ADVERTISEMENT

ಟ್ರಾಫಿಕ್‌ ಸಮಸ್ಯೆ ಉಲ್ಬಣಕ್ಕೆ ‘ಬೈಕ್‌ ಬೌನ್ಸ್‌’ ಕೂಡ ಕಾರಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 3:00 IST
Last Updated 29 ಜುಲೈ 2019, 3:00 IST
   

ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆಗಳು ಹೆಚ್ಚುತ್ತಿದೆ ಎಂಬುದು ಅನೇಕ ದಿನಗಳಿಂದ ಕೇಳಿ ಬರುತ್ತಿರುವ ಕೂಗು.ಆದರೆ ಈ ಸಮಸ್ಯೆಗೆ ಬೌನ್ಸ್ ಬೈಕ್ ಕೂಡ ಕಾರಣ ಎಂದು ಕೆಲವರು ಬೆರಳು ಮಾಡಿ ತೋರಿಸುತ್ತಿದ್ದಾರೆ. ಇದಕ್ಕೆ ನಿಜವಾದ ಕಾರಣ ಕಂಪನಿಯವರಾ ಅಥವಾ ಬೌನ್ಸ್‌ ಬೈಕ್ ಬಳಕೆದಾರರಾ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟಾಗ ಬಳಕೆದಾರರೇ ಕಾರಣ ಎಂಬ ಶಾಕಿಂಗ್ ಉತ್ತರ ನೀಡಿದ್ದು ಬಳಕೆದಾರರೇ.

‘ಬೌನ್ಸ್ ಬೈಕ್ ಸೇವೆ ಅನುಕೂಲಕರವಾಗಿದ್ದು, ಬಳಕೆದಾರರು ಸರಿಯಾದ ಕ್ರಮದಲ್ಲಿ ಅದನ್ನು ಬಳಸುತ್ತಿಲ್ಲ.ಪ್ರಯಾಣಿಕರಿಗೆ ಸಂಪರ್ಕ ಸೇತುವೆಯಾಗಲು ಮೆಟ್ರೊ ನಿಲ್ದಾಣಗಳಲ್ಲಿ ಬೈಕ್ ಸೌಲಭ್ಯವಿದೆ. ಪಾರ್ಕಿಂಗ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಆದರೆ ಬಳಕೆದಾರರು ಬೈಕ್ ಸೇವೆಯನ್ನು ಪಡೆಯುತ್ತಿದ್ದು, ಪಾರ್ಕಿಂಗ್ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬೈಕ್‌ಅನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸದೆ ರಸ್ತೆಯ ಪಕ್ಕದಲ್ಲಿ ನಿಲುಗಡೆ ಮಾಡುವುದು ಹೆಚ್ಚುತ್ತಿದೆ. ಇದರಿಂದ ಸಮಸ್ಯೆಗಳು ಉಂಟಾಗುತ್ತಿವೆ ಎನ್ನುತ್ತಾರೆ ಬೌನ್ಸ್ ಬಳಕೆದಾರರೊಬ್ಬರು.

ಸದ್ಯ ಬೌನ್ಸ್ ಬೈಕ್‌ಗಳ ಸಂಖ್ಯೆ 5.000 ಇದ್ದು, ಬಳಕೆದಾರಿಗೆ ಸುಲಭವಾಗಿ ದೊರೆಯುತ್ತಿವೆ. ರಸ್ತೆಯ ಪಕ್ಕದಲ್ಲಿ ಬೌನ್ಸ್ ಬೈಕ್ ನಿಲ್ಲಿಸುವ ವ್ಯಕ್ತಿಯನ್ನು ಮಾತಿಗೆಳೆದಾಗ, ಬಳಕೆದಾರರು ಬೈಕ್ ನಿಯಮಗಳನ್ನು ಪಾಲಿಸುತ್ತಿಲ್ಲ. ಸಮಯದ ಒತ್ತಡದಿಂದ ಕೆಲವೊಮ್ಮೆ ರಸ್ತೆಯ ಬದಿಯಲ್ಲಿ ನಿಲ್ಲಿಸುತ್ತೇವೆ. ಹಾಗಾಗಿ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತದೆ. ಬೈಕ್‌ಅನ್ನು ನಾವು ಸರಿಯಾಗಿ ಬಳಸಿಕೊಂಡರೆ ಯಾವ ಸಮಸ್ಯೆಯೂ ಇರುವುದಿಲ್ಲ. ರಸ್ತೆಯ ಬದಿಯಲ್ಲಿ ಬಿಟ್ಟು ಹೋಗುವುದು ಬಿಡಬೇಕು’ ಎನ್ನುತ್ತಾರೆ ಬೌನ್ಸ್ ಬಳಕೆದಾರ.

