ADVERTISEMENT

ಕೇರಳ:ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿದ್ದದ್ದು ಎಂಎಸ್‌ಎಫ್ ಧ್ವಜ, ಪಾಕ್ ಧ್ವಜ ಅಲ್ಲ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 14:15 IST
Last Updated 3 ಸೆಪ್ಟೆಂಬರ್ 2019, 14:15 IST
   

ಕೋಯಿಕ್ಕೋಡ್: ಕಾಲೇಜು ಚುನಾವಣಾ ಪ್ರಚಾರದ ವೇಳೆ ಪಾಕಿಸ್ತಾನ ಧ್ವಜ ಬಳಸಿದ್ದಕ್ಕಾಗಿ ಕೋಯಿಕ್ಕೋಡ್ ಜಿಲ್ಲೆಯ ಸಿಲ್ವರ್ ಆರ್ಟ್ಸ್ ಕಾಲೇಜಿನ 30 ವಿದ್ಯಾರ್ಥಿಗಳನ್ನು( ಟೈಮ್ಸ್ ನೌ ಸುದ್ದಿ ಪ್ರಕಾರ 25 ವಿದ್ಯಾರ್ಥಿಗಳು) ಕೇರಳ ಪೊಲೀಸರು ಬಂಧಿಸಿದ್ದಾರೆ ಎಂದು ಆಗಸ್ಟ್ 31ರಂದು ಕೆಲವು ಮಾಧ್ಯಮಗಳು ಬ್ರೇಕಿಂಗ್ ಸುದ್ದಿ ಪ್ರಕಟಿಸಿದ್ದವು.

ಈ ವಿಷಯದ ಬಗ್ಗೆ ವರದಿ ಮಾಡುತ್ತಿದ್ದ ವರದಿಗಾರರಲ್ಲಿ ಟೈಮ್ಸ್ ನೌ ವಾಹಿನಿಯ ನಿರೂಪಕರು, ಯೆಸ್, ವಿವೇಕ್ ಅಲ್ಲಿ ನಡೆದಿರುವುದು ಏನು ಎಂಬುದರ ಬಗ್ಗೆ ಮಾಹಿತಿ ನೀಡುತ್ತೀರಾ? ಅಲ್ಲಿಪಾಕಿಸ್ತಾನದ ಧ್ವಜ ಬಳಸುತ್ತಿರುವುದನ್ನು ದೃಶ್ಯಗಳಲ್ಲಿ ನಾವು ನೋಡುತ್ತಿದ್ದೇವೆ ಎಂದು ಹೇಳುತ್ತಿದ್ದರು. ವರದಿಗಾರರು ನಿರೂಪಕರು ಹೇಳಿದ್ದನ್ನೇ ಪುನರುಚ್ಚರಿಸುತ್ತಿದ್ದರು.

ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್, ಮೈ ನೇಷನ್, ಓಪ್ ಇಂಡಿಯಾ, ದೈನಿಕ್ ಜಾಗರಣ್ ಸೇರಿದಂತೆ ಹಲವಾರು ಸುದ್ದಿ ಮಾಧ್ಯಮಗಳು ಮುಸ್ಲಿಂ ಸ್ಟೂಡೆಂಟ್ಫ್ರಂಟ್ (ಎಂಎಸ್‌ಎಫ್), ಕಾಲೇಜು ಕ್ಯಾಂಪಸ್‌ನಲ್ಲಿ ಪಾಕ್ ಧ್ವಜ ಹಾರಿಸಿದೆ ಎಂದು ವರದಿ ಮಾಡಿದ್ದವು. ಕೆಲವೊಂದು ಮಾಧ್ಯಮಗಳು ವಿದ್ಯಾರ್ಥಿಗಳು ಪಾಕ್ ಧ್ವಜಹಾರಿಸಿವೆ ಎಂಬ ಆರೋಪ ಇದೆ ಎಂದು ವರದಿ ಮಾಡಿದ್ದವು.

