ADVERTISEMENT

ಆರ್ಥಿಕತೆ ಬಗ್ಗೆ ರವೀಶ್ ಕುಮಾರ್ ಹೇಳಿಕೆ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 15:52 IST
Last Updated 6 ಸೆಪ್ಟೆಂಬರ್ 2019, 15:52 IST
   

ಬೆಂಗಳೂರು:ಎನ್‌ಡಿಟಿವಿ ಪತ್ರಕರ್ತ, ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ರವೀಶ್ ಕುಮಾರ್ ಭಾರತದ ಆರ್ಥಿಕತೆ ಬಗ್ಗೆ ಹೇಳುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

2013ರಲ್ಲಿನ ಜಿಡಿಪಿ ಮತ್ತು 2019ರ ಜಿಡಿಪಿ ದರದ ಬಗ್ಗೆ ರವೀಶ್ ಹೇಳುತ್ತಿರುವ ವಿಡಿಯೊ ಇದಾಗಿದೆ. ಸಿನಿಮಾ ನಿರ್ಮಾಪಕವಿವೇಕ್ ಅಗ್ನಿಹೋತ್ರಿ, ಶೆಫಾಲಿ ವೈದ್ಯ, ಕುಲ್‌ಜಿತ್ ಸಿಂಗ್ ಚಹಾಲ್ ಸೇರಿದಂತೆಹಲವಾರು ಟ್ವೀಟಿಗರು ರವೀಶ್ ಕುಮಾರ್ ಅವರ ನಿಜವಾದ ಮುಖ ನೋಡಿ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಟ್ವೀಟಿಸಿದ್ದಾರೆ.

ಇದನ್ನು ಕೇಳಿ, ಇದರ ನಿಜ ಸಂಗತಿ ತಿಳಿಯಿರಿ. ಅವರಿಗೆ ಜಿಡಿಪಿ, ದೇಶ, ಯುವ ಜನತೆ, ಉದ್ಯೋಗದ ಬಗ್ಗೆ ಯಾವ ಚಿಂತೆಯೂ ಇಲ್ಲ. ಪಕ್ಕಾ ವ್ಯಾಪಾರಿ. ಇವತ್ತು ಅವರ ಕಳ್ಳ ಅಪ್ಪ ಜೈಲಿಗೆ ಹೋಗುತ್ತಿದ್ದಾರೆ ಎಂಬುದಕ್ಕೆ ವಿಧವಾ ವಿಲಾಪ ಶುರು ಹಚ್ಕೊಂಡಿದ್ದಾರೆ ಎಂಬ ಬರಹದೊದಿಗೆ ಬಿಜೆಪಿ ನೇತಾರ ಕಪಿಲ್ ಮಿಶ್ರಾ ಕೂಡಾ ಇದೇ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ADVERTISEMENT

ವೈರಲ್ ವಿಡಿಯೊದಲ್ಲಿ ಏನಿದೆ?
2013ರಲ್ಲಿ ಶೇ. 5 ಜಿಡಿಪಿ ದರ ಮತ್ತು 2019ರಲ್ಲಿ ಶೇ.5 ಜಿಡಿಪಿ ದರ ಎಂಬ ಬರಹವಿರುವವಿಡಿಯೊದಲ್ಲಿ ರವೀಶ್ ಕುಮಾರ್ ಅವರ ಹೇಳಿಕೆಯ ಎರಡು ವಿಡಿಯೊಗಳಿವೆ.

