ADVERTISEMENT

ಮಂಗಳೂರು ಗೋಲಿಬಾರ್‌; ವೈರಲ್‌ ಆಗಿದ್ದು ಜಾರ್ಖಂಡ್‌ ಪೊಲೀಸರ ಅಣಕು ಪ್ರದರ್ಶನ

ಫ್ಯಾಕ್ಟ್‌ಚೆಕ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2019, 9:03 IST
Last Updated 24 ಡಿಸೆಂಬರ್ 2019, 9:03 IST
ಮಂಗಳೂರು ಗೋಲೀಬಾರ್‌ ವಿಡಿಯೊ ಫ್ಯಾಕ್ಟ್‌ಚೆಕ್‌
ಮಂಗಳೂರು ಗೋಲೀಬಾರ್‌ ವಿಡಿಯೊ ಫ್ಯಾಕ್ಟ್‌ಚೆಕ್‌    

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಡಿಸೆಂಬರ್‌ 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಪೊಲೀಸರು ನಡೆಸಿದ ಗೋಲಿಬಾರ್‌ಗೆ ಇಬ್ಬರು ಬಲಿಯಾದರು. ಆ ದಿನ ಪೊಲೀಸರು ನಡೆಸಿದ ಫೈರಿಂಗ್‌ ದೃಶ್ಯಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಆ ವಿಡಿಯೊ ರೆಕಾರ್ಡ್‌ ಆಗಿರುವುದು 2017ರಲ್ಲಿ!

ನಿಷೇಧಾಜ್ಞೆ ಉಲ್ಲಂಘಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿಗೆ ಜಲೀಲ್‌ ಮತ್ತು ನೌಶೀನ್‌ ಬಲಿಯಾದರು.ಈಗಾಗಲೇ 'ಮಂಗಳೂರು ಪೊಲೀಸರ ಗೋಲಿಬಾರ್‌ ದೃಶ್ಯಗಳು' ಎಂದು ವಿಡಿಯೊ ಹಂಚಿಕೆಯಾಗುತ್ತಿದೆ. ವಾಟ್ಸ್‌ಆ್ಯಪ್‌ ಮತ್ತು ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಂಚಿಕೆಯಾಗಿರುವ ವಿಡಿಯೊ 2017ರ ಅಕ್ಟೋಬರ್‌ನಲ್ಲಿ ಪೊಲೀಸರು ನಡೆಸಿದ್ದ ಅಣಕು ಪ್ರದರ್ಶನದ ದೃಶ್ಯಗಳು. ಜಾರ್ಖಂಡ್‌ ಪೊಲೀಸರು ಖುಂಟಿ ಜಿಲ್ಲೆಯಲ್ಲಿ ನಡೆಸಿದ ಗೋಲಿಬಾರ್‌ ಅಣಕು ಪ್ರದರ್ಶನದ ವಿಡಿಯೊ ಅದಾಗಿದೆ.

ಇದೊಂದೇಫೇಸ್‌ಬುಕ್‌ದಿಂದವಿಡಿಯೊ 63 ಸಾವಿರಕ್ಕೂ ಹೆಚ್ಚು ಬಾರಿ ಹಂಚಿಕೆಯಾಗಿದೆ ಹಾಗೂ 3.6 ಸಾವಿರ ಕಮೆಂಟ್‌ಗಳನ್ನು ಪಡೆದಿದೆ. ಟ್ವಿಟರ್‌ ಹಾಗೂ ವಾಟ್ಸ್‌ಆ್ಯಪ್‌ ಮೂಲಕವೂ ಈ ವಿಡಿಯೊ ಹಂಚಿಕೆಯಾಗಿದೆ. ಮರು ಹಂಚಿಕೆಗಳ ಮೂಲಕ ಈಗಾಗಲೇ ವಿಡಿಯೊ ಲಕ್ಷಾಂತರ ಜನರನ್ನು ತಲುಪಿದೆ.

ವಿಡಿಯೊದಲ್ಲಿ ಕಾಣುವುದೇನು?