ADVERTISEMENT

ಇದೇ ಸುದ್ದಿಯನ್ನು ಪಾಕಿಸ್ತಾನದ ಮಾಧ್ಯಮಗಳೂ ಬಳಸಿಕೊಂಡಿದ್ದವು. ಭಾರತದಮೇಜರ್ ಜನರಲ್ ಆಸಿಫ್ ಗಫೂರ್ ಅವರು ಸೇರಿದಂತೆ ಹಲವಾರು ನೆಟಿಜನ್‌ಗಳು ಟೈಮ್ಸ್ ನೌ ಸುದ್ದಿಯನ್ನು ಶೇರ್ ಮಾಡಿದ್ದರು.

ಸುದ್ದಿ ವೈರಲ್ ಆಗುವುದಕ್ಕಿಂತ ಮುನ್ನ ಇದೇ ವಿಷಯದ ಬಗ್ಗೆ ಎಬಿಪಿನ್ಯೂಸ್ ಪತ್ರಕರ್ತೆ ಪಿಂಕಿ ರಾಜ‌್‌ಪುರೋಹಿಕ್ ಟ್ವೀಟಿಸಿದ್ದು, ಟ್ವೀಟಿಗರು ಅದನ್ನು ಶೇರ್ ಮಾಡಿದ್ದರು.

ಕೃಪೆ: ಆಲ್ಟ್ ನ್ಯೂಸ್

ಅದು ಪಾಕ್ ಧ್ವಜ ಅಲ್ಲ ಎಂಎಸ್‌ಎಫ್ ಧ್ವಜ
ಯುಡಿಎಫ್ ಸಂಘಟನೆಯ ಮಿತ್ರ ಪಕ್ಷವಾಗಿರುವ ಎಂಎಸ್‌ಎಫ್ಸಂಘಟನೆಯ 30 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು ನಿಜ. ಐಪಿಸಿ ಸೆಕ್ಷನ್ 143 (ಕಾನೂನು ವಿರುದ್ಧವಾಗಿ ಗುಂಪು ಸೇರುವುದು), 147 (ದಂಗೆ), 153 ( ದಂಗೆಗೆ ಕಾರಣವಾಗುವುದು) ಮತ್ತು 149 ( ಗುಂಪು ಸೇರಿ ಅಪರಾಧ ಕೃತ್ಯವೆಸಗುವುದು) ಅಡಿಯಲ್ಲಿ ವಿದ್ಯಾರ್ಥಿಗಳ ವಿರುದ್ದ ಕೇಸು ದಾಖಲಾಗಿದೆ. ಆದರೆ ಸುದ್ದಿ ಮಾಧ್ಯಮಗಳು ವರದಿ ಮಾಡಿರುವಂತೆ ವಿದ್ಯಾರ್ಥಿಗಳು ಬಳಸಿದ್ದು ಪಾಕ್ ಧ್ವಜ ಅಲ್ಲ. ಅದು ಎಂಎಸ್ಎಫ್ ಧ್ವಜ.

ಸೆಪ್ಟೆಂಬರ್ 5ರಂದು ನಡೆಯಲಿರುವ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯ ಪ್ರಚಾರಕ್ಕಾಗಿ ವಿದ್ಯಾರ್ಥಿಗಳಕೈಯಲ್ಲಿದ್ದ ಹಣ ತುಂಬಾಕಡಿಮೆ. ಹಾಗಾಗಿ ಧ್ವಜವನ್ನು ಅಲ್ಲಿನ ದರ್ಜಿಯೊಬ್ಬರು ಹೊಲಿದು ಕೊಟ್ಟಿದ್ದರು. ಆ ದರ್ಜಿಗೆ ಎಷ್ಟು ದೊಡ್ಡಧ್ವಜ ಬೇಕು, ಅದರಲ್ಲಿ ಬಿಳಿ ಮತ್ತು ಹಸಿರು ಬಣ್ಣದ ಪ್ರಮಾಣ ಎಷ್ಟು ಇರಬೇಕೆಂದು ಗೊತ್ತಿರಲಿಲ್ಲ. ಹಾಗಾಗಿ ಅವರು ಹೊಲಿದು ಕೊಟ್ಟಿದ್ದ ಬೃಹತ್ ಧ್ವಜವನ್ನು ಹಾರಿಸಲಾಗಿತ್ತು. ಸ್ವಲ್ಪ ಹೊತ್ತಾದ ನಂತರ ಧ್ವಜದ ಕಂಬ ಮುರಿದು ಬಿತ್ತು ಎಂದು ಎಂಎಸ್‌ಎಫ್ ರಾಜ್ಯ ಕಾರ್ಯದರ್ಶಿ ನಿಷಾದ್ ಕೆ. ಸಲೀಂ ಹೇಳಿರುವುದಾಗಿ ಮಲಯಾಳಂ ಪೋರ್ಟಲ್ ಅಳಿಮುಖಂ ಡಾಟ್ ಕಾಮ್ ವರದಿ ಮಾಡಿದೆ.