ವಿಡಿಯೊದ ಮೊದಲ ಭಾಗದಲ್ಲಿರವೀಶ್ ಕುಮಾರ್ 2013ರಲ್ಲಿ ಜಿಡಿಪಿ ದರದ ಬಗ್ಗೆ ಹೇಳುತ್ತಿರುವುದು ಹೀಗೆ- ಇದು ಮುಖ್ಯ ವಿಷಯವೇ , ಆರ್ಥಿಕತೆ ಬಗ್ಗೆ ನಾವು ಅಗತ್ಯಕ್ಕಿಂತ ಹೆಚ್ಚುದುಃಖಿಗಳಾಗುತ್ತಿಲ್ಲಅಥವಾ ರೋದಿಸುತ್ತಿಲ್ಲ. ಯಾಕೆಂದರೆ ಜಗತ್ತಿನ ಎಲ್ಲ ದೇಶಗಳ ಆರ್ಥಿಕತೆಯನ್ನು ನೋಡಿದರೆ ಅದರ ಪೈಕಿ ತುಂಬ ಕಡಿಮೆ ದೇಶಗಳ ಜಿಡಿಪಿ 5 ಪ್ರತಿಶತ ಇದ್ದರೂ ಅಭಿವೃದ್ಧಿಯತ್ತ ಸಾಗುತ್ತಿದೆ.

ಇದು ಮುಗಿದ ಕೂಡಲೇ ಮುಂದಿನ ಭಾಗದಲ್ಲಿ ರವೀಶ್ ದೇಶದ ಪ್ರಸ್ತುತ ಆರ್ಥಿಕತೆ ಬಗ್ಗೆ ಮಾತನಾಡುತ್ತಾರೆ.
ಅದು ಹೀಗಿದೆ: ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿಇಲ್ಲ. ನಿಜವಾದ ಪರಿಸ್ಥಿತಿಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದರೂ ಇವತ್ತಿನ ಜಿಡಿಪಿ ದರವು ಎಲ್ಲವನ್ನೂ ಬಹಿರಂಗಗೊಳಿಸಿದೆ ಭಾರತದ ಜಿಡಿಪಿ ದರ ಶೇ. 5 ಆಗಿದ್ದು, ದೇಶ ವಿಪರೀತ ಆರ್ಥಿಕ ಸಂಕಷ್ಟದಲ್ಲಿದೆ.

ಈ ವಿಡಿಯೊ ದೃಶ್ಯದ ನಂತರ ಇನ್ನೊಂದು ವಿಡಿಯೊ ತುಣುಕು ಕಾಣಿಸುತ್ತದೆ. ಅದರಲ್ಲಿ ರವೀಶ್ ಅವರು ನಮ್ಮ ಮೌಲ್ಯಗಳನ್ನು ಕಾಪಾಡಿಕೊಂಡು ಬರುವುದು ತುಂಬ ಕಷ್ಟ ಎಂದು ಹೇಳುತ್ತಾರೆ. ಈ ಮೂಲಕ ವಿಡಿಯೊಗೆ ವಿಡಂಬನಾತ್ಮಕ ಮುಕ್ತಾಯ ನೀಡಲಾಗಿದೆ.

ಫ್ಯಾಕ್ಟ್‌ಚೆಕ್
ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್ 'ಬೂಟಾಟಿಕೆಯವನು'ಎಂದು ಚಿತ್ರಿಸುವಈ ವಿಡಿಯೊ ಬಗ್ಗೆ ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ.

ಮೊದಲ ವಿಡಿಯೊ ತುಣುಕು
ಇದೇ ವಿಡಿಯೊ 2013 ಫೆಬ್ರುವರಿ 27ರಂದು ಎನ್‌ಡಿಟಿವಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿದೆ. ಅಂದರೆ ವಿಡಿಯೊ 6 ವರ್ಷ ಹಳೆಯದ್ದು.ಒರಿಜಿನಲ್ ವಿಡಿಯೊದಲ್ಲಿ ರವೀಶ್ ಅವರು ಹಲವಾರು ನಾಯಕರು, ಉದ್ಯಮಿ ಮತ್ತು ಆರ್ಥಿಕ ತಜ್ಞರೊಂದಿಗೆ ಚರ್ಚೆ ಆರಂಭ ಮಾಡುತ್ತಾರೆ. ಮೇ 2014ರ ಲೋಕಸಭಾ ಚುನಾವಣೆಗೆ ಮುನ್ನ ದೇಶದ ಆರ್ಥಿಕತೆ ಕುಂಠಿತಗೊಂಡಿರುವ ವಿಷಯದ ಬಗ್ಗೆ ಚರ್ಚೆಯಾಗಿದೆ ಅದು.

