ವಾರವೀಡಿ ಕಚೇರಿಯಲ್ಲಿ ದುಡಿದು ದಣಿವಾಗಿದ್ದರೆ ವಾರಾಂತ್ಯದಲ್ಲಿ ಸ್ವಲ್ಪ ನೆಮ್ಮದಿ ಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ನಿಮಗಾಗಿ ಬೆಂಗಳೂರಿನ ಸಮೀಪದಲ್ಲೇ ಇರುವ ಕೆಲವು ಚಾರಣದ ಸ್ಥಳಗಳನ್ನು ತಿಳಿಸಿಕೊಡುತ್ತೆವೆ.
ಗುಡಿಬಂಡೆ:
ಈ ಸ್ಥಳವು 17 ನೇ ಶತಮಾನದ ಕೋಟೆಯಾಗಿದ್ದು, ಇದು ಚಾರಣ ಪ್ರಿಯರಿಗೆ ಸುಂದರ ಅನುಭವ ನೀಡುವ ತಾಣವಾಗಿದೆ. ಇದು ಬೆಂಗಳೂರಿನ ಹೊರವಲಯಲ್ಲಿದೆ.
ಗುಡಿಬಂಡೆಯ ಪ್ರಮುಖ ಆಕರ್ಷಣೆಗಳು:
ಸುಲಭ ಚಾರಣವಾಗಿರುವ ಗುಡಿಬಂಡೆಯನ್ನು ಸ್ನೇಹಿತರು ಮಾತ್ರವಲ್ಲದೇ ಕುಟುಂಬ ಸದಸ್ಯರು ಕೂಡ ಸುಲಭವಾಗಿ ತುದಿಯನ್ನು ತಲುಪುವುದು. 17ನೇ ಶತಮಾನದಲ್ಲಿ ಮಳೆ ನೀರು ಕೊಯ್ಲು ತಂತ್ರಜ್ಞಾನ ಅಳವಡಿಸಿಕೊಂಡಿದ್ದ ಕೋಟೆಯಲ್ಲಿ 19 ಕಲ್ಲು ಕೊಳಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ.
ಇವು ಏಕಕಾಲದಲ್ಲಿ 3 ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಚಾರಣಕ್ಕೆ ಹೋದವರು ಅಲ್ಲಿಯೇ ಇರುವ ಶಿವನ ದೇವಾಲಯಕ್ಕೂ ಭೇಟಿ ನೀಡಬಹುದು.
ಗುಡಿಬಂಡೆಯನ್ನು ತಲುಪುವುದು ಹೇಗೆ?
ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದ್ದು, ಬೆಂಗಳೂರಿನಿಂದ ಕೇವಲ 92 ಕಿ.ಮೀ ದೂರದಲ್ಲಿದೆ. ಈ ತಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಬಾಗೇಪಲ್ಲಿ ಹಾಗೂ ಪೆರೇಸಂದ್ರ ಗ್ರಾಮದ ಮೂಲಕ ತಲುಪಬಹುದು. ಇಲ್ಲಿಗೆ ಟ್ಯಾಕ್ಸಿ ಅಥವಾ ಸ್ವಂತ ವಾಹನದ ಮೂಲಕ ಹೋಗಬಹುದು.
ಮಿಂಚುಕಲ್ಲು ಬೆಟ್ಟ
ಇದು ತುಮಕೂರು ಜಿಲ್ಲೆಯಲ್ಲಿದ್ದು, ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಹಸಿರಿನಿಂದ ತುಂಬಿರುವ ಬೆಟ್ಟ, ಕಲ್ಲಿನ ಹಾದಿಗಳು, ಸುತ್ತಲೂ ಪ್ರಶಾಂತ ವಾತಾವರಣವನ್ನು ಒಳಗೊಂಡಿದೆ.
ಚಾರಣ ಆರಂಭದಲ್ಲಿ ಸುಲಭ ಎನಿಸಿದರು ಹೋಗ್ತಾ ಹೋಗ್ತಾ ಕಷ್ಟದ ಹಾದಿಯಾಗಿರಲಿದೆ. ಮಿಂಚುಕಲ್ಲು ಬೆಟ್ಟಕ್ಕೆ ಹೋದವರು ಜೇನುಕಲ್ಲು ಗುಡ್ಡ, ದೇವರಾಯನದುರ್ಗವನ್ನು ವೀಕ್ಷಿಸಬಹುದು. ಮಾತ್ರವಲ್ಲ, ಬೆಟ್ಟದ ತುದಿಯಲ್ಲಿರುವ ಹನುಮಾನ್ ದೇವಸ್ಥಾನಕ್ಕೂ ಭೇಟಿ ನೀಡಿ ಬರಬಹುದು.