ADVERTISEMENT

ಹಸಿರು ಟೊಪ್ಪಿ, ಖಾಕಿ ಸಮವಸ್ತ್ರ ಧರಿಸಿರುವ ಪೊಲೀಸರು ಮಂಡಿಯೂರಿ ಬಂದೂಕು ಹಿಡಿದು ಗುಂಪಿನತ್ತ ಗುರಿ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬಂದೂಕಿನಿಂದ ಗುಂಡುಗಳು ಸಿಡಿಯುತ್ತವೆ, ಎದುರಿನ ಗುಂಪು ಚದುರುತ್ತದೆ ಹಾಗೂ ಇಬ್ಬರು ಅಲ್ಲಿಯೇ ಕುಸಿಯುತ್ತಾರೆ. ತಕ್ಷಣವೇ ಸ್ಟ್ರೆಚರ್‌ ಹಿಡಿದು ಬಂದ ಸಿಬ್ಬಂದಿ ಕುಸಿದು ಬಿದ್ದವರನ್ನು ಹೊತ್ತು ಆ್ಯಂಬುಲೆನ್ಸ್‌ಗೆ ಸಾಗಿಸುತ್ತಾರೆ. ಅದರ ಹಿಂದೆಯೇ ಲಾಟಿ ಹಿಡಿದ ಭದ್ರತಾ ಸಿಬ್ಬಂದಿ ಮುನ್ನಡೆಯುತ್ತಾರೆ.

ಪೊಲೀಸರು ನಡೆಸಿದ್ದ ಆ ಅಣಕು ಪ್ರದರ್ಶನದಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟಿರಲಿಲ್ಲ ಅಥವಾ ಗಾಯಗೊಂಡಿರಲಿಲ್ಲ. ಅದೇ ವಿಡಿಯೊವನ್ನು ಈಗ ಮಂಗಳೂರಿನಲ್ಲಿ ನಡೆದಿರುವ ಗೋಲಿಬಾರ್‌ ದೃಶ್ಯಗಳು ಎಂದು ಬಿಂಬಿಸಲಾಗುತ್ತಿದೆ. ಯಾರಿಂದಲೋ ಬಂದ ವಿಡಿಯೊ ಪರಿಶೀಲನೆಗೆ ಒಳಪಡಿಸಿದರೆ ಜನರೂ ಹಂಚಿಕೊಳ್ಳುತ್ತ ಮತ್ತೊಮ್ಮೆ ಆ ವಿಡಿಯೊ ಚರ್ಚೆಗೆ ಒಳಪಡುವಂತೆ ಮಾಡಿದ್ದಾರೆ. ಅದೇ ವಿಡಿಯೊ ಮುಂದಿಟ್ಟುಕೊಂಡು; ಪೊಲೀಸರ ಕಾರ್ಯಕ್ಕೆ ಕೆಲವರು ಮೆಚ್ಚುಗೆಯನ್ನೂ ಸೂಚಿಸಿದ್ದರೆ, ಇನ್ನೂ ಕೆಲವರು ಇದೆಂಥ ಮಾನವೀಯತೆ ಎಂದು ಪ್ರಶ್ನಿಸಿದ್ದಾರೆ. ಹೆಚ್ಚಿನವರು ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದೆದ್ದಾರೆ. ಹಳೆಯ ವಿಡಿಯೊ ಮಾತಿನ ಜಟಾಪಟಿ, ಆರೋಪ–ಪ್ರತ್ಯಾರೋಪಗಳು, ಗೊಂದಲ ಹಾಗೂ ಆತಂಕ ಸೃಷ್ಟಿಸಿರುವುದಂತೂ ಸತ್ಯ.

