ADVERTISEMENT

ಸುಡುಬಿಸಿಲು, ಬಿಯರ್‌, ಸಂಗೀತ...

ಹೇಮಾ ವೆಂಕಟ್
Published 29 ಅಕ್ಟೋಬರ್ 2018, 19:45 IST
Last Updated 29 ಅಕ್ಟೋಬರ್ 2018, 19:45 IST
ಪ್ರವೇಶ ದ್ವಾರದಲ್ಲೇ ಬ್ಯಾಂಡ್‌ ಸಂಗೀತ ಸ್ವಾಗತ
ಪ್ರವೇಶ ದ್ವಾರದಲ್ಲೇ ಬ್ಯಾಂಡ್‌ ಸಂಗೀತ ಸ್ವಾಗತ   

ಸುಡು ಬಿಸಿಲು, ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಪಾಪ್–ರಾಕ್‌ ಸಂಗೀತ ಸರಮಾಲೆ. ಕೈಯಲ್ಲೊಂದು ಬಿಯರ್‌ ತುಂಬಿದ ಗ್ಲಾಸು, ಬೆರಳ ನಡುವೆ ಉರಿವ ಸಿಗರೇಟು, ಹೆಣೆದುಕೊಂಡ ಬೆರಳುಗಳಿಗೆ ಬಿಸಿಲಾದರೇನು, ದೂಳಾದರೇನು? ಡೋಂಟ್‌ ಕೇರ್. ಇದು ಕಳೆದ ವಾರಾಂತ್ಯನಂದಿ ಬೆಟ್ಟದ ತಪ್ಪಲಿನ ಹಳ್ಳಿಯೊಂದರಲ್ಲಿ ಆಯೋಜನೆಗೊಂಡಿದ್ದ ‘ಬೀನ್‌ ಟೌನ್‌ ಬ್ಯಾಕ್‌ಯಾರ್ಡ್‌ ಫೆಸ್ಟಿವಲ್‌’ನ ಒಂದು ನೋಟ.

ನಂದಿ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ ಸಿಗುವ ತೂಬುಗೆರೆ ಹೋಬಳಿಯ ‘ಕ್ಯಾಂಟರ್‌ ಬರಿ ಕ್ಯಾಸ್ಟಲ್‌’ ಗೇಟಿನ ಒಳಗಿಂದ ಅರ್ಧ ಕಿಲೋಮೀಟರ್‌ ದೂರ ಹೋದರೆ ಅಕೇಶಿಯಾ ತೋಪು ಸಿಗುತ್ತದೆ. ಇದರ ಮಧ್ಯೆ ಇರುವ ಖಾಲಿ ಜಾಗಗಳು ಶನಿವಾರ ಮತ್ತು ಭಾನುವಾರ ಪಾಪ್‌ ಮತ್ತು ರಾಕ್ ಸಂಗೀತದಿಂದ ಸಂಪ್ರೀತಗೊಂಡವು. ತೋಪಿನ ಪ್ರವೇಶದ್ವಾರದಲ್ಲಿಯೇ ಪುಟ್ಟ ವೇದಿಕೆಯ ಮೇಲೆ ಯುವ ಗಾಯಕರ ಬ್ಯಾಂಡ್‌ ಸಂಗೀತ ಹಿತವಾದ ಸ್ವಾಗತ ನೀಡಿತ್ತು. ಅಲ್ಲಿಂದ ಸ್ವಲ್ಪ ದೂರ ಕ್ರಮಿಸಿದರೆ ಮರಗಳ ಮಧ್ಯೆ ತುಂಬಿದ ಗೋಣಿಚೀಲಗಳೇ ಆಸನಗಳಾಗಿ, ಮಧ್ಯೆ ನಾಲ್ಕಾರು ಟಯರ್‌ಗಳನ್ನೇ ಪೇರಿಸಿಟ್ಟು ಟೇಬಲ್ ಮಾಡಿಕೊಂಡು ಕೇರಂ ಆಡುತ್ತಿದ್ದರು.

