
ಚಿತ್ರ:ಎಐ
2025ರ ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ವರ್ಷಾಂತ್ಯದಲ್ಲಿ ವಿದೇಶಕ್ಕೆ ಭೇಟಿ ನೀಡುವ ಯೋಜನೆ ಇರುವವರು ಭಾರತದಿಂದ ಆರಾಮವಾಗಿ ಸಮೀಪದ ಕೆಲವು ದೇಶಗಳಿಗೆ ಪ್ರಯಾಣ ಬೆಳೆಸಬಹುದು. ಹಾಗಾದರೆ ಆ ದೇಶಗಳು ಯಾವುವು ಎಂಬುದನ್ನು ನೋಡೋಣ.
ಥಾಯ್ಲೆಂಡ್:
ಆಗ್ನೇಯ ಏಷ್ಯಾದಲ್ಲಿರುವ ಥಾಯ್ಲೆಂಡ್ ಸುಂದರವಾದ ದೇಶವಾಗಿದೆ. ಈ ದೇಶಕ್ಕೆ ಭಾರತೀಯರು ವೀಸಾ ರಹಿತ ಪ್ರಯಾಣ ಮಾಡಬಹುದು. ಇಲ್ಲಿ 60 ದಿನಗಳವರೆಗೆ ವೀಸಾ ಇಲ್ಲದೆ ನೆಲೆಸಬಹುದಾಗಿದೆ. ಸ್ಥಳೀಯವಾಗಿ ಹತ್ತಾರು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಬ್ಯಾಂಕಾಕ್‌ನ ಕಡಲತೀರ, ದ್ವೀಪಗಳು, ವಾಟ್ ಫೋ ಹಾಗೂ ಚಿಯಾಂಗ್ ಮಾಯ್‌ಗಳಿಗೆ ಭೇಟಿ ನೀಡಬಹುದು. ಪ್ರಕೃತಿಕ ಸೌಂದರ್ಯ, ಎತ್ತರದ ಪರ್ವತಗಳಲ್ಲಿ ಚಾರಣ ಮಾಡುವ ಅವಕಾಶಗಳು ಇವೆ.
3,200 ಕಿ.ಮೀ ಇರುವ ಥಾಯ್ಲೆಂಡ್‌ಗೆ ವಿಮಾನದ ಮೂಲಕ 3 ರಿಂದ 4 ಗಂಟೆಯೊಳಗೆ ತಲುಪಬಹುದು.
ವಿಯೆಟ್ನಾಂ:
ಈ ದೇಶವು ಆಗ್ನೇಯ ಏಷ್ಯಾದಲ್ಲಿರುವ ದೇಶವಾಗಿದೆ. ತನ್ನ ಪ್ರಕೃತಿ ಹಾಗೂ ನೈಸರ್ಗಿಕ ಸೌಂದರ್ಯದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದ ದೇಶವಾಗಿದೆ. ಪ್ರವಾಸಿಗರ ಸ್ವರ್ಗವಾಗಿರುವ ವಿಯೆಟ್ನಾಂನಲ್ಲಿ ಕಡಲ ತೀರ, ಮಾರುಕಟ್ಟೆ ಹಾಗೂ ನಗರಗಳೂ ಸೇರಿದಂತೆ ಬೆಟ್ಟಗಳಲ್ಲಿ ಚಾರಣ ಮಾಡಬಹುದಾಗಿದೆ. ಹೋ ಚಿ ಮಿನ್ಹ್ ಸಿಟಿ, ವಾರ್ ಮ್ಯೂಸಿಯಂಗೆ ಭೇಟಿ ನೀಡಬಹುದು. ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಬಹುದಾದ ದೇಶಗಳಲ್ಲಿ ಈ ದೇಶವೂ ಒಂದು.
ಭಾರತದಿಂದ 3,500 ಕಿ.ಮೀ ದೂರವಿರುವ ವಿಯೆಟ್ನಾಂಗೆ ವಿಮಾನದಲ್ಲಿ 4 ರಿಂದ 5 ಗಂಟೆಯೊಳಗೆ ತಲುಪಬಹುದಾಗಿದೆ.
ಶ್ರೀಲಂಕಾ:
ಭಾರತದ ನೆರೆ ರಾಷ್ಟ್ರವಾಗಿರುವ ಶ್ರೀಲಂಕಾವು ಸುಂದರ ದ್ವೀಪವಾಗಿದೆ. ಇಲ್ಲಿ ಅನೇಕ ಪ್ರಾಚೀನ ನಗರಗಳು ಹಾಗೂ ಗಿರಿಧಾಮಗಳನ್ನು ನೋಡಬಹುದು. ಅನುರಾಧಪುರ ಮತ್ತು ಪೊಲೊನ್ನರುವಾ, ಯಾಲಾ, ಗಾಲೆ ಮತ್ತು ಬೆಂಟೋಟಾದಂತಹ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ.
ಇಲ್ಲಿನ ಬೆಟ್ಟಗಳಲ್ಲಿ ಚಾರಣ ಮಾಡಬಹುದು. ಜೊತೆಗೆ ಸಾಹಸ ಕ್ರೀಡೆಗಳನ್ನು ಕಡಲ ತೀರದಲ್ಲಿ ಆಡಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ವೀಸಾ ಪಡೆಯಬಹುದು.
ನೇಪಾಳ:
ನೇಪಾಳವು ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ದೇಶವಾಗಿದೆ. ಇಲ್ಲಿಗೆ ರೈಲು, ವಿಮಾನ ಹಾಗೂ ರಸ್ತೆಯ ಮೂಲಕವು ಪ್ರಯಾಣಿಸಬಹುದು. ಪಶುಪತಿನಾಥ ದೇವಾಲಯ ಮತ್ತು ಬೌಧನಾಥ ಸ್ತೂಪದಂತಹ ಸಾಂಸ್ಕೃತಿಕ ತಾಣಗಳಿಗೆ ನೇಪಾಳವು ಪ್ರಸಿದ್ದಿ ಪಡೆದಿದೆ. ಹಿಮಾಲಯದ ತಪ್ಪಲಿನಲ್ಲಿರುವುದರಿಂದ ಚಾರಣ ಮಾಡಬಹುದು. ಅಕ್ಟೋಬರ್‌ನಿಂದ ಡಿಸೆಂಬರ್ ನಡುವೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ಟರ್ಕಿ:
ಇಲ್ಲಿಗೆ ಭೇಟಿ ನೀಡಲು ಭಾರತೀಯರು ಪ್ರವಾಸಿ ವೀಸಾ ಪಡೆಯಬೇಕು. ಇಲ್ಲಿನ ಪ್ರಮುಖ ತಾಣಗಳಾದ ಇಸ್ತಾನ್‌ಬುಲ್, ಪಮುಕ್ಕಲೆ, ಮೆವ್ಲಾನಾ ಮ್ಯೂಸಿಯಂ ಹಾಗೂ ಅಂಟಲ್ಯಾದ ಕಡಲತೀರಗಳಿಗೆ ಭೇಟಿ ನೀಡಬಹುದು.
ಇಲ್ಲಿಗೆ ವಿಮಾನ ಮಾರ್ಗದಲ್ಲಿ ತಲುಪುವುದು ಉತ್ತಮ. ರಸ್ತೆ ಮಾರ್ಗದ ಮೂಲಕವು ತಲುಪಹುದು. ಆದರೆ ಇದು ವಿಮಾನಕ್ಕಿಂತ ದುಬಾರಿಯಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.