ಬರ, ಕಡಿಮೆ ವಿದೇಶಿ ಹೂಡಿಕೆ, ಅಧಿಕ ಆಮದು ಮತ್ತು ಕಡಿಮೆ ರಫ್ತು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕುಸಿತ ಬಗ್ಗೆ ಆ ಕಾರ್ಯಕ್ರಮದಲ್ಲಿ ಚರ್ಚೆಯಾಗಿತ್ತು. ರವೀಶ್ ಅವರು ಎನ್‌ಡಿಟಿವಿ ಇಂಡಿಯಾದಲ್ಲಿ ಪ್ರೈಮ್ ಟೈಮ್ ಕಾರ್ಯಕ್ರಮದ ನಿರೂಪಕರಾಗಿಯೇ ಜನಪ್ರಿಯರು. 2013ರ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ಫೆಬ್ರುವರಿ 27ರಂದು ಸಂಸತ್‌ನಲ್ಲಿ 2012-13ರ ಆರ್ಥಿಕ ಸಮೀಕ್ಷೆ ವರದಿ ಪ್ರಸ್ತುತ ಪಡಿಸಿದ್ದರು. ಅದೇ ದಿನ ಎನ್‌ಡಿಟಿವಿ ಪ್ರೈಮ್ ಟೈಮ್‌ನಲ್ಲಿ ದೇಶದ ಆರ್ಥಿಕತೆ ಬಗ್ಗೆ ಚರ್ಚೆಯಾಗಿತ್ತು.

ರವೀಶ್ ಕುಮಾರ್ ಹೇಳಿದ್ದೇನು?
ರಾಜಕಾರಣಿಗಳ, ಆರ್ಥಿಕ ತಜ್ಞರ ಮತ್ತು ಉದ್ಯಮಿಗಳ ಮೊದಲ ಮಾತು ಮುಗಿದ ನಂತರ ತಮ್ಮ ಎಂದಿನ ಶೈಲಿಯಂತೆ ರವೀಶ್ ಕಾರ್ಯಕ್ರಮ ಆರಂಭಿಸಿದ್ದಾರೆ.


ಪ್ರಸ್ತುತದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಅದು ಉತ್ತಮವಾಗುವ ನಿರೀಕ್ಷೆಯಿದೆ. ಈ ಹಿಂದೆ ಭಾರತದಲ್ಲಿನ ಅಭಿವೃದ್ಧಿ ದರ 8 ಅಥವಾ 9 ಪ್ರತಿಶತ ಆಗಿತ್ತು. ಆದರೆ ಈಗ ಆರ್ಥಿಕತೆ ನಿಧಾನದ ಸುದ್ದಿಯಂತೆ ಕಾಣುತ್ತಿದೆ. ವಿಡಿಯೊದ ಆರಂಭ ಈ ರೀತಿ ಆಗಿತ್ತು.

ವಿಡಿಯೊದ 3 ನಿಮಿಷದಿಂದ 7 ನಿಮಿಷದವರೆಗಿನ ಅವಧಿಯಲ್ಲಿ ನೋಡಿದರೆ ರವೀಶ್ ಅವರು ಆರ್ಥಿಕ ಸಮೀಕ್ಷೆ ವರದಿಯನ್ನು ವಿಶ್ಲೇಷಣೆ ಮಾಡಿ ಆಗಿನ ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದರು. ಆರ್ಥಿಕ ಕುಸಿತಕ್ಕೆ ಕಾರಣದ ಬಗ್ಗೆ ಸರ್ಕಾರ ಹೇಳುತ್ತಿರುವುದೇನು? ಆರ್ಥಿಕ ಕುಸಿತವನ್ನು ಪರಿಹರಿಸುವುದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಕುಮಾರ್ ಇಲ್ಲಿ ಹೇಳಿದ್ದಾರೆ.ಯುಪಿಎ ಸರ್ಕಾರದ ಕೊನೆಯ ಬಜೆಟ್ ಮಂಡನೆಯ ಮುನ್ನಾ ದಿನ ಈ ಚರ್ಚೆ ಪ್ರಸಾರವಾಗಿತ್ತು.

