ADVERTISEMENT

ಇವಿಎಂ ಹ್ಯಾಕ್‌ಗೆ ಸಂಚು ಹೂಡಿತ್ತೇ ಬಿಜೆಪಿ; ವಾಸ್ತವವೇನು?

ಮತ್ತೊಂದು ತಿರುಚಿದ ಆಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 4 ಮೇ 2019, 16:28 IST
Last Updated 4 ಮೇ 2019, 16:28 IST
   

ಬೆಂಗಳೂರು:ವಿದ್ಯುನ್ಮಾನ ಮತಯಂತ್ರ (ಇವಿಎಂ) ಹ್ಯಾಕ್‌ ಮಾಡಲು ಬಿಜೆಪಿ ಸಂಚು ಹೂಡಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನಡುವಣ ಸಂಭಾಷಣೆ ಎನ್ನಲಾದ ಆಡಿಯೊವನ್ನುಅವಿ ದಂಡಿಯಾ ಎಂಬ ವ್ಯಕ್ತಿ ಫೇಸ್‌ಬುಕ್‌ ಲೈವ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ಇದು ತಿರುಚಿದ ಆಡಿಯೊ ಎಂಬುದನ್ನು ಆಲ್ಟ್‌ನ್ಯೂಸ್ ಸುದ್ದಿತಾಣ ಬಯಲಿಗೆಳೆದಿದೆ.

ಫೇಸ್‌ಬುಕ್ ಲೈವ್ ಅನ್ನು 5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 21 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.

ADVERTISEMENT

ನಿಜವೇನು?

ಅಮಿತ್ ಶಾ ಮತ್ತು ಅಜಿತ್ ಡೊಭಾಲ್ ಬೇರೆ ಬೇರೆ ಸಂದರ್ಭಗಳಲ್ಲಿ, ಸಂದರ್ಶನಗಳಲ್ಲಿ ಮಾತನಾಡಿರುವ ಆಡಿಯೊವನ್ನು ಸಂಕಲಿಸಿ ಆಡಿಯೊ ಸಿದ್ಧಪಡಿಸಲಾಗಿದೆ.

ಆಡಿಯೊದ ಮೊದಲ ಕೆಲವು ಸೆಕೆಂಡ್‌ಗಳಲ್ಲಿ; ‘ಮೂರು ದಿನಗಳಿಂದ ತಯಾರಿ ನಡೆಯುತ್ತಿದೆ’ ಎಂದು ಅಮಿತ್ ಶಾ ಹೇಳುವುದು ಕೇಳಿಸುತ್ತಿದೆ. ಇದನ್ನು 2018ರಲ್ಲಿ ಅವರು ಝೀನ್ಯೂಸ್‌ನ ಸುಧೀರ್ ಚೌಧರಿ ಅವರಿಗೆ ನೀಡಿದ್ದ ಸಂದರ್ಶನದಿಂದ ಆಯ್ದುಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ–ಎನ್‌ಸಿ–ಕಾಂಗ್ರೆಸ್ ಮೈತ್ರಿಗೆ ಸಂಬಂಧಿಸಿ ಚೌಧರಿ ಅವರು ಕೇಳಿದ್ದ ಪ್ರಶ್ನೆಗೆ ಅಮಿತ್ ಶಾ ಉತ್ತರಿಸಿದ್ದರು.

ದಂಡಿಯಾರ ಲೈವ್ ವಿಡಿಯೊದ 20ನೇ ನಿಮಿಷದಲ್ಲಿ ಅಜಿತ್ ಡೊಭಾಲ್ ಎಂದು ಹೇಳಿಕೊಂಡ ವ್ಯಕ್ತಿ ಇವಿಎಂ ಹ್ಯಾಕಿಂಗ್‌ನ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡುವ ಮತ್ತು ತನಿಖೆ ನಡೆದರೆ ಸಂಕಷ್ಟಕ್ಕೆ ಸಿಲುಕಬಹುದು ಎನ್ನುವಧ್ವನಿಯಿದೆ. ಇದಕ್ಕೆ ಅಮಿತ್ ಶಾ, ‘ಇದನ್ನು ಯಾರು ತನಿಖೆ ನಡೆಸುತ್ತಾರೆ? ಅಮೆರಿಕ?’ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯನ್ನುಝೀನ್ಯೂಸ್‌ ಸಂದರ್ಶನದ ಎರಡು ವಾಕ್ಯಗಳನ್ನು ಸೇರಿಸಿ ಸೃಷ್ಟಿಸಲಾಗಿದೆ. ಸಿಬಿಐ ಹಗರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಶಾ,‘ಇದನ್ನು ಯಾರು ತನಿಖೆ ನಡೆಸುತ್ತಾರೆ?’ ಎಂದು ಪ್ರಶ್ನಿಸಿದ್ದರು. ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯೀಕರಣ ಮತ್ತು ಪೆಟ್ರೋಲ್ ದರ ಏರಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸುವಾಗ ‘ಅಮೆರಿಕ’ ಎಂದು ಹೇಳಿದ್ದರು. ಇವೆರಡನ್ನೂ ಸೇರಿಸಿ ‘ಇದನ್ನು ಯಾರು ತನಿಖೆ ನಡೆಸುತ್ತಾರೆ? ಅಮೆರಿಕ?’ ಎಂಬ ವಾಕ್ಯ ಸೃಷ್ಟಿಸಲಾಗಿದೆ.