ವೈರಲ್‌ ನಂ 1

2018ರ ಅಕ್ಟೋಬರ್‌: 'ಕಾಶ್ಮೀರದಲ್ಲಿ ನಾಗರಿಕರು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಸಮೀಪದಿಂದಲೇ ಕಾಶ್ಮೀರಿಗಳನ್ನು ಭಾರತದ ಭದ್ರತಾ ಪಡೆ ಹತ್ಯೆ ಮಾಡಿದೆ, ಮಾನವ ಹಕ್ಕುಗಳ ಆಯೋಗ ನಿದ್ರೆಸುತ್ತಿದೆಯೇ?' ಎಂದೆಲ್ಲ ಆರೋಪಿಸಿ ವಿಡಿಯೊ ಹಂಚಿಕೊಳ್ಳಲಾಗಿತ್ತು. ಬಹುತೇಕ ಪಾಕಿಸ್ತಾನ ಮೂಲದ ಟ್ವೀಟಿಗರಿಂದ ಆ ವಿಡಿಯೊ 2018ರ ಅಕ್ಟೋಬರ್‌ನಲ್ಲಿ ಹಂಚಿಕೆಯಾಗಿತ್ತು. ಅದನ್ನು ಭಾರತದ ಹಲವು ಟ್ವೀಟಿಗರೂ ಹಂಚಿಕೊಳ್ಳುವ ಮೂಲಕ 2017ರ ಅಣಕು ಪ್ರದರ್ಶನದ ವಿಡಿಯೊ ವೈರಲ್‌ ಆಗಿತ್ತು. ‌

ವೈರಲ್‌ ನಂ 2

2017ರ ಜೂನ್‌, ಮಧ್ಯ ಪ್ರದೇಶದ ಮಂದಸೋರ್‌ನಲ್ಲಿ ರೈತರ ನಡೆಸಿದ ಪ್ರತಿಭಟನೆ ಹಿಂಸಾ ರೂಪ ಪಡೆದು ಭದ್ರತಾ ಸಿಬ್ಬಂದಿ ಗೋಲಿಬಾರ್‌ ನಡೆಸಿದ್ದರು. ಆ ಗಲಭೆಯಲ್ಲಿ 6 ಮಂದಿ ಸಾವಿಗೀಡಾಗಿದ್ದರು. ಆ ಸಂದರ್ಭದಲ್ಲಿ ಪೊಲೀಸರು ನಡೆದಿದ್ದ ಫೈರಿಂಗ್‌ ವಿಡಿಯೊ ಎಂದು 2018ರ ಜುಲೈನಲ್ಲಿ ಅದೇವಿಡಿಯೊ ವೈರಲ್‌ ಆಗಿತ್ತು. ನ್ಯಾಯ ಕೇಳಲು ಬಂದ ರೈತರನ್ನು ಕೊಂದ ಸರ್ಕಾರ ಎಂಬ ಒಕ್ಕಣೆಗಳೊಂದಿಗೆ ವಿಡಿಯೊ ಹಂಚಿಕೊಳ್ಳಲಾಗಿತ್ತು.

ವೈರಲ್‌ ನಂ 3

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದು ಪಡಿಸಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ ನಂತರದಲ್ಲಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದಿರುವ ದೌರ್ಜನ್ಯ ಎಂದು ಇದೇ ವಿಡಿಯೊ ಹಂಚಿಕೊಳ್ಳಲಾಗಿತ್ತು. ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸುತ್ತಿದ್ದಾರೆ, ಈ ಮೂಲಕ ಸರ್ಕಾರ ಪ್ರತಿಭಟನೆಯನ್ನು ನಿಯಂತ್ರಿಸುತ್ತಿದೆ ಎಂದು 2019ರ ಆಗಸ್ಟ್‌ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿತ್ತು.

ವೈರಲ್‌ ನಂ 4

ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ದಾಳಿ ಗುಂಡು ಹಾರಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅದೇ ವಿಡಿಯೊ ಹಂಚಿಕೊಳ್ಳಲಾಗಿತ್ತು. 2019ರ ಡಿಸೆಂಬರ್‌ ಎರಡನೇ ವಾರ ಅಸ್ಸಾಂನಲ್ಲಿ ಪ್ರತಿಭಟನೆ ನಡೆದಿತ್ತು. ಹಂಚಿಕೊಳ್ಳಲಾಗಿದ್ದ ಕೆಲವುಟ್ವಿಟರ್‌ ಖಾತೆಗಳಿಂದ ಈಗ ವಿಡಿಯೊ ಅಳಿಸಿ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.