ವೈರಲ್ ವಿಡಿಯೊದಲ್ಲಿ ರವೀಶ್ ಹೇಳಿರುವ ಮಾತು ಗಮನಿಸಿ.ಆ ಮಾತನ್ನು ಹೇಳುವ ಮುನ್ನ ಅವರುಆರ್ಥಿಕ ಸಮೀಕ್ಷೆ ವರದಿಯ 300 ಪುಟಗಳ ಆಧಾರದ ಮೇಲೆ ಬಜೆಟ್ ತಯಾರಿಸಲಾಗುತ್ತದೋ ಅಥವಾ ಸರ್ಕಾರ ರಚಿಸಲು ಬೇಕಾಗುವ 272 ಸೀಟುಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತದೋ ಎಂದಿದ್ದರು.

ಇದು ಮುಖ್ಯ ವಿಷಯವೇ , ಆರ್ಥಿಕತೆ ಬಗ್ಗೆ ನಾವು ಅಗತ್ಯಕ್ಕಿಂತ ಹೆಚ್ಚುದುಃಖಿಗಳಾಗುತ್ತಿಲ್ಲಅಥವಾ ರೋದಿಸುತ್ತಿಲ್ಲ. ಯಾಕೆಂದರೆ ಜಗತ್ತಿನ ಎಲ್ಲ ದೇಶಗಳ ಆರ್ಥಿಕತೆಯನ್ನು ನೋಡಿದರೆ ಅದರ ಪೈಕಿ ತುಂಬ ಕಡಿಮೆ ದೇಶಗಳ ಜಿಡಿಪಿ 5 ಪ್ರತಿಶತ ಇದ್ದರೂ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಎಲ್ಲ ಪ್ರಶ್ನೆಗಳ ಬಗ್ಗೆ ಇವತ್ತು ನಾವು ಪ್ರೈಮ್ ಟೈಮ್‌ನಲ್ಲಿ ಮಾತನಾಡಲಿದ್ದೇವೆ ಎಂದು ಹೇಳಿ ಕಾರ್ಯಕ್ರಮ ಆರಂಭಿಸಿದ್ದರು.

ಟಿವಿಯಲ್ಲಿ ರವೀಶ್ ಚರ್ಚೆಗಾಗಿ ವೇದಿಕೆ ಕಲ್ಪಿಸಿದ್ದರು.ಅದೇನೂ ಅವರ ಅಂತಿಮ ವಿಶ್ಲೇಷಣೆ ಆಗಿರಲಿಲ್ಲ. 45 ನಿಮಿಷ ಅವಧಿಯ ಈ ಕಾರ್ಯಕ್ರಮದಲ್ಲಿ ರವೀಶ್ ಅವರು ಆಗಿನ ಕಾಂಗ್ರೆಸ್ ವಕ್ತಾರ ಸಂಜಯ್ ನಿರುಪಮ್ ಅವರನ್ನು ವಿಮರ್ಶಿಸಿರುವುದನ್ನು ಕಾಣಬಹುದು.

