’ ಎಂದಾಗ ‘ರಾಂಪುರ ಎಲೆ ಈಗೆಲ್ಲಿ, ಅದು ಹತ್ತಾರು ವರ್ಷಗಳ ಹಿಂದಿನ ಕತೆ. ಕಪ್ಪಲಿಯಿಂದ ನೀರು ಸೇದಿ ವೀಳ್ಯದೆಲೆ ತೋಟ ಮಾಡುವ ಕಾಲ ಹೊರಟು ಹೋಗಿದೆ. ರಾಯದುರ್ಗದಿಂದ ತರಿಸಿದ ಎಲೆ ಮಾರುತ್ತಿದ್ದೇನೆ’ ಎಂದರು ವ್ಯಾಪಾರಿ ತಿಪ್ಪಣ್ಣ.
ಮೂವತ್ತು ವರ್ಷಗಳ ಹಿಂದೆ ಬರ ಬಂದಾಗ ರೈತರು ಸಂಡೂರು ಗಣಿ, ಹೊಸಪೇಟೆ, ಬೆಂಗಳೂರಿಗೆ ಕೆಲಸ ಅರಸಿ ಹೋದರು. ಮುಂದೆ ರಾಂಪುರಕ್ಕೆ ಹೆದ್ದಾರಿ ಬಂದ ಮೇಲೆ ಭೂಮಿಗೆ ಚಿನ್ನದ ಬೆಲೆ ಸಿಕ್ಕಿತು. ಎಲೆತೋಟ ನಾಶವಾದವು. ಈಗ ರಾಂಪುರವಷ್ಟೇ ಉಳಿದಿದೆ.
ರಾಂಪುರ ಬದನೆಕಾಯಿ
ಇನ್ನು ‘ರಾಂಪುರ ಬದನೆಕಾಯಿ’ ಕತೆ ಏನಾಯ್ತು? ಎನ್ನುವುದನ್ನು ಕೆದಕುತ್ತಾ ಹೋದೆ. ವಾಂಗೀಬಾತ್, ಪುಲಾವ್‌ಗೆ ವಿಶೇಷ ರುಚಿ ತಂದುಕೊಡುತ್ತಿದ್ದ ಸಣ್ಣಗಾತ್ರದ ಗುಂಡು ಬದನೆಕಾಯಿ ರಾಂಪುರ ಮಣ್ಣಿನ ಜೊತೆ ಬೆರೆತುಕೊಂಡಿತ್ತು. ಕರ್ನಾಟಕ ಮಾತ್ರವಲ್ಲದೇ ಆಂಧ್ರ ಪ್ರದೇಶ, ತಮಿಳುನಾಡಿಗೂ ಈ ಬದನೆಕಾಯಿ ರವಾನೆಯಾಗುತ್ತಿತ್ತು. ವಿಶೇಷ ಸಂದರ್ಭಗಳಲ್ಲಿ ರಾಂಪುರ ಬದನೆ ಬೆಲೆ ಪ್ರತಿ ಕೆ.ಜಿಗೆ ₹ 300 ತಲುಪುತ್ತಿತ್ತು. ವರ್ತಕರು ರಾಂಪುರ ಬದನೆಕಾಯಿಗೆ ಚಿನ್ನದ ಮಾನ್ಯತೆ ಕೊಡುತ್ತಿದ್ದರು.
ರಾಮೇಶ್ವರ ಬೆಟ್ಟದಲ್ಲಿ ಕಂಡ ಹೆಬ್ಬಂಡೆ
‘ರೈತರು ಮೆಕ್ಕೆಜೋಳಕ್ಕೆ ಬದಲಾದ ಕಾರಣ ಬದನೆಕಾಯಿ ಬೆಳೆ ಕುಗ್ಗಿತು. ಈಗ ಶೇಕಡ 10ರಷ್ಟು ಇರಬಹುದಷ್ಟೇ. ಬೆಲೆ ಏರಿಳಿತ, ನೀರಿನ ಕೊರತೆಯಿಂದಾಗಿ ರಾಂಪುರದಲ್ಲಿ ಬದನೆಕಾಯಿ ಬೆಳೆಯುವವರು ಇಲ್ಲವಾಗುತ್ತಿದ್ದಾರೆ’ ಎಂದು ರೈತ ಮುಖಂಡ ನಾಗರಾಜ್ ಹೇಳಿದರು. ಅಲ್ಲಿಗೆಬದನೆಕಾಯಿಯ ಕತೆಯೂ ಮುಗಿದಂತೆ ಆಯಿತು.