ADVERTISEMENT

ಬಳಕೆ ಹೇಗೆ?
ಬೌನ್ಸ್ ಆ್ಯಪ್ ಮೂಲಕ ಈ ಬೈಕ್ ಬಳಸಬಹುದು. ಬಳಕೆದಾರರು ಆ್ಯಪ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌, ಮೊಬೈಲ್ ನಂಬರ್, ನೋಂದಣಿ ಮಾಡಬೇಕು. ಆ್ಯಪ್‌ನಲ್ಲಿ ಬೈಕ್ ನಿಯಮಗಳು ತಿಳಿಸಲಾಗುತ್ತದೆ. ನಂತರ ಬೈಕ್ ಬಳಸಬಹುದು. ಕಿ.ಮೀ. ಗೆ ₹5 ಇದ್ದು, ಬೆಂಗಳೂರಿನ ಯಾವ ನಗರಕ್ಕೆ ಬೇಕಾದರೂ ಹೋಗಬಹುದು. ಬೆಂಗಳೂರು ಬಿಟ್ಟು ಹೊರಡೆ ಹೋಗುವಂತಿಲ್ಲ. ನಿಯಮ ಮೀರಿ ಬೈಕ್ ಚಲಾಯಿಸಿದರೆ, ಬೈಕ್‌ಅನ್ನು ಸೇವೆಯಿಂದ ರದ್ದು ಮಾಡಲಾಗುತ್ತದೆ.

ಪಾರ್ಕಿಂಗ್ ನಿಯಮ ಉಲ್ಲಂಘಿಸಿದರೆ ಸೇವೆಯಿಂದ ರದ್ದು
ಪಾರ್ಕಿಂಗ್ ಇರುವ ಸ್ಥಳಗಳಲ್ಲಿ ಬೈಕ್ ನಿಲ್ಲಿಸದೆ ರಸ್ತೆಗಳಲ್ಲಿ ನಿಲ್ಲಿಸುವ ಬಳಕೆದಾರರನ್ನು ಕೂಡ ಸೇವೆಯಿಂದ ಕೈ ಬಿಡಲಾಗುತ್ತದೆ. ಮೊದಲು ಈ ಬಗ್ಗೆ ನಿಯಮ ಪಾಲಿಸಿ ಎಂಬ ಸಂದೇಶ ನೀಡಲಾಗುತ್ತದೆ. ನಂತರವೂ ಪಾರ್ಕಿಂಗ್ ನಿಯಮ ಪಾಲಿಸದಿದ್ದರೆ ಅಂತಹ ಬಳಕೆದಾರರನ್ನು ಬೌನ್ಸ್ ಸೇವೆಯಿಂದ ಅನರ್ಹಗೊಳಿಸಲಾಗುತ್ತದೆ.

ನಿಯಮ ಉಲ್ಲಂಘಿಸಿದರೆ ದಂಡ
ಬೈಕ್ ಬಳಸುವವರು ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ, ಟ್ರಾಫಿಕ್ ಪೊಲೀಸರಿಂದ ಬೌನ್ಸ್ ಕಂಪನಿಗೆ ನೋಟಿಸ್ ನೀಡಲಾಗುತ್ತದೆ. ದಂಡವನ್ನು ಕಂಪನಿಯೇ ಪಾವತಿಸುತ್ತದೆ. ನಂತರ ಯಾವ ಬಳಕೆದಾರರು ನಿಯಮ ಉಲ್ಲಂಘಿಸಿದ್ದಾರೆ ಎಂಬುದು ಬೌನ್ಸ್‌ ಸರ್ವರ್ ಮೂಲಕ ತಿಳಿದು, ಆ ಬಳಕೆದಾರರು ಮತ್ತೊಮ್ಮೆ ಬೈಕ್ ಬಳಸುವಾಗ ನಿಯಮ ಉಲ್ಲಂಘನೆ ಬಾಕಿ ಹಣ ಪಾವತಿಸಿಬೇಕಾಗುತ್ತದೆ. ಆ ದಂಡ ಪಾವತಿಸಿದರೆ ಮಾತ್ರ ಬೈಕ್ ಬಳಸಲು ಅರ್ಹತೆ ಇರುತ್ತದೆ. ಹೆಚ್ಚು ವೇಗವಾಗಿ ಬೈಕ್ ಚಲಾಯಿಸಿದರೂ ದಂಡ ವಿಧಿಸುವ ಸಾಧ್ಯತೆ ಇರುತ್ತದೆ.