ಸಂಜಯ್ ನಿರುಪಮ್ ಮತ್ತು ರವೀಶ್ ಕುಮಾರ್ ನಡುವಿನ ಚರ್ಚೆಯ ಆಯ್ದ ಭಾಗ ಇಲ್ಲಿದೆ

ರವೀಶ್: ಸಂಜಯ್, ನಿಮ್ಮ ಯುಪಿಎ ಸರ್ಕಾರದ ಆರ್ಥಿಕ ನೀತಿ ವಿಫಲವಾಗಿರುವುದರ ಪರಿಣಾಮವೇ ಇದು (ಆರ್ಥಿಕ ಸಮೀಕ್ಷೆ ವರದಿಯನ್ನುದ್ದೇಶಿಸಿ ಹೇಳಿದ್ದು). ಯಾವ ವಲಯದಲ್ಲಿ ಕುಸಿತ ಇಲ್ಲ ಎಂದು ನೀವು ಹೇಳುತ್ತಿದ್ದೀರಿ?. ಇದು ಜಾಗತಿಕ ಮಟ್ಟದಲ್ಲಿನ ಕುಸಿತ ಎಂದು ಹೇಳುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಸರ್.

ಸಂಜಯ್ ನಿರುಪಮ್: ರವೀಶ್, ನೀವು ಕೈಯಲ್ಲಿ ಹಿಡಿದುಕೊಂಡಿರುವ ಆರ್ಥಿಕ ಸಮೀಕ್ಷೆ ವರದಿಯ ಪುಸ್ತಕ ಅಥವಾ ಕೈಪಿಡಿಯು ನೀತಿ ವಿವರಣೆ ಪತ್ರ ಅಲ್ಲ. ಇದು ವರ್ಷದ ಆರ್ಥಿಕ ಪರಿಸ್ಥಿತಿಯ ದಾಖಲಾತಿ ಪತ್ರ ಅಷ್ಟೇ. ನಾವುಆರ್ಥಿಕ ಕುಸಿತ ಅನುಭವಿಸುತ್ತಿದ್ದೇವೆ ಎಂಬುದು ನಿಜ. ಆದರೆ ಭಾರತ ಎಂದೆಂದಿಗೂಸಿಂಹ, ಅದು ಮೇಕೆಯಾಗಲ್ಲ.

ರವೀಶ್: ನೀವು ತುಂಬ ವಿವರವಾಗಿ ಹೇಳಿದ್ದೀರಿ. ನಾನು ಕೇಳುತ್ತಿರುವುದೇನೆಂದರೆ ಯಾರಾದರೂ ಇದರ ಜವಾಬ್ದಾರಿ ಹೊರುತ್ತಿದ್ದೀರಾ? 2004ರಿಂದ ಸುಸ್ಥಿರ ಮೈತ್ರಿ ಸರ್ಕಾರ ಅಧಿಕಾರ ನಡೆಸುತ್ತಿದೆ. ನೀವು ಬೇರೆ ಎಲ್ಲ ವಿಷಯಗಳನ್ನು ಚೆನ್ನಾಗಿ ವಿವರಿಸಿದಿರಿ. ಹಾಗಾದರೆ ಹಣಕಾಸಿನ ಕೊರತೆ ಜಾಸ್ತಿಯಾಗಿದ್ದು ಯಾಕೆ?

ಈ ಚರ್ಚೆಯನ್ನು ನೋಡಿದರೆ ರವೀಶ್ ಅವರು ಅಂದಿನ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎಂಬುದು ಗೊತ್ತಾಗುತ್ತದೆ.