‘ರಾಂಪುರ ಈರುಳ್ಳಿ ಹೇಗಿದೆ’ ಎಂಬ ಪ್ರಶ್ನೆಗೆ ರೈತ ಧನಂಜಯಪ್ಪ ‘ದಶಕದ ಹಿಂದೆ ರಾಂಪುರ ಈರುಳ್ಳಿ ವಿಶೇಷ ಸ್ಥಾನ ಪಡೆದಿತ್ತು. ಈಗ ಅಂಥದ್ದೇನೂ ಇಲ್ಲ. ಈರುಳ್ಳಿ ಸಾರ್ವತ್ರಿಕಗೊಂಡಿದೆ. ಚಿತ್ರದುರ್ಗದ ಎಲ್ಲಾ ತಾಲ್ಲೂಕುಗಳಲ್ಲಿ ಬೆಳೆಯುವ ಈರುಳ್ಳಿಯನ್ನೇ ಬೆಳೆಯುತ್ತಿದ್ದೇವೆ’ ಎಂದರು.
ರಾಮ, ಅಶೋಕನೇ ಶಾಶ್ವತ
ರಾಂಪುರ ನಾಲ್ಕು ದಶಕಗಳಿಂದೀಚೆಗೆ ಸಾಕಷ್ಟು ಬದಲಾವಣೆಗೆ ಒಳಗಾಗಿದೆ. ಊರಿನ ಜೊತೆಗಿದ್ದ ಹಲವು ವಿಶೇಷತೆಗಳು ಅಳಿದು ಹೋಗಿವೆ. ಆದರೆ ರಾಂಪುರದ ಜೊತೆಗಿರುವ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಮಾತ್ರ ಶಾಶ್ವತವಾದುದು. ಊರಿನಿಂದ 6 ಕಿ.ಮೀ ದರದಲ್ಲಿರುವ ಜಟಂಗಿ ರಾಮೇಶ್ವರದತ್ತ ಹೊರಟೆ. ಇದು ರಾಂಪುರದಿಂದ 1.8. ಕಿ.ಮೀ ದೂರವಿದೆ. ಸಮುದ್ರಮಟ್ಟದಿಂದ 3.470 ಅಡಿ ಎತ್ತರದಲ್ಲಿದೆ.
ಜಟಂಗಿ ರಾಮೇಶ್ವರ ದೇವಾಲಯ
ಸಾಲು ಬೆಟ್ಟಗುಡ್ಡಗಳು ಮನಸೂರೆಗೊಳ್ಳುವಂತಿದ್ದವು. ಎಲ್ಲಿಂದಲೋ ಕಲ್ಲುಗಳನ್ನು ತಂದು ಜೋಡಿಸಿಟ್ಟಂತೆ ಕಂಡವು. ಜಟಂಗಿ ರಾಮೇಶ್ವರ ಸಣ್ಣ ಬೆಟ್ಟ ಹತ್ತಲು ಒಂದು ಗಂಟೆ ಹಿಡಿಯಿತು. ಕಲ್ಲು ಮೆಟ್ಟಿಲುಗಳ ಪಕ್ಕದಲ್ಲಿ ರೈಲಿಂಗ್ ಅಳವಡಿಸಿರುವ ಕಾರಣ ಏರಲು ಸಹಾಯವಾಯಿತು. ಬೆಟ್ಟದ ತುದಿ ತಲುಪಿದಾಗ ದೇಗುಲದ ಆವರಣದಲ್ಲಿ ಅಸಂಖ್ಯ ಶಿವಲಿಂಗಗಳು ಕಂಡವು!
ಬೆಟ್ಟದ ಐತಿಹಾಸಿಕ ಹಿನ್ನೆಲೆಯತ್ತ ಕಣ್ಣೊರಳಿಸಿದರೆ ಸೀತಾಪಹರಣ ಕಾಲಕ್ಕೆ ಬಂದು ನಿಲ್ಲುತ್ತದೆ. ರಾವಣ ಸೀತೆಯನ್ನು ಹೊತ್ತೊಯ್ಯುವಾಗ ಜಟಾಯು ಪಕ್ಷಿ ಅವನೊಂದಿಗೆ ಕಾದಾಡಿತು. ರಾವಣ ರೆಕ್ಕೆ ಕತ್ತರಿಸಿದಾಗ ಜಟಾಯು ಬಿದ್ದ ಸ್ಥಳವೇ ಜಟಂಗಿ ರಾಮೇಶ್ವರವಾಯಿತು. ಅದರ ಕುರುಹಾಗಿ ಈಗಲೂ ದೊಡ್ಡಬೆಟ್ಟದ ತುದಿಯಲ್ಲಿ ಜಟಾಯು ಸಮಾಧಿಯುಂಟು ಎಂದು ಸ್ಥಳೀಯರು ಹೇಳುತ್ತಾರೆ.
