ಗುಜರಾತಿನ ಕೆವಡಿಯಾ ಗ್ರಾಮ ಈಗ ಏಕತಾಮೂರ್ತಿ ಇರುವ ಏಕತಾ ನಗರ. ಸರ್ದಾರ್ ವಲ್ಲಭಭಾಯಿ ಪಟೇಲರ ಭವ್ಯಮೂರ್ತಿ ಇರುವ ಏಕತಾ ನಗರದ ಅನೇಕ ಆಕರ್ಷಣೆಗಳಲ್ಲಿ ಮಿಯಾವಾಕಿ ಅರಣ್ಯವೂ ಸೇರಿದೆ.
ಸ್ಥಳೀಯವಾಗಿ ಬೆಳೆಯುವ ಸಸ್ಯಗಳನ್ನು ಒತ್ತೊತ್ತಾಗಿ ಬೆಳೆಸಿ (ಮೂರು ಸಸಿಗಳನ್ನು ಹತ್ತಿರ ಹತ್ತಿರ ನೆಡುವುದು) ಅವುಗಳಿಗೆ ಬೇಕಾಗುವ ಪೋಷಕಾಂಶಗಳನ್ನು ನೀಡಿ ಊರ ಮಧ್ಯದಲ್ಲಿ ಕಾಡು ನಿರ್ಮಿಸುವುದು. ಇದರಿಂದ ನಶಿಸಿ ಹೋಗುವ ಗಿಡಮರಗಳನ್ನು ಉಳಿಸಿ ಪರಿಸರ ಮಾಲಿನ್ಯವನ್ನೂ ತಡೆಗಟ್ಟುವುದು ಇಂಥ ಕಾಡಿನ ಯೋಜನೆಯ ಉದ್ದೇಶ. ಇದು ಸಾಕಷ್ಟು ಯಶಸ್ವಿ ಕೂಡ ಆಗಿದೆ.
ಜಪಾನಿನ ಸಸ್ಯ ವಿಜ್ಞಾನಿ, ಪರಿಸರ ಪ್ರೇಮಿ ಅಕಿರಾ ಮಿಯಾವಾಕಿ ಅವರು ಎಪ್ಪತ್ತರ ದಶಕದಲ್ಲೇ ಇಂಥ ಯೋಜನೆಯನ್ನು ತಮ್ಮ ದೇಶದಲ್ಲಿ ಸಾಕಾರಗೊಳಿಸಿ ಯಶಸ್ವಿಯೂ ಆದರು. ಮಿಯಾವಾಕಿ ಅರಣ್ಯಕ್ಕೂ ಸಹಜವಾಗಿ ಬೆಳೆಯುವ ಅರಣ್ಯಕ್ಕೂ ಇರುವ ವ್ಯತ್ಯಾಸವಿಷ್ಟೆ–ಮಿಯಾವಾಕಿ ಅರಣ್ಯ ನಗರ ಪ್ರದೇಶಗಳಲ್ಲಿ ಅತ್ಯಂತ ವೇಗವಾಗಿ, ದಟ್ಟವಾಗಿ ಬೆಳೆಸಬಹುದು. ಪರಿಸರದಲ್ಲಿನ ಇಂಗಾಲಾಮ್ಲವನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸಬಹುದು. ಆದ್ದರಿಂದ ಇಂಥ ಅರಣ್ಯಗಳ ಬೆಳವಣಿಗೆಗೆ ಜಗತ್ತಿನಾದ್ಯಂತ ಮಿಯಾವಾಕಿ ಪ್ರೇರಣೆಯಾದರು.
ನಮ್ಮ ದೇಶದಲ್ಲೂ ಇಂಥ ಕಾಡುಗಳು ಈ ಸಸ್ಯ ವಿಜ್ಞಾನಿಯ ಹೆಸರಿನಿಂದಲೇ ಇವೆ. ಇಂಥ ಒಂದು ಕಾಡು ನೋಡ ಸಿಕ್ಕಿದ್ದು ಗುಜರಾತಿನ ಏಕತಾ ನಗರದಲ್ಲಿ. ಟಿಕೆಟ್ ಪಡೆದು ಒಳ ಹೋದಾಗ ಮೊದಲು ಈ ಕಾಡಿನ ವಿವರ ತಿಳಿಸುವ ಏಳೆಂಟು ನಿಮಿಷಗಳ ಸಾಕ್ಷ್ಯಚಿತ್ರವನ್ನು ತೋರಿಸುತ್ತಾರೆ. ನಂತರ ಕಾಡಿನ ಪ್ರವೇಶ. ಕಾಲುದಾರಿಗಳ ಮಾರ್ಗ ತೋರಿಸುವ ವಿವರ, ಬೆಳೆಸಿದ ಕಾಡಿನ ವಿವರ ತಿಳಿಸುವ ಫಲಕಗಳು, ಆಯಾ ಕಾಲಕ್ಕೆ ತಕ್ಕಂತೆ ಅರಳುವ ಹೂಗಳು ಸ್ವಾಗತಿಸುತ್ತವೆ. ಪ್ರವೇಶದಲ್ಲೇ ಇರುವ ಕಾರಂಜಿ, ಅಲ್ಲಲ್ಲಿ ತಂಗುದಾಣಗಳು ಕಣ್ಮನ ಸೆಳೆಯುತ್ತವೆ. ಜೇನುನೊಣಗಳನ್ನು ಸಾಕುವುದರಿಂದ ಆಗುವ ಪ್ರಯೋಜನಗಳು, ಜೇನುತುಪ್ಪದ ವಿವರ ತಿಳಿಸುವ ಫಲಕದ ಹತ್ತಿರ ಕಲ್ಲಿನಲ್ಲಿ ಕೆತ್ತಿದ ಜೇನುಗೂಡು ಗಮನ ಸೆಳೆಯುತ್ತದೆ. ಇಡೀ ಕಾಡನ್ನು ಐದು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಸ್ಥಳೀಯವಾಗಿರುವ ಹೂಗಿಡಗಳು, ಮರಮುಟ್ಟು ಗಿಡಗಳು, ಹೂದೋಟ, ಔಷಧೀಯ ಸಸ್ಯಗಳು, (ಇವೆಲ್ಲವನ್ನೂ ಸ್ಥಳೀಯವಾಗಿ ಬೆಳೆಯುವ ಪ್ರಭೇದಗಳಿಂದಲೇ ಆಯ್ದುಕೊಂಡಿದ್ದಾರೆ) ಮತ್ತು ಡಿಜಿಟಲ್ ಓರಿಯಂಟೇಶನ್ ಕೇಂದ್ರ–ಹೀಗೆ ಮಿಯಾವಾಕಿ ಅರಣ್ಯ ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣವಾಗಿದೆ.
ಊರಿನ ನಡುವೆ ದಟ್ಟವಾದ ಕಾಡೊಂದನ್ನ ಬೆಳೆಸಬಹುದು, ಪರಿಸರ ಸ್ವಚ್ಛತೆ ಕಾಪಾಡುವುದರ ಜೊತೆ, ನಶಿಸುವ ಗಿಡಗಳನ್ನು ರಕ್ಷಿಸಬಹುದು ಎಂಬ ಸಕಾರಾತ್ಮಕ ಚಿಂತನೆ ಈ ಮಿಯಾವಾಕಿ ಕಾಡು ಉಂಟು ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.