ಇನ್ನೊಂದು ವಿಡಿಯೊದಲ್ಲಿ ನೆಟ್ಟಗಿರುವ ಧ್ವಜ ಕಂಬದಲ್ಲಿ ಧ್ವಜ ಇರುವುದು ಕಾಣುತ್ತದೆ. ಅಬ್ದುಲ್ ಜಲೀಲ್ ಸಿ.ಟಿ ಎಂಬವರು ಫೇಸ್‌ಬುಕ್‌ನಲ್ಲಿ ಸತ್ಯ ಏನೆಂದು ಈ ವಿಡಿಯೊ ಹೇಳುತ್ತದೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಪೋಸ್ಟ್ ಮಾಡಿದ್ದಾರೆ.

ಸುದ್ದಿಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದಾಗ ಟ್ವಿಟರ್‌ನಲ್ಲಿ ಅಪ್‌ಲೋಡ್ ಆಗಿರುವ ವಿಡಿಯೊವೊಂದು ಸಿಕ್ಕಿದೆ. ಸಿಲ್ವರ್ ಆರ್ಟ್ಸ್ ಅಂಡ್ ಸಯನ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾರಿಸಿರುವ ಧ್ವಜ ಪಾಕಿಸ್ತಾನದ ಧ್ವಜ ಅಲ್ಲ ಎಂಬುದು ಸ್ವಷ್ಟವಾಗಿ ಇದರಲ್ಲಿ ಗೊತ್ತಾಗುತ್ತದೆ.

ಏನು ವ್ಯತ್ಯಾಸ ?
ಪಾಕಿಸ್ತಾನದ ಧ್ವಜ ಮತ್ತು ಎಂಎಸ್‌ಎಫ್ ಧ್ವಜದಲ್ಲಿ ಹಸಿರು, ಬಿಳಿ ಬಣ್ಣ ಮತ್ತು ಚಂದ್ರ ಇದ್ದರೂ ಇವುಗಳ ಸ್ವರೂಪ ಬೇರೆಯೇ ಆಗಿದೆ.

ಪಾಕಿಸ್ತಾನದ ಧ್ವಜದಎಡಭಾಗದಲ್ಲಿ ಬಿಳಿ ಬಣ್ಣ ಇದ್ದು ಎಂಎಸ್‌ಎಫ್ ಧ್ವಜದಲ್ಲಿ ಕೆಳಗಡೆ ಬಿಳಿ ಬಣ್ಣವಿದೆ.
ಪಾಕ್ ಧ್ವಜದಲ್ಲಿ ಚಂದ್ರ ಮಧ್ಯಭಾಗದಲ್ಲಿದ್ದರೆ ಎಂಎಸ್‌ಎಫ್ ಧ್ವಜದಲ್ಲಿ ಮೇಲೆ ಎಡಭಾಗದ ಮೂಲೆಯಲ್ಲಿ ಚಂದ್ರನಿದ್ದಾನೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ನೋಡಿದರೆ ಧ್ವಜ ಕಂಬವಿಲ್ಲದ ಧ್ವಜವನ್ನು ನಾಲ್ಕುಮೂಲೆಗಳಿಂದ ವಿದ್ಯಾರ್ಥಿಗಳು ಹಿಡಿದಿರುವುದು ಕಾಣಿಸುತ್ತದೆ. ಮೇಲಿನಿಂದ ನೋಡುವಾಗ ಎಂಎಸ್‌ಎಫ್ ಧ್ವಜದ ಸ್ವರೂಪ ಬದಲಾದಂತೆ ಕಾಣುತ್ತಿರುವುದು ಗೊಂದಲವುಂಟು ಮಾಡಿದೆ.