ಸಾಯುವುದಕ್ಕೂ ಮೊದಲು ಜಟಾಯು ಶ್ರೀರಾಮನಿಗೆ ಸೀತಾಪಹರಣ ವಿಷಯ ತಿಳಿಸಿತು. ಈ ಸ್ಥಳದಲ್ಲಿ ಶಿವಲಿಂಗ ಸ್ಥಾಪಿಸುವಂತೆ ಮನವಿ ಮಾಡಿತು. ಜಟಾಯು ಪ್ರಾರ್ಥನೆಯಂತೆ ರಾಮ ಕಲ್ಲುಗಳಲ್ಲೇ ಶಿವಲಿಂಗ ಸ್ಥಾಪಿಸಿದ ಸ್ಥಳ ಜಟಂಗಿ ರಾಮೇಶ್ವರ ದೇವಾಲಯವಾಯಿತು. ರಾಮನಿಂದ ಸ್ಥಾಪಿಸಲ್ಪಟ್ಟ ಜಟಂಗಿ ರಾಮೇಶ್ವರ ಈಗ ಲಕ್ಷಾಂತರ ಭಕ್ತರ ಮನೆ ದೇವರು. ಶಿವರಾತ್ರಿ, ಕಾರ್ತೀಕ, ಶ್ರಾವಣ ಮಾಸದಲ್ಲಿ ಬಲುದೊಡ್ಡ ಉತ್ಸವ ಇಲ್ಲಿ ನಡೆಯುತ್ತದೆ. ಪೌರಾಣಿಕ ಹಿನ್ನೆಲೆಯುಳ್ಳ, ರಾಮಾಯಣಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಸಿಕ್ಕ ಪ್ರಥಮ ಶಾಸಕ ಎನ್ನಲಾದ ಬಂಡೆ ಶಾಸನ (ಕ್ರಿ.ಶ 961) ಬೆಟ್ಟದ ಮೇಲೆ ಕಾಣಬಹುದಾಗಿದೆ.
ಐತಿಹಾಸಿಕ ಹಿನ್ನೆಲೆ
ರಾಂಪುರ ಪೌರಾಣಿಕ ಕತೆಯ ಜೊತೆಗೆ ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದೆ. ಜಟಂಗಿ ರಾಮೇಶ್ವರ ಬೆಟ್ಟವಿಳಿದು ಅಶೋಕ ಸಿದ್ದಾಪುರ ಗ್ರಾಮದಲ್ಲಿರುವ ಬ್ರಹ್ಮಗಿರಿ ಬೆಟ್ಟದ ತಟ ಸೇರಿದಾಗ ಮುಸ್ಸಂಜೆಯಾಗಿತ್ತು. ಇದು ಮೌರ್ಯರ ನೆಲೆವೀಡಾಗಿತ್ತು. ದೇವನಾಂಪ್ರಿಯ ಅಶೋಕನೇ ಬರೆಸಿದ್ದಾನೆ ಎನ್ನಲಾದ ಅಪರೂಪದ ಹೆಬ್ಬಂಡೆ ಅಶೋಕ ಶಾಸನ ಬ್ರಹ್ಮಗಿರಿ ಬೆಟ್ಟದ ತಟದಲ್ಲಿ ಸಿಗುತ್ತದೆ. ಪ್ರಾಕೃತ ಭಾಷೆಯಲ್ಲಿರುವ ಈ ಶಾಸನವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ಸಂರಕ್ಷಣೆ ಮಾಡಿದೆ. ಶಾಸನಕ್ಕೆ ಬಿಸಿಲು ಮಳೆ ತಾಕದಂತೆ ವಿಶೇಷ ವಿನ್ಯಾಸದಲ್ಲಿ ಸಂರಕ್ಷಣಾ ಕಟ್ಟಡ ನಿರ್ಮಿಸಿರುವುದು ನೋಡಲು ಸೊಗಸಾಗಿದೆ. ಸ್ಥಳದಲ್ಲಿ ಉದ್ಯಾನವೂ ಇದ್ದು ನೋಡುಗರ ಮನಸೂರೆಗೊಳ್ಳುತ್ತದೆ.
ರಾಂಪುರ ಬದನೆಕಾಯಿ ಬೆಳೆ
ಅಶೋಕ ಶಾಸನದಿಂದ ಕೊಂಚ ಮುಂದೆ ಸಾಗಿದರೆ ಮೌರ್ಯರ ಸಮಾಧಿಗಳಿವೆ. ಮಣ್ಣಲ್ಲಿ ಮುಚ್ಚಿ ಹೋದ ಸ್ಥಿತಿಯಲ್ಲಿರುವ ಸಮಾಧಿಗಳ ಸುತ್ತಾ ಕಾಂಪೌಂಡ್ ನಿರ್ಮಿಸಿ ಸಂರಕ್ಷಣೆ ಮಾಡಲಾಗಿದೆ. ಇನ್ನೂ ಕೊಂಚ ಮುಂದೆ ಸಾಗಿದಾಗ ರೊಪ್ಪ ಗ್ರಾಮದಲ್ಲಿ ಜೈನ ಬಸದಿಗಳಿವೆ. ರಾಂಪುರದಲ್ಲಿ ಜೈನರೂ ಇದ್ದರು ಎಂಬ ಇತಿಹಾಸ ತೆರೆದುಕೊಳ್ಳುತ್ತದೆ.
