
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ (ಜನವರಿ 28) ಬೆಳಿಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರೊಂದಿಗೆ, ಪ್ರಯಾಣಿಸುತ್ತಿದ್ದ ಇನ್ನೂ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಆತಂಕಕಾರಿ ಸಂಗತಿಯೊಂದು ಹರಿದಾಡುತ್ತಿದೆ.
'ದುರಂತ ಸಂಭವಿಸುವ ಮೊದಲೇ, ಆನ್‌ಲೈನ್ ಮಾಹಿತಿಕೋಶ 'ವಿಕಿಪಿಡಿಯಾ'ದಲ್ಲಿ ಅಜಿತ್ ಅವರ ಸಾವಿನ ಮಾಹಿತಿ ಅಪ್‌ಡೇಟ್ ಆಗಿತ್ತು. ಹಾಗಾಗಿ, ಅಪಘಾತ ಸಂಭವಿಸಲಿದೆ ಎಂಬುದು ಗೊತ್ತಾಗಿತ್ತು ಅಥವಾ ಇದೊಂದು ಪಿತೂರಿ ಇದ್ದಿರಬಹುದು' ಎಂದು ಆರೋಪಿಸಲಾಗುತ್ತಿದೆ.
2019ರ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಹಾಗೂ ಶಿವಸೇನಾ (ಯುಬಿಟಿ) ಜೊತೆಗೂಡಿ ಸರ್ಕಾರ ರಚಿಸಲು ಅವಿಭಜಿತ ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ತಯಾರಿ ನಡೆಸಿದ್ದರು. ಆ ನಡುವೆ, ಕೆಲವು ಬೆಂಬಲಿಗ ಶಾಸಕರೊಂದಿಗೆ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಪವಾರ್, ದೇವೇಂದ್ರ ಫಡಣವಿಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ನಂತರದ ಬೆಳವಣಿಗೆಗಳಲ್ಲಿ (2023ರಲ್ಲಿ) ಎನ್‌ಸಿಪಿ ವಿಭಜನೆಯಾಯಿತು. ಅತಿಹೆಚ್ಚು ಶಾಸಕರ ಬೆಂಬಲ ಹೊಂದಿದ್ದ ಅಜಿತ್ ಅವರೇ, 'ನಿಜವಾದ' ಎನ್‌ಸಿಪಿ ನಾಯಕ ಎನಿಸಿಕೊಂಡಿದ್ದರು.
2024ರ ವಿಧಾನಸಭೆ ಚುನಾವಣೆ ಬಳಿಕ ಮತ್ತೊಮ್ಮೆ ಮಹಾ ಉಪಮುಖ್ಯಮಂತ್ರಿಯಾಗಿದ್ದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಾರಾಮತಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ.
ವಿಕಿಪಿಡಿಯಾದಲ್ಲಿರುವುದು ನಿಜವೇ?
ಅಜಿತ್ ಸಾವಿನ ದಿನಾಂಕವನ್ನು, ದುರಂತಕ್ಕೂ ಮೊದಲೇ ವಿಕಿಪಿಡಿಯಾದಲ್ಲಿ ಅಪ್‌ಡೇಟ್ ಮಾಡಲಾಗಿತ್ತು ಎಂಬುದು ನಿಜವಲ್ಲ. ಸಾರ್ವತ್ರಿಕ ಸಂಯೋಜಿತ ಸಮಯದ (UTC) ಟೈಮ್‌ಸ್ಟ್ಯಾಂಪ್ ಅನ್ನು ಸರಿಯಾಗಿ ಅರ್ಥೈಸಿಕೊಳ್ಳದ ಹಾಗೂ ದುರುದ್ದೇಶದಿಂದ ಎಡಿಟ್ ಮಾಡಿದ ಸ್ಕ್ರೀನ್‌ಶಾಟ್‌ಗಳನ್ನು ನೆಟ್ಟಿಗರು ಹಂಚಿಕೊಂಡಿರುವ ಕಾರಣ ಗೊಂದಲ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.
