ಮೇಲ್ಸೇತುವೆಯೊಂದು ಕುಸಿಯುತ್ತಿರುವ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಬಿಹಾರದಲ್ಲಿ ಈ ಹಿಂದೆ ಸಂಭವಿಸಿದ್ದ ಸೇತುವೆ ಕುಸಿತದ ಸರಣಿ ಪ್ರಕರಣಗಳನ್ನು ಪ್ರಸ್ತಾಪಿಸಿ, ‘ಸಿವಾನ್ ಮತ್ತು ಛಪ್ರಾ ಜಿಲ್ಲೆಗಳಲ್ಲಿ ಒಂದೇ ದಿನ ಐದು ಸೇತುವೆಗಳು ಕುಸಿದಿವೆ. ಇದು ಸರ್ಕಾರ ನಡೆಸಿರುವ ಭ್ರಷ್ಟಾಚಾರವಲ್ಲವೇ? ಎಂಬ ಒಕ್ಕಣೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಹಲವರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್ ಹಂಚಿರುವುದು ಕಂಡು ಬಂತು. ಬಿಹಾರದಲ್ಲಿ ಮತ್ತೆ ಸೇತುವೆ ಕುಸಿದಿದೆಯೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಲಾಯಿತು. ಆದರೆ, ಈ ಬಗ್ಗೆ ನಂಬಲರ್ಹವಾದ ಮಾಧ್ಯಮ ವರದಿಗಳು ಸಿಗಲಿಲ್ಲ. ವಿಡಿಯೊ ತುಣುಕನ್ನು ಕೂಲಕಂಷವಾಗಿ ಪರಿಶೀಲನೆಗೆ ಒಳಪಡಿಸಿದಾಗ, ಅದು ಎಐ ವಿಡಿಯೊ ಆಗಿರಬಹುದೇ ಎಂಬ ಅನುಮಾನ ಬಂತು. ವಿಡಿಯೊ ತುಣುಕನ್ನು ಹೈವ್ ಮಾಡರೇಷನ್ ಎಂಬ ಎಐ ಪತ್ತೆ ಟೂಲ್‌ನಲ್ಲಿ ಹಾಕಿದಾಗ, ಅದು ಎಐ ವಿಡಿಯೊ ಎಂಬುದು ದೃಢಪಟ್ಟಿತು. ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಿದ ವಿಡಿಯೊವನ್ನು ಬಿಹಾರದಲ್ಲಿ ಸೇತುವೆ ಕುಸಿದಿರುವ ವಿಡಿಯೊ ಎಂದು ಬಿಂಬಿಸಿ ಪೋಸ್ಟ್ ಮಾಡಲಾಗಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.