ರಾಂಪುರ ಸುತ್ತಮುತ್ತ ಹುದುಗಿರುವ ಐತಿಹಾಸಿಕ ಹಿನ್ನೆಲೆ ಮಾನವ ಸಂಸ್ಕೃತಿ ವಿಕಾಸದ ಹಾದಿಯ ಪ್ರಮುಖ ಕುರುಹಾಗಿದೆ. ಶಿಲಾಯುಗ ಕಾಲದ ಕುರುಹುಗಳೂ ಇಲ್ಲಿವೆ ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಈ ಕಾರಣದಿಂದ ಎಎಸ್‌ಐ, ಧಾರವಾಡದ ಕವಿವಿ ತಜ್ಞರು ಅಮೆರಿಕಾದ ಪೆನ್ಸಿಲ್ವೇನಿಯಾ ವಿವಿ ಇತಿಹಾಸ ತಜ್ಞರ ಸಹಯೋಗದೊಂದಿಗೆ ಉತ್ಖನನ ಆರಂಭಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯೊಂದಿಗೆ ವಿವಿಧ ಹಂತಗಳಲ್ಲಿ ಈ ಹುಡುಕಾಟ ನಡೆಯಲಿದೆ ಎಂದು ಸಂಶೋಧಕರು ತಿಳಿಸುತ್ತಾರೆ.
ಪ್ರಾಕೃತ ಭಾಷೆಯ ಅಶೋಕ ಶಾಸನ
ಪಡುವಣದಲ್ಲಿ ಮುಳುಗುತ್ತಿದ್ದ ಸೂರ್ಯ, ಬ್ರಹ್ಮಗಿರಿ ಬೆಟ್ಟದ ತಟದಲ್ಲಿದ್ದ ಶಿವನ ದೇವಾಲಯ, ಗುಡಿ ಮುಂದಿನ ಕೊಳ ಮನಸ್ಸಿಗೆ ಮುದ ನೀಡಿತು. ಗಡಿ ಗ್ರಾಮ ರಾಂಪುರ ಕಾಲನ ಸುಳಿಗೆ ಸಿಲುಕಿ ಹಲವು ಬದಲಾವಣೆಗಳಿಗೆ ತೆರೆದುಕೊಂಡಿದ್ದರೂ ಇಲ್ಲಿಯ ಪ್ರಾಗೈತಿಹಾಸ ಮಾತ್ರ ತಲೆತಲೆಮಾರುಗಳ ಕುತೂಹಲದ ತಾಣವಾಗಿದೆ.
ತಲೆನೋವಾದ ನಿಧಿ ಹುಡುಕಾಟ
ರಾಂಪುರ ಸುತ್ತಲಿನ ಸ್ಮಾರಕಗಳಲ್ಲಿ ಅಪಾರ ಪ್ರಮಾಣದ ನಿಧಿ ಹುದುಗಿದೆ ಎಂಬ ಗಾಳಿಸುದ್ದಿ ಕಿಡಿಗೇಡಿಗಳಿಗೆ ನಿದ್ದೆಗೆಡಿಸುತ್ತದೆ. ಎಎಸ್‌ಐ ಸಂರಕ್ಷಣೆ ಇದ್ದರೂ ಅಲ್ಲಲ್ಲಿ ನಿಧಿಗಾಗಿ ಸ್ಮಾರಕ ಸ್ಥಳ ಅಗೆದಿರುವುದು ವರದಿಯಾಗುತ್ತಲೇ ಇದೆ. ಈಚೆಗೆ ಜಟಂಗಿ ರಾಮೇಶ್ವರ ಬೆಟ್ಟದಲ್ಲಿರುವ ವೀರಭದ್ರ ಗುಡಿಯ ಮೂರುತಿ ತಳ ಅಗೆದು ದುಷ್ಕರ್ಮಿಗಳು ನಿಧಿ ಹುಡುಕಾಟ ಮಾಡಿದ್ದರು. ಇದರಿಂದಾಗ ಐತಿಹಾಸಿಕ ವೀರಭದ್ರೇಶ್ವರ ಮೂರುತಿ ಬಿದ್ದು ಎರಡು ತುಂಡಾಗಿತ್ತು. ಭಕ್ತರು ಮತ್ತೊಂದು ಮೂರುತಿ ಸ್ಥಾಪನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.