ವಿಕಿಪಿಡಿಯಾದಲ್ಲಿ ಭಾರತೀಯ ಪ್ರಮಾಣಿತ ಸಮಯ (IST) ಬದಲಾಗಿ ಯುಟಿಸಿ ಬಳಕೆ ಮಾಡಲಾಗುತ್ತದೆ.
ಅಜಿತ್ ಅವರಿದ್ದ ವಿಮಾನ ಜನವರಿ 28ರ ಬೆಳಿಗ್ಗೆ 8.50ಕ್ಕೆ ಪತನಗೊಂಡು ದುರಂತ ಸಂಭವಿಸಿತ್ತು. ಆದಾಗ್ಯೂ, ಅವರು ಮೃತಪಟ್ಟಿರುವುದು ಖಚಿತವಾದ ನಂತರವೇ ವಿಕಿಪಿಡಿಯಾದಲ್ಲಿ ಅಪ್‌ಡೇಟ್ ಮಾಡಲಾಗಿದೆ. ಅಂದರೆ, ಅಜಿತ್ ಅವರ ಹೆಸರಿನಲ್ಲಿರುವ ಪುಟ ಬೆಳಿಗ್ಗೆ 9.30ರ ಸುಮಾರಿಗೆ ಅಪ್‌ಡೇಟ್ ಆಗಿದೆ.
ಭಾರತೀಯ ಕಾಲಮಾನವು ಯುಟಿಸಿಗಿಂತ ಸುಮಾರು 5 ಗಂಟೆ 30 ನಿಮಿಷ ಮುಂದೆ ಇದೆ. ಭಾರತೀಯ ಕಾಲಮಾನಕ್ಕಿಂತ ಹಿಂದೆ ಇರುವ ಪ್ರದೇಶ/ದೇಶದಿಂದ ಅಜಿತ್ ಅವರ ಪುಟ ಎಡಿಟ್ ಆಗಿರಬಹುದು. ಹಾಗಾಗಿಯೇ, ವಿಕಿಪಿಡಿಯಾದ ಟೈಮ್ ಲಾಗ್‌ನಲ್ಲಿ ಅಪ್‌ಡೇಟ್ ಸಮಯ 4:00 am UTC ಎಂದು ಕಾಣುತ್ತಿದೆ. ಇದೇ ಕಾರಣದಿಂದಾಗಿ, ಆರಂಭದಲ್ಲಿ ಸಾವಿನ ದಿನಾಂಕ 'ಜನವರಿ 27' ಎಂದೇ ಕಾಣುತ್ತಿತ್ತು. ನಂತರ ಅದನ್ನು ಬದಲಿಸಲಾಗಿದೆ. ಈ ಕುರಿತು ಸರಿಯಾದ ಮಾಹಿತಿ ಕೊರತೆಯಿಂದ ಕೆಲವರು, ದುರಂತಕ್ಕೂ ಮೊದಲೇ ಮಾಹಿತಿ ಅಪ್‌ಡೇಟ್ ಮಾಡಲಾಗಿದೆ ಎಂಬ ತಪ್ಪು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಾವಿನ ಸುದ್ದಿ ನಂತರವೇ ಅಪ್‌ಡೇಟ್
ಅಪಘಾತದ ಸುದ್ದಿ ಸಾರ್ವಜನಿಕವಾಗಿ ಪ್ರಕಟವಾದ ನಂತರವೇ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗಿದೆ. UTC ಟೈಮ್ ಸ್ಟ್ಯಾಂಪ್ ಬಳಕೆಯಿಂದಾಗಿ ಮೊದಲೇ ಅಪ್‌ಡೇಟ್ ಆಗಿರುವಂತೆ ಕಾಣುತ್ತಿದೆ ಎಂದು ಡಿಜಿಟಲ್ ವಿಶ್ಲೇಷಕರು ಖಚಿತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್‌ಗಳ ವಿಚಾರದಲ್ಲಿ, ಅದರಲ್ಲೂ ಗಣ್ಯರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈ ರೀತಿ ಆಗುವುದು ಸಾಮಾನ್ಯ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.