2024-25ನೇ ಸಾಲಿನ ಆದಾಯ ಲೆಕ್ಕಪತ್ರ ವಿವರ (ಐಟಿಆರ್) ಸಲ್ಲಿಕೆಯ ಗಡುವನ್ನು ಇದೇ ತಿಂಗಳ 30ರವರೆಗೆ ವಿಸ್ತರಿಸಿರುವ ಬಗ್ಗೆ ಕೇಂದ್ರ ಪರೋಕ್ಷ ತೆರಿಗೆ ಮಂಡಳಿಯು (ಸಿಬಿಡಿಟಿ) ಹೊರಡಿಸಿದೆ ಎನ್ನಲಾದ ಸುತ್ತೋಲೆಯನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಇಂತಹ ಸುತ್ತೋಲೆಯನ್ನು ಹೊರಡಿಸಲಾಗಿದೆಯೇ ಎಂಬುದನ್ನು ತಿಳಿಯುವುದಕ್ಕಾಗಿ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಇಲಾಖೆಯ ಖಾತೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಸೆ.15ರಂದು ಒಂದು ಸುತ್ತೋಲೆಯನ್ನು ಪೋಸ್ಟ್ ಮಾಡಿತ್ತು. ಅದರಲ್ಲಿ ಸಿಬಿಡಿಟಿಯು ಆದಾಯ ಲೆಕ್ಕಪತ್ರ ಸಲ್ಲಿಕೆ ವಿವರಗಳನ್ನು ಸಲ್ಲಿಸುವ ಗಡುವನ್ನು ಸೆ.16ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿತ್ತು. ಆ ಬಳಿಕ ಗಡುವವನ್ನು ಇನ್ನಷ್ಟು ವಿಸ್ತರಿಸಿರುವ ಬಗ್ಗೆ ಯಾವುದೇ ಸುತ್ತೋಲೆಯನ್ನು ಪ್ರಕಟಿಸಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುತ್ತೋಲೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದರಲ್ಲಿ ಕೆಲವು ತಪ್ಪುಗಳಿದ್ದು, ವಾಕ್ಯಗಳಲ್ಲಿ ಹೊಂದಾಣಿಕೆ ಸಮಸ್ಯೆಯೂ ಇದೆ. ಇದು ತಿರುಚಿದ ಸುತ್ತೋಲೆ ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ಸಿಬಿಡಿಟಿಯು ಮೇ 27ರಂದು ಪ್ರಕಟಿಸಿರುವ ಮೂಲ ಸುತ್ತೋಲೆಯನ್ನು ಪರಿಶೀಲಿಸಲಾಯಿತು. ಅದರಲ್ಲಿ ಐಟಿ ವಿವರ ಸಲ್ಲಿಸುವ ಗಡುವನ್ನು ಜುಲೈ 31ರಿಂದ ಸೆ.15ಕ್ಕೆ ವಿಸ್ತರಿಸಲಾಗಿದೆ ಎಂದು ನಮೂದಿಸಲಾಗಿತ್ತು. ಹಾಗಾಗಿ, ಗಡುವನ್ನು ಸೆ.30ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿಕೊಂಡಿರುವ ಸುತ್ತೋಲೆ ನಕಲಿ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.