ಅಲ್ಲಿಂದ ಸ್ವಲ್ಪ ಮುಂದೆ ಸಾಲು ಮರಗಳ ನಡುವೆ ಸಾಗಿದರೆ ಬಯಲು ಜಾಗದಲ್ಲಿ ದೊಡ್ಡ ವೇದಿಕೆಯಲ್ಲಿ ಪಾಪ್‌ ಸಂಗೀತ ನಿರಂತರವಾಗಿ ಕೇಳಿಸುತ್ತಿತ್ತು. ಒಂದಾದ ಮೇಲೊಂದರಂತೆ ಸಂಗೀತಗಾರರ ತಂಡ ವೇದಿಕೆಯ ಮೇಲೇರುತ್ತಿತ್ತು. ವಿದೇಶದ ಅನೇಕ ಬ್ಯಾಂಡ್‌ ತಂಡಗಳು ಬಂದಿದ್ದವು. ಸುಡು ಬಿಸಿಲಿನಲ್ಲಿಯೇ ನಿಂತ ಯುವಜನರು ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು.ಫಾಸ್ಟ್‌ಫುಡ್‌ ಪೂರೈಸುತ್ತಿದ್ದ ಪುಟ್ಟ ಗಾಡಿಗಳ ಮರೆಯಲ್ಲಿ ನಿಂತು ಅನೇಕರುಸಂಗೀತವನ್ನು ಆಸ್ವಾದಿಸುತ್ತಿದ್ದರು.ಮಾವಿನ ತೋಪಿನ ನಡುವೆ ಸಾಗಿದರೆ ಸಿಗುವ ಬಯಲಿನಲ್ಲಿ ಮತ್ತೊಂದು ವೇದಿಕೆ. ಅಲ್ಲಿಯೇ ಪಕ್ಕದ ಪುಟ್ಟ ಮರಗಳ ಅಡಿಯಲ್ಲಿ ರಾತ್ರಿ ಉಳಿಯುವವರಿಗಾಗಿ ಟೆಂಟ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಹಬ್ಬದ ರಂಗು ಹೆಚ್ಚಾದದ್ದು ಸಂಜೆ ಆರರ ನಂತರ. ಒಂದು ಕಡೆ ಕ್ಯಾಂಪ್‌ ಫೈರ್‌ಗೆ ಸಿದ್ದತೆ ನಡೆದಿತ್ತು. ಬೆಳಗಿನ ಯೋಗಾಭ್ಯಾಸಕ್ಕೂ ಅವಕಾಶವಿತ್ತು. ಹೊರಾಂಗಣ ಕ್ಯಾಂಪ್‌ಗಳು, ರೋಪ್‌ ವೇ ಸಾಹಸಗಳಿಗೂ ವ್ಯವಸ್ಥೆ ಮಾಡಲಾಗಿತ್ತು.

ಸಹಜ ಕಲ್ಲು, ಮಣ್ಣಿನ ಹಾದಿಯಲ್ಲಿ ಅಚ್ಚರಿಗೊಂಡಂತೆ ಯುವಕರು ಹೆಚ್ಚೆ ಹಾಕುತ್ತಿದ್ದರು. ಕೆಲವರು ಗಿಡಗಳ ಮರೆಯಲ್ಲಿಯೇ ಸಮಯ ಕಳೆದರು. ಸಂಜೆಯಾಗುತಿದ್ದಂತೆ ವೇದಿಕೆಯ ಬಳಿ ನೆರೆಯತೊಡಗಿದರು. ವೇದಿಕೆಯ ಮುಂಭಾಗದಲ್ಲಿಯೇ ಬಾರ್‌ ತೆರೆಯಲಾಗಿತ್ತು. ಐಸ್‌ಕ್ರೀಂ, ತಂಪು ಪಾನೀಯ, ಹಣ್ಣಿನ ತಾಜಾ ಜ್ಯೂಸ್‌ಗಳು, ಬರ್ಗರ್‌, ಚಾಟ್ಸ್‌, ಮಸಾಲೆ ದೋಸೆ ಮುಂತಾದ ತಿನಿಸುಗಳ ಪುಟ್ಟ ಗಾಡಿಗಳು ಹೊಟ್ಟೆ ತಣಿಸುತ್ತಿದ್ದವು. ದೋಸೆಯ ಬೆಲೆ ನೂರು ರೂಪಾಯಿಯಾದರೂ ತವಾಗೆ ಬಿಡುವೇ ಇರಲಿಲ್ಲ.