ಸಮಯದ ಮಿತಿಯಿಲ್ಲ
ಯಾವ ಸಮಯದಲ್ಲಿ ಬೇಕಾದರೂ ಬೈಕ್ ಬಳಸಬಹುದು. ದಿನದ 24 ಗಂಟೆಯೂ ಬಳಕೆಗೆ ಸಿಗುತ್ತದೆ. ಎಷ್ಟು ಸಮಯ ಬೈಕ್ ಬಳಕೆಯಾಗಿದೆ ಹಾಗೂ ಎಷ್ಟು ಕಿ.ಮೀ ಚಲಿಸಿದೆ ಎಂಬ ಆಧಾರದ ಮೇಲೆ ಹಣ ಪಾವತಿಸಬೇಕು. ಇದಕ್ಕೆ ಇಷ್ಟೇ ಸಮಯ ಎಂಬ ಮಿತಿಯಿಲ್ಲ.

ಬಳಕೆದಾರರಿಗೆ ಇಲ್ಲಿದೆ ಲಾಭ
ಬೈಕ್ ಚಾಲನೆ ಮಾಡುವ ಸಂದರ್ಭದಲ್ಲಿ ಪೆಟ್ರೋಲ್ ಸಮಸ್ಯೆಯಾದರೆ, ಬಳಕೆದಾರರು ಪೆಟ್ರೋಲ್ ಹಾಕಿಸಿಕೊಳ್ಳಬಹುದು. ₹100 ಪೆಟ್ರೋಲ್ ಹಾಕಿಸಿದರೆ ₹130 ಬೌನ್ಸ್‌ನಿಂದ ಹಣ ಮರುಪಾವತಿಯಾಗುತ್ತದೆ. ಬಳಕೆದಾರರು ಈ ಲಾಭ ಪಡೆಯಬಹುದು. ಮೆಟ್ರೊ ನಿಲ್ದಾಣಗಳ ಪಾರ್ಕಿಂಗ್ ಇರುವ ಯಾವುದೇ ಸ್ಥಳದಲ್ಲಿ ಬೈಕ್ ಪಾರ್ಕಿಂಗ್ ಮಾಡಬಹುದು.

ಬೌನ್ಸ್ ಬಳಕೆದಾರರಿಗೆ ಪಾರ್ಕಿಂಗ್ ಸಮಸ್ಯೆ ಇರುವುದರಿಂದ ಮುಂದಿನ ದಿನಗಳಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುವುದು. ಬಳಕೆದಾರರಿಗೆ ಹೆಚ್ಚಿನ ಅನುಕೂಲಗಳನ್ನು ನೀಡುವ ಉದ್ದೇಶವಿದೆ ಎನ್ನುವುದು ಬೌನ್ಸ್ ಸಹ ಸಂಸ್ಥಾಪಕರ ಮಾತು.

ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ಬೌನ್ಸ್ ಬೈಕ್

*
ಬೈಕ್ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಬೈಕ್ ಬಳಸಬೇಕು. ಬಳಕೆದಾರರು ಕಡ್ಡಾಯವಾಗಿ ನಿಯಮ ಪಾಲನೆ ಮಾಡಿದರೆ ಯಾವ ಸಮಸ್ಯೆ ಇರುವುದಿಲ್ಲ.
–ಅನಿಲ್ ಜಿ. ಬೌನ್ಸ್ ಸಹ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.