ವೈರಲ್ ಪೋಸ್ಟ್‌ ಬಗ್ಗೆ ರವೀಶ್ ಏನಂತಾರೆ?
ನನ್ನನ್ನು ತುಚ್ಛವಾಗಿಸುವ ಯಾವೊಂದು ಅವಕಾಶವನ್ನೂ ಐಟಿ ಸೆಲ್ ಕಳೆದುಕೊಳ್ಳುವುದಿಲ್ಲ. ನಿಜ ಸಂಗತಿ ಗೊತ್ತಿರುವ ಪತ್ರಕರ್ತರು ಮತ್ತು ಜನರು ಕೂಡಾ ಇಂತಾ ವಿಷಯವನ್ನು ನಂಬುತ್ತಿರುವುದು ಬೇಸರವನ್ನುಂಟು ಮಾಡುತ್ತದೆ. ನನ್ನ ಹಿಂದೆ ಪ್ರಭಾವಶಾಲಿಸಂಚು ಕಾರ್ಯವೆಸಗುತ್ತಿದೆ. ಅಂತವರು ಇಂದು ರಾತ್ರಿ ಗೋದಿ ಮೀಡಿಯಾದಲ್ಲಿನ ಕಾರ್ಯಕ್ರಮಗಳನ್ನು ವೀಕ್ಷಿಸಲಿ. ಪತ್ರಿಕೋದ್ಯಮದ ನಾಚಿಕೆಗೇಡಿನ ಮತ್ತು ದರಿದ್ರ ಕಾರ್ಯಕ್ರಮಗಳು ಅಲ್ಲಿ ಕಾಣ ಸಿಗಬಹುದು.

ಎರಡನೇ ವಿಡಿಯೊ

ಇದರ ಒರಿಜಿನಲ್ ವಿಡಿಯೊ 2019 ಆಗಸ್ಟ್ 30ರಂದು ಅಪ್‌ಲೋಡ್ ಆಗಿದೆ.

ದೇಶದ ಜಿಡಿಪಿ ಶೇ.5 ಕ್ಕೆ ಕುಸಿದಿದೆ ಎಂದು ಸರ್ಕಾರ ಹೇಳಿದ ಬೆನ್ನಲ್ಲೇ ಆ ಚರ್ಚೆ ನಡೆದಿದೆ. ಜಿಡಿಪಿ ಕುಸಿತದ ಬಗ್ಗೆ ನಿರುದ್ಯೋಗಿಗಳು ಮತ್ತು ಉದ್ಯಮಿಗಳು ( ಮಧ್ಯಮ ಮತ್ತು ಕೆಳವರ್ಗದ ಜನರು) ಏನು ಹೇಳುತ್ತಾರೆ ಎಂಬುದರ ಬಗ್ಗೆ ರವೀಶ್ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ವೈರಲ್ ವಿಡಿಯೊದಲ್ಲಿ ಈ ಕಾರ್ಯಕ್ರಮದಒಂದು ತುಣುಕು ತೆಗೆದು 6 ವರ್ಷ ಹಿಂದಿನ ವಿಡಿಯೊ ಜತೆ ಸೇರಿಲಾಗಿದೆ.

ವಿಡಿಯೊದ ಆರಂಭದ 30 ಸೆಕೆಂಡ್‌ಗಳಲ್ಲಿ ರವೀಶ್ ಮಾತನ್ನು ಆಲಿಸಿ. ವೈರಲ್ ವಿಡಿಯೊದಲ್ಲಿ ಬಳಸಿದ್ದುಇದೇ ವಿಡಿಯೊದ ತುಣುಕು.

ಈ ಕಾರ್ಯಕ್ರಮದಲ್ಲಿ ರವೀಶ್ ಅವರು ರಾಷ್ಟ್ರೀಯ ಸಂಖ್ಯಾ ಕಚೇರಿ ನೀಡಿರುವ ಅಂಕಿ ಅಂಶಗಳನ್ನು ಉಲ್ಲೇಖಿಸಿ ಚರ್ಚೆ ನಡೆಸಿದ್ದಾರೆ.

ರವೀಶ್ ಅವರು 2013ರಲ್ಲಿಯೂ ಅಂದಿನ ಸರ್ಕಾರವನ್ನು ಟೀಕಿಸುತ್ತಿದ್ದರು, ವಿಮರ್ಶಿಸುತ್ತಿದ್ದರು. ಈಗಲೂ ಸರ್ಕಾರವನ್ನು ವಿಮರ್ಶಿಸುತ್ತಿದ್ದಾರೆ ಎಂಬುದು ಇಲ್ಲಿ ತಿಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.