ಎಂಎಸ್‌ಎಫ್ ಧ್ವಜದಲ್ಲಿ ಅರ್ಧ ಹಸಿರು, ಅರ್ಧ ಬಿಳಿ ಬಣ್ಣ ಇರಬೇಕಿತ್ತು. ಅಂದರೆ ಎರಡೂ ಬಣ್ಣಗಳ ಪ್ರಮಾಣ ಒಂದೇ ಆಗಿರಬೇಕು. ಆದರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾರಿಸಿರುವ ಧ್ವಜದಲ್ಲಿ ಬಣ್ಣಗಳ ಪ್ರಮಾಣ ಸರಿ ಇರಲಿಲ್ಲ ಎಂಬುದುವಿವಾದಕ್ಕೆಡೆ ಮಾಡಿತ್ತು.

ಈ ಬಗ್ಗೆ ಆಲ್ಟ್ ನ್ಯೂಸ್ ಜತೆ ಮಾತನಾಡಿದ ಎಂಎಸ್‌ಎಫ್ ಪ್ರಧಾನ ಕಾರ್ಯದರ್ಶಿ ನವಾಸ್, ಸುದ್ದಿ ಸತ್ಯಕ್ಕೆ ದೂರವಾದುದು. ಅದು ಎಡಭಾಗದಲ್ಲಿ ಬಿಳಿ ಬಣ್ಣವಿರುವ ಪಾಕ್ ಧ್ವಜವಲ್ಲ. ಎಂಎಸ್‌ಎಫ್ ಧ್ವಜದಲ್ಲಿ ಕೆಳಗಡೆ ಬಿಳಿ ಬಣ್ಣವಿದೆ. ನೀವು ಫೋಟೊ ನೋಡಿದರೆ ತಿಳಿಯುತ್ತದೆ, ಬಿಳಿ ಬಣ್ಣ ಧ್ವಜದ ಕೆಳಭಾಗದಲ್ಲಿದೆ. ಏತನ್ಮಧ್ಯೆ, ಎಂಎಸ್‌ಎಫ್ ಧ್ವಜದಲ್ಲಿ ಚಂದ್ರ ಎಡಭಾಗ ಮೂಲೆಯಲ್ಲಿದೆ. ನಾವು ಹಾರಿಸಿದ ಬಾವುಟ ದೊಡ್ಡ ಗಾತ್ರದ್ದು ಎಂಬುದಕ್ಕೆ ತಕರಾರು ಎದ್ದಿತ್ತು. ಧ್ವಜ ಹೊಲಿದ ದರ್ಜಿಗೆ ಬಾವುಟದಲ್ಲಿ ಬಿಳಿ ಮತ್ತು ಹಸಿರು ಬಣ್ಣದ ಪ್ರಮಾಣ 1:1 ಎಂದು ಗೊತ್ತಿರಲಿಲ್ಲ. ಅವರು 3:1 ಪ್ರಮಾಣದ ಧ್ವಜ ಹೊಲಿದುಕೊಟ್ಟಿದ್ದಾರೆ ಎಂದಿದ್ದಾರೆ.

ಸರಿಯಾದ ಅಳತೆ ಇಲ್ಲದ ಧ್ವಜವನ್ನು ವಿದ್ಯಾರ್ಥಿಗಳು ಹಾರಿಸಿದ್ದು ಇದು ಮೊದಲೇನೂ ಇಲ್ಲ, 2016ರಲ್ಲಿ ಸಿಲ್ವರ್ ಆರ್ಟ್ಸ್ ಕಾಲೇಜ್, ಪೆರಂಬ್ರಾದಲ್ಲಿಇದೇ ರೀತಿ ಬಣ್ಣಗಳ ಪ್ರಮಾಣ ಏರು ಪೇರಾಗಿದ್ದ ಧ್ವಜ ಹಾರಿಸಲಾಗಿತ್ತು.

ಈ ಹಿಂದೆ ಕೇರಳದಲ್ಲಿ ರಾಹುಲ್ ಗಾಂಧಿಯ ರ‍್ಯಾಲಿಯಲ್ಲಿ ಐಯುಎಂಎಲ್ ಧ್ವಜ ಹಾರಿಸಿರುವುದನ್ನುಪಾಕ್ ಧ್ವಜ ಹಾರಿಸಲಾಗಿದೆ ಎಂಬ ಸುಳ್ಳು ಸುದ್ದಿ ವೈರಲ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.