‘ಎಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂಬುದನ್ನು ದಯಮಾಡಿ ಅರ್ಥೈಸಿಕೊಳ್ಳಿ. ನನಗೇನೂ ಗೊಂದಲವಿಲ್ಲ. ಕನಿಷ್ಠ ಉತ್ತಮ ವಾದ ಮಂಡಿಸಿ, ಯಾರೊಬ್ಬರೂ ನನ್ನನ್ನು ಪ್ರಶ್ನೆ ಮಾಡಲಾರರು’ ಎಂದು ಅಮಿತ್ ಶಾ ಹೇಳಿರುವುದುದಂಡಿಯಾ ಬಹಿರಂಗಪಡಿಸಿದ ಆಡಿಯೊದಲ್ಲಿದೆ. ಅಮಿತ್ ಶಾ ಅವರು 2016ರ ‘ಇಂಡಿಯಾ ಟುಡೆ ಕಾನ್‌ಕ್ಲೇವ್‌’ನಲ್ಲಿ ಮಾಡಿದ್ದ ಸಂವಾದದ ಹಲವು ವಾಕ್ಯಗಳನ್ನು ಜತೆ ಸೇರಿಸಿ ಈ ರೀತಿ ತಿರುಚಲಾಗಿದೆ.

ಭಾಷಣದ 50:50ನೇ ನಿಮಿಷದಲ್ಲಿ ಶಾ, ‘ಎಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂಬುದನ್ನು ದಯಮಾಡಿ ಅರ್ಥೈಸಿಕೊಳ್ಳಿ’ ಎಂದು ಹೇಳಿದ್ದರು. 8:53ನೇ ನಿಮಿಷದಲ್ಲಿ ‘ನನಗೇನೂ ಗೊಂದಲವಿಲ್ಲ’ ಎಂದಿದ್ದಾರೆ. 8:35ನೇ ನಿಮಿಷದಲ್ಲಿ ‘ಕನಿಷ್ಠ ಉತ್ತಮ ವಾದ ಮಂಡಿಸಿ’ ಎಂದು ಹೇಳಿದ್ದರು. ಸುಧೀರ್ ಚೌಧರಿ ಅವರು ನಡೆಸಿದ ಸಂದರ್ಶನದ ವಿಡಿಯೊದ 13:56ನೇ ನಿಮಿಷದಲ್ಲಿ‘ಯಾರೊಬ್ಬರೂ ನನ್ನನ್ನು ಪ್ರಶ್ನೆ ಮಾಡಲಾರರು’ ಎಂಬ ವಾಕ್ಯವಿದೆ. ಇವನ್ನೆಲ್ಲ ಸೇರಿಸಲಾಗಿದೆ.

ತಿರುಚಿದ ಆಡಿಯೊದ ಕೊನೆಯಲ್ಲಿ ಅಮಿತ್ ಶಾ, ‘ವೆಲ್ ಪ್ಲ್ಯಾನ್ಡ್, ನೀವು ದಾಖಲೆಗಳನ್ನು ಪರಿಶೀಲಿಸಬಹುದು’ ಎಂದು ಹೇಳುವ ಆಡಿಯೊವಿದೆ. ಇವುಗಳನ್ನು ಕ್ರಮವಾಗಿ ಝೀನ್ಯೂಸ್‌ ಸಂದರ್ಶನದ 9:41 ಮತ್ತು15:23ನೇ ನಿಮಿಷದಿಂದ ತೆಗೆದುಕೊಳ್ಳಲಾಗಿದೆ.

ಇನ್ನು ಆಡಿಯೊದಲ್ಲಿ ಅಜಿತ್ ಡೊಭಾಲ್ ಹೆಸರಿನಲ್ಲಿ ಪ್ರಸಾರವಾಗಿರುವ ಧ್ವನಿ ನಕಲಿ ಎಂದೂಆಲ್ಟ್‌ನ್ಯೂಸ್ ವರದಿ ಪ್ರತಿಪಾದಿಸಿದೆ. ನಕಲಿ ಧ್ವನಿ ಮತ್ತು ಹಲವು ವಿಷಯಗಳ ಬಗ್ಗೆ ಪ್ರತ್ಯೇಕ ಸಂದರ್ಭಗಳಲ್ಲಿ ನೀಡಿದ್ದ ಹೇಳಿಕೆಗಳನ್ನು ಸಂಕಲಿಸಿಇವಿಎಂ ಹ್ಯಾಕ್‌ ಮಾಡಲು ಬಿಜೆಪಿ ಸಂಚು ಹೂಡಿತ್ತು ಎಂಬ ಅರ್ಥ ಬರುವಂತೆದಂಡಿಯಾ ಬಿಂಬಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದೇ ಮೊದಲಲ್ಲ:ಪುಲ್ವಾಮಾ ದಾಳಿಗೆ ಬಿಜೆಪಿ ಸಂಚು ಹೂಡಿತ್ತು ಎಂದು ಕೆಲವು ದಿನಗಳ ಹಿಂದೆ ಆರೋಪಿಸಿದ್ದ ಅವಿ ದಂಡಿಯಾ ತಿರುಚಿದ ಆಡಿಯೊ ಪ್ರಸಾರ ಮಾಡಿದ್ದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಅಪರಿಚಿತ ಮಹಿಳೆಯೊಬ್ಬರ ಧ್ವನಿ ಬಳಸಿಕೊಂಡು ಆಡಿಯೊ ತಿರುಚಲಾಗಿತ್ತು. ಈ ವಿಷಯ ವಿವಾದಕ್ಕೀಡಾಗುತ್ತಿದ್ದಂತೆ ದಂಡಿಯಾ ಫೇಸ್‌ಬುಕ್ ಲೈವ್ ಅನ್ನು ಅಳಿಸಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.