ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷದ ಸಮಯದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ರಾವಲ್ಪಿಂಡಿಯ ಕ್ರಿಕೆಟ್ ಮೈದಾನದ ಮೇಲೆ ಡ್ರೋನ್ ದಾಳಿ ನಡೆಸಿ, ಇಡೀ ಮೈದಾನವನ್ನೇ ನಾಶ ಪಡಿಸಿದೆ ಎಂದು ಪ್ರತಿಪಾದಿಸುತ್ತಾ ಕ್ರೀಡಾಂಗಣವೊಂದು ಸಂಪೂರ್ಣವಾಗಿ ಹಾನಿಗೀಡಾದ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ. ಕ್ರೀಡಾಂಗಣದ ಚಿತ್ರ ನಿಜವಾದ್ದಲ್ಲ.
ಗೂಗಲ್‌ನಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ರಾವಲ್ಪಿಂಡಿ ಕ್ರೀಡಾಂಗಣದ ಬಗ್ಗೆ ಹುಡುಕಾಟ ನಡೆಸಿದಾಗ ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವೆಬ್‌ಸೈಟ್ ಹಂಚಿಕೊಂಡಿದ್ದ ರಾವಲ್ಪಿಂಡಿ ಕ್ರೀಡಾಂಗಣದ ಹಲವು ಚಿತ್ರಗಳು ಸಿಕ್ಕಿದವು. ಆ ಪೈಕಿ ಪೋಸ್ಟ್‌ನಲ್ಲಿರುವ ಚಿತ್ರ ಮತ್ತು ವೆಬ್‌ಸೈಟ್‌ನಲ್ಲಿರುವ ಮೂಲ ಚಿತ್ರವೊಂದನ್ನು ಪರಸ್ಪರ ಹೋಲಿಸಲಾಯಿತು. ಆದರೆ, ಎರಡೂ ಚಿತ್ರಗಳು ಭಿನ್ನವಾಗಿರುವುದು ದೃಢಪಟ್ಟಿತು. ನಾಶ ಮಾಡಲಾದ ಕ್ರೀಡಾಂಗಣದ ಚಿತ್ರ ಎಂದು ಹೇಳಲಾದ ಚಿತ್ರವನ್ನು ಕೂಲಕಂಷ ಪರಿಶೀಲನೆಗೆ ಒಳಪಡಿಸಿದಾಗ, ಅದು ಕೃತಕ ಬುದ್ಧಿಮತ್ತೆ (ಎಐ) ಚಿತ್ರ ಆಗಿರಬಹುದು ಎಂಬ ಅನುಮಾನ ಮೂಡಿತು. ಎಐ ಚಿತ್ರವನ್ನು ಪತ್ತೆ ಹಚ್ಚುವ ‘ವಾಸ್‌ಇಟ್‌ಎಐ’ ಎಂಬ ಟೂಲ್‌ನಲ್ಲಿ ಚಿತ್ರವನ್ನು ಅದು ಹಾಕಿದಾಗ ಅದು ಎಐ ಚಿತ್ರ ಎಂಬುದು ದೃಢಪಟ್ಟಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.