ADVERTISEMENT

ಬೆನ್ನುಮೂಳೆ ಸರ್ಜರಿಗೆ ನೂತನ ತಂತ್ರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:45 IST
Last Updated 17 ಅಕ್ಟೋಬರ್ 2019, 19:45 IST
ಡಾ.ವೆಂಕಟರಮಣ
ಡಾ.ವೆಂಕಟರಮಣ   

ಬೆನ್ನುನೋವು ವಯಸ್ಸನ್ನು ನೋಡಿ ಬರುವುದಿಲ್ಲ. ವಯೋವೃದ್ಧರಿಂದ ಹಿಡಿದು ಯುವಜನಾಂಗಕ್ಕೂ ಇದು ಅಂಟಿದ ಕಾಯಿಲೆ. ಸಾಮಾನ್ಯವಾಗಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಸಿ–ಆರ್ಮ್‌ ಮೂಲಕ ಇಂಟ್ರಾಆಪರೇಟಿವ್‌ ಎಕ್ಸ್‌–ರೇ ಇಮೇಂಜಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆದರೆ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತ್ರಿಡಿ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.

ಸರ್ಜರಿ ಮಾಡುವಾಗ ದೇಹದ ಯಾವ ಭಾಗದಲ್ಲಿ ತೊಂದರೆ ಇದೆ ಎಂದು ಕಂಡುಕೊಳ್ಳುವುದು ಬಹಳ ಮುಖ್ಯ. ಎಕ್ಸರೇ ಹಾಗೂ ಎಂ.ಆರ್‌.ಐ ಸ್ಕ್ಯಾನಿಂಗ್ ಮೂಲಕ ಸರ್ಜರಿ ಮಾಡುವ ಜಾಗವನ್ನು ಕಂಡುಕೊಳ್ಳಲಾಗುತ್ತದೆ. ಆದರೆ ಸರ್ಜರಿ ಮಾಡುವ ಸಂದರ್ಭದಲ್ಲಿ ಇನ್ನೂ ಸ್ಪಷ್ಟವಾದ ನಿಖರತೆ ಬೇಕಾಗುತ್ತದೆ. ಇದಕ್ಕೆ ತ್ರಿಡಿ ಇಮೇಜಿಂಗ್ ವ್ಯವಸ್ಥೆ ಬೇಕು.

ಭಾರತದಲ್ಲಿಯೇ ಮೊದಲ ಬಾರಿಗೆ ಬಿ.ಆರ್‌.ಲೈಫ್‌ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆ ಈ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಜರ್ಮನಿಯಿಂದ ₹1.8 ಕೋಟಿ ಬೆಲೆಗೆ ಹೊಸ ಯಂತ್ರವನ್ನು ಖರೀದಿ ಮಾಡಲಾಗಿದೆ. ಇದು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ವೈದ್ಯರಿಗೆ ನೆರವು ನೀಡಲಿದೆ.

ADVERTISEMENT

ಸವಾಲಿನ ಸರ್ಜರಿ: ವಯೋಸಹಜ ಬೆನ್ನುನೋವು, ಸ್ಥೂಲಕಾಯ, ಅಪಘಾತದಂತಹ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಸಾಕಷ್ಟು ಸವಾಲುಗಳನ್ನು ಒಡ್ಡುತ್ತದೆ. ಇಂತಹ ಸಂದರ್ಭದಲ್ಲಿ ತ್ರಿಡಿ ಇಮೇಜಿಂಗ್ ವ್ಯವಸ್ಥೆ ಸರ್ಜರಿಯನ್ನು ಸುಲಭ ಮಾಡುತ್ತದೆ.

‘ಈ ತಂತ್ರಜ್ಞಾನ ಬರುವುದಕ್ಕಿಂತ ಮೊದಲು ಬೆನ್ನುಮೂಳೆಯ ಕೆಲವು ಭಾಗಗಳಲ್ಲಿ ಆಳವಾದ ಶಸ್ತ್ರಚಿಕಿತ್ಸೆಗೆ ಕೈಹಾಕುವ ಧೈರ್ಯ ಇರಲಿಲ್ಲ. ಸರಿಯಾದ ಜಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡದಿದ್ದರೆ ರೋಗಿ ಅಂಗವೈಕಲ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈಗ ಎಂತಹಾ ಸವಾಲಿನ ಶಸ್ತ್ರಚಿಕಿತ್ಸೆಯಾದರೂ ಸುಲಭದಲ್ಲಿ ಮಾಡಬಹುದು’ ಎಂದು ನರಶಸ್ತ್ರಚಿಕಿತ್ಸಕ ಡಾ.ವೆಂಕಟರಮಣ ಹೇಳಿದರು.

ಡಾ.ವೆಂಕಟರಮಣ ಅವರ ಸಂಶೋಧನೆಯ ಆಧಾರದ ಮೇಲೆ ಬೆನ್ನುನೋವಿಗೆ ಕಾರಣಗಳು ಏನು?

*ಭಾರತದಲ್ಲಿ ಶೇ 6ರಿಂದ 8ರಷ್ಟು ಜನರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಇದರಲ್ಲಿ ಯುವಜನರ ಪ್ರಮಾಣ ಕೂಡ ಹೆಚ್ಚುತ್ತಿರುವುದು ಕಳವಳಕಾರಿ

* ಸೀಟ್‌ಬೆಲ್ಟ್ ಧರಿಸದೇ ವಾಹನ ಚಲಾಯಿಸುವುದು ತುಂಬಾ ದೊಡ್ಡ ಪರಿಣಾಮವನ್ನು ಸೃಷ್ಟಿಸುತ್ತದೆ.