ಈ ಬೀನ್‌ಟೌನ್‌ ಫೆಸ್ಟಿವಲ್‌ ಅನ್ನು ಬ್ರಿಟನ್‌ನ ಖ್ಯಾತ ಕಲಾವಿದ ಮೊಹಮ್ಮದ್‌ ರೂಪಿಸಿದ್ದರು. ಆಕೆಯ ಸಂಗೀತದ ಮೂಲಕವೇ ಕಾರ್ಯಕ್ರಮ ಆರಂಭಗೊಂಡಿತ್ತು. ನಮಿತಾ ದಾಸ್‌ ಮತ್ತು ಅನುರಾಗ್‌ ಶಂಕರ್‌, ಅರೇಟ್‌ ಸೌಂಡ್‌, ಪರ್ದಾಫಷ್‌, ಮಲಾಬಿ ಟ್ರಾಪಿಕಲ್, ಲೇಡಿಸ್‌ ಕಂಪಾರ್ಟ್‌ಮೆಂಟ್‌, ದಿ ಸಿಲ್ವೆಸ್ಟರ್‌ ತ್ರಿಯೊ ಮತ್ತು ಈಸಿ ವಂಡರ್‌ಲಿಂಗ್ಸ್‌ ಮುಂತಾದ ಬ್ಯಾಂಡ್‌ ತಂಡಗಳು ಉರಿ ಬಿಸಿಲಿನ ನಡುವೆಯೂ ಸಂಗೀತ ತಂಗಾಳಿಯ ಅನುಭವ ನೀಡಿದವು.ಯೋಗ, ಸನ್‌ಸೆಟ್‌ ರೈಡ್‌, ಪ್ಯಾರಾ ಮೋಟರಿಂಗ್‌ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಇದು ಭಾರತದಲ್ಲಿ ನಡೆದ ಮೊದಲ ಬೀನ್‌ಟೌನ್‌ ಬ್ಯಾಕ್‌ ಯಾರ್ಡ್‌ ಹಬ್ಬ. ಬ್ರಿಟಿಷ್‌ ಬ್ಯಾಂಡ್‌ ಏಷ್ಯನ್‌ ಡಬ್‌ ಫೌಂಡೇಷನ್‌, ಭಾರತೀಯ ಜಾನಪದ ಗಾಯಕ ಕುಟ್ಲೆ ಖಾನ್‌, ಇಂಡಿಯನ್‌ ಮ್ಯೂಸಿಕ್‌ ಬ್ಯಾಂಡ್‌ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮ ನೀಡಿದರು.

ನಗರದ ಜಂಜಡ, ಕೆಲಸದ ಒತ್ತಡವನ್ನು ನಿಸರ್ಗದ ಮಡಿಲ ಸುಂದರ ವಾತಾವರಣದಲ್ಲಿ ಯುವಜನತೆ ನೀಗಿಸಿಕೊಂಡರು.

ಮರಗಳ ನೆರಳಿನಲ್ಲಿ ಆಟದ ಮಜಾ

ಗಮನ ಸೆಳೆದ ಶೆಲ್ಟರ್‌ಗಳು
ವೇದಿಕೆಯ ಬಳಿ ತೆಂಗಿನ ಗರಿಯಿಂದ ಸೃಜನಾತ್ಮಕವಾಗಿ ಮಾಡಿದ ಕೆಲವೇ ಜನ ಕುಳಿತುಕೊಳ್ಳುವಂಥ ತಂಗುದಾಣಗಳು ಗಮನಸೆಳೆದವು. ವೇದಿಕೆಯ ಮುಂದೆ ಸೌಂಡ್‌ ಸಿಸ್ಟಂ ಇಡಲೆಂದು ಆಕರ್ಷಕ ಚಪ್ಪರ ಹಾಕಲಾಗಿತ್ತು. ಅದು ಗರಿ ಬಿಚ್ಚಿ ನಿಂತಪಕ್ಷಿಯ ರೀತಿಯಲ್ಲಿತ್ತು. ಮರದ ಕಂಬಗಳಿಂದ ನಿರ್ಮಾಣಗೊಂಡ ಗೋಪುರ, ಆಕಾಶಕ್ಕೆ ಏಣಿ ಇಟ್ಟಂತೆ ಎಲ್ಲರ ಗಮನಸೆಳೆಯುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.