ಮಿಂಚುಕಲ್ಲು ಬೆಟ್ಟಕ್ಕೆ ಹೋಗಲು ಇರುವ ಮಾರ್ಗ:
ಬೆಂಗಳೂರಿನಿಂದ ತುಮಕೂರಿಗೆ ಬಸ್ ಅಥವಾ ರೈಲಿನ ಮೂಲಕ ಹೋಗಿ ಅಲ್ಲಿಂದ ಟ್ಯಾಕ್ಸಿ ಹಿಡಿದು ಮಸಾನಿಪಾಳ್ಯ ಗ್ರಾಮಕ್ಕೆ ತಲುಪಿ ಚಾರಣ ಪ್ರಾರಂಭಿಸಬಹುದು.
ಹುತ್ತರಿ ಬೆಟ್ಟ:
ತುಮಕೂರು ಜಿಲ್ಲೆಯಲ್ಲಿರುವ ಹುತ್ತರಿ ಬೆಟ್ಟ ಒಂದು ಸುಂದರ ಚಾರಣದ ತಾಣವಾಗಿದೆ. ಈ ಕೋಟೆಯನ್ನು 16ನೇ ಶತಮಾನದಲ್ಲಿ ವಿಜಯನಗರದ ಸಾಮಂತರಾಗಿದ್ದ ಕೆಂಪೇಗೌಡರು ನಿರ್ಮಿಸಿದ್ದಾರೆ.
ಇದು ಬೆಂಗಳೂರಿನಿಂದ ಸುಮಾರು 65 ಕಿ.ಮೀ. ದೂರದಲ್ಲಿದ್ದು, ಬೆಟ್ಟದ ತುದಿಯಲ್ಲಿ ಶಂಕರೇಶ್ವರ ದೇವಾಲಯ ಹಾಗೂ ನಂದಿ ಮತ್ತು ಆಂಜನೇಯನ ವಿಗ್ರಹಳನ್ನು ನೋಡಬಹುದು.
ಹುತ್ತರಿ ಬೆಟ್ಟಕ್ಕೆ ತಲುಪಲು ಇರುವ ಮಾರ್ಗಗಳು:
ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 75 (NH75) ಅಥವಾ ಕುಣಿಗಲ್‌ವರೆಗೆ ರೈಲಿನಲ್ಲಿ ಪ್ರಯಾಣಿಸಿ ಹೆಗ್ಗಡ ದೇವನಕೋಟೆ ಅಥವಾ ಹುಲಿಯೂರು ದುರ್ಗವನ್ನು ತಲುಪಬಹುದು. ಸ್ವಂತ ವಾಹನ ಇದ್ದರೆ ಅದರ ಮೂಲಕ ಪ್ರಯಾಣಿಸುವುದು ಉತ್ತಮ.
ನಿಜಗಲ್ ಬೆಟ್ಟ ಅಥವಾ ಸಿದ್ದರ ಬೆಟ್ಟ
ನಿಜಗಲ್ ಬೆಟ್ಟ /ಸಿದ್ದರ ಬೆಟ್ಟ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದು, ಈ ಚಾರಣ ತಾಣವು ಬೆಂಗಳೂರಿನಿಂದ 103 ಕಿ.ಮೀ ದೂರದಲ್ಲಿದೆ. ಐತಿಹಾಸಿಕವಾಗಿ ಕಳೆದು ಹೋಗಿರುವ ಅವಶೇಷಗಳು, ದೇವಾಲಯಗಳು ಮತ್ತು ದರ್ಗಾವನ್ನು ಇಲ್ಲಿ ಕಾಣಬಹುದು.
ಧಾರ್ಮಿಕ ಸಾಮರಸ್ಯವನ್ನು ಸೂಚಿಸುವ ಈ ಬೆಟ್ಟದ ತುದಿಯಲ್ಲಿ, ಒಂದು ಹನುಮಾನ್ ದೇವಸ್ಥಾನ ಹಾಗೂ ಒಂದು ದರ್ಗಾ ಇರುವುದನ್ನು ಕಾಣಬಹದು. ಚಾರಣಕ್ಕೆ ಹೋಗುವವರು ಅಕ್ಟೋಬರ್ ನಿಂದ ಮಾರ್ಚ್ ತಿಂಗಳಿನಲ್ಲಿ ಇಲ್ಲಿಗೆ ಹೋಗುವುದು ಸೂಕ್ತ.
ನಿಜಗಲ್ ಬೆಟ್ಟ ತಲುಪಲು ಇರುವ ಮಾರ್ಗಗಳು:
ಬೆಂಗಳೂರಿನಿಂದ ರೈಲು, ಬಸ್ ಅಥವಾ ಸ್ವಂತ ವಾಹನದಲ್ಲಿ ದಾಬಸ್ ಪೇಟೆ ತಲುಪಿ ನಂತರ ಹೆದ್ದಾರಿಯಲ್ಲಿರುವ ಕಾಮತ್ ಅಪ್ಚಾರ್ ಮೂಲಕ ಹೋಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.