* ಧೂಮಪಾನಿಗಳು ಬೆನ್ನುಮೂಳೆಗೆ ಸಂಬಂಧಿಸಿದ ತೊಂದರೆಗಳಿಗೆ ಬಹಳ ಬೇಗನೆ ಒಳಗಾಗುತ್ತಾರೆ.

* ಬಹುತೇಕ ಬೆನ್ನುಮೂಳೆಯ ತೊಂದರೆಗಳಿಗೆ ಸರ್ಜರಿಯೇ ಅಂತಿಮ ಪರಿಹಾರವಾಗಿರುತ್ತದೆ.

*ವ್ಯಾಯಾಮ ಇಲ್ಲದೆ ಬಹಳ ತಾಸು ಕೂತಿರುವುದು ನೋವಿಗೆ ಕಾರಣವಾಗುತ್ತದೆ.

ಹೊಸತಂತ್ರಜ್ಞಾನದ ಲಾಭಗಳು

*ಸೂಕ್ಷ್ಮವಾದ ಸರ್ಜರಿಗಳಲ್ಲಿ ಸ್ಪಷ್ಟವಾದ ಚಿತ್ರಣ ಸಿಗಲಿದೆ

* ಸರ್ಜರಿ ಬಳಿಕ ಬೇಗನೆ ಗುಣಮುಖರಾಗುತ್ತಾರೆ. ಕಾರಣ, ಸರ್ಜರಿ ಮಾಡುವಾಗ ಅಗತ್ಯವಿರುವಷ್ಟು ಭಾಗವನ್ನು ಮಾತ್ರ ಕತ್ತರಿಸಲಾಗುತ್ತದೆ. ಸಣ್ಣ ರಂಧ್ರದ ಮೂಲಕ ಶಸ್ತ್ರಚಿಕಿತ್ಸೆ ಮಾಡಬಹುದು.

* ಆಸ್ಪತ್ರೆಯಲ್ಲಿ ಹೆಚ್ಚು ದಿನ ಉಳಿಯಬೇಕಿಲ್ಲ. 48 ತಾಸುಗಳ ಒಳಗಾಗಿ ಡಿಸ್‌ಚಾರ್ಜ್‌ ಮಾಡಲಾಗುತ್ತದೆ.

* ಸರ್ಜರಿ ನಡೆಸುವ ಸಮಯ ಕೂಡ ಕಡಿಮೆಯಾಗಿದೆ. ಮೊದಲು 2 ತಾಸು ತೆಗೆದುಕೊಳ್ಳುತ್ತಿದ್ದ ಸರ್ಜರಿಯನ್ನು ಈಗ ಒಂದು ತಾಸು ಒಳಗೆ ಮಾಡಬಹುದು.

* ಬೆನ್ನುಮೂಳೆಯಲ್ಲಿ ಟ್ಯೂಮರ್ ಇದ್ದರೆ ಬೇರೆ ಭಾಗಗಗಳಿಗೆ ತೊಂದರೆಯಾಗದಂತೆ ಸುಲಭವಾಗಿ ತೆಗೆಯಬಹುದು. ಲ್ಯಾಪ್ರೊಸ್ಕೊಪಿ ಮಾಡುವಾಗಲೂ ತ್ರಿಡಿ ಇಮೇಜಿಂಗ್‌ ಬಳಕೆ ಮಾಡಿದರೆ ಕೆಲಸ ಸುಲಭ.

* ಸರ್ಜರಿಗಿಂತ ಮೊದಲು ಈ ತಂತ್ರಜ್ಞಾನವನ್ನು ಬಳಸಲಾಗುವುದಿಲ್ಲ. ಈಗಾಗಲೇ 25 ರೋಗಿಗಳಿಗೆ ಈ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ.

ಬೆಲೆಯಲ್ಲಿ ಬದಲಾವಣೆ ಇಲ್ಲ

‘ಸರ್ಜರಿ ಸಂದರ್ಭದಲ್ಲಿ ಈ ಯಂತ್ರವನ್ನು ಬಳಸುವ ಕಾರಣ ಸರ್ಜರಿ ಮಾಡುವ ಬೆಲೆಯಲ್ಲೇ ಇದನ್ನೂ ಸೇರಿಸಲಾಗುತ್ತದೆ. ಮೊದಲಿಗಿಂತ ಹೆಚ್ಚು ಚಾರ್ಜ್‌ ಮಾಡಲಾಗುತ್ತಿಲ್ಲ. ವೈದ್ಯರಿಗೆ ಈ ಯಂತ್ರ ಸಾಕಷ್ಟು ನೆರವು ನೀಡಿದೆ. ಸವಾಲಿನ ಸರ್ಜರಿಗಳನ್ನೂ ಈಗ ಮಾಡುತ್ತಿದ್ದೇವೆ’ ಎಂದು ಡಾ.ವೆಂಕಟರಮಣ ಹೇಳಿದರು.

ಹೊರದೇಶಕ್ಕೆ ಹೋಗುವ ಅಗತ್ಯವಿಲ್ಲ

‘ಬಿ.ಆರ್‌.ಲೈಫ್‌ನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಹೊಸ ತಂತ್ರಜ್ಞಾನದಿಂದಾಗಿ ರೋಗಿಗಳು ಹೊರದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಈಗಿಲ್ಲ. ನಮ್ಮ ಊರಲ್ಲೇ ಇದ್ದು ಚಿಕಿತ್ಸೆ ಪಡೆದುಕೊಳ್ಳಬಹುದು’ ಎಂದು ಬಿಆರ್‌ಲೈಫ್‌ ಸಮೂಹದ ಸಿಇಒ ಕರ್ನಲ್‌ ಹೇಮರಾಜ್‌ ಸಿಂಗ್‌ ಪರ್ಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.