ADVERTISEMENT

ವಿಂಗ್ ಕಮಾಂಡರ್ ಅಭಿನಂದನ್ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಸುದ್ದಿ ನಿಜವೇ?

ಬಿಜೆಪಿ ಬೆಂಬಲಿತ ಫೇಸ್‌ಬುಕ್‌ ಪುಟಗಳಲ್ಲಿ ವೈರಲ್ ಆಗಿದೆ ಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 4 ಮೇ 2019, 16:01 IST
Last Updated 4 ಮೇ 2019, 16:01 IST
   

ಬೆಂಗಳೂರು:ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಮತ ಚಲಾಯಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಜತೆಗೆ ಬಿಜೆಪಿ ಚಿಹ್ನೆಯಿರುವ ಕೇಸರಿ ಶಾಲು ಹಾಕಿರುವ, ಅಭಿನಂದನ್‌ರನ್ನೇ ಹೋಲುವ ವ್ಯಕ್ತಿಯೊಬ್ಬರ ಫೋಟೊವನ್ನೂ ಪ್ರಕಟಿಸಲಾಗಿದೆ.

‘ವಿಂಗ್ ಕಮಾಂಡರ್ ಅಭಿನಂದನ್‌ಜಿ ಬಹಿರಂಗವಾಗಿ ಬಿಜೆಪಿಯನ್ನು ಬೆಂಬಲಿಸಿದ್ದು ಮೋದಿಜಿ ಅವರನ್ನು ಪ್ರಧಾನಿ ಮಾಡಲು ಮತ ಚಲಾಯಿಸಿದ್ದಾರೆ. ಸದ್ಯ ಮೋದಿ ಅವರಿಗಿಂತ ಉತ್ತಮ ಪ್ರಧಾನಿ ಬೇರೊಬ್ಬರಿಲ್ಲ ಎಂದೂ ಹೇಳಿದ್ದಾರೆ. ಸ್ನೇಹಿತರೇ, ಇದುಕಾಂಗ್ರೆಸ್‌ನವರಿಗೆ ಮತ್ತು ಜಿಹಾದಿಗಳಿಗೆ ತಲುಪುವಂತೆ ನೋಡಿಕೊಳ್ಳಿ. ನೀವು (ಕಾಂಗ್ರೆಸ್‌ನವರನ್ನು ಉದ್ದೇಶಿಸಿ) ಯೋಧನನ್ನು ಜೀವಂತ ವಾಪಸ್ ಕರೆಸಿಕೊಳ್ಳಲಿಲ್ಲ ಹಾಗೂ ಇಂದು ಅಭಿನಂದನ್ ವಾಪಸಾಗಿದ್ದು ಬಿಜೆಪಿಗೆ ಮತವನ್ನೂ ಹಾಕಿದ್ದಾರೆ’ ಎಂದು ‘ನಮೋ ಬೆಸ್ಟ್‌ ಪಿಎಂ ಆಫ್ ಇಂಡಿಯಾ’ ಎಂಬ ಫೇಸ್‌ಬುಕ್‌ಪುಟದಲ್ಲಿ ಬರೆಯಲಾಗಿದೆ.

ಬಿಜೆಪಿ ಬೆಂಬಲಿತ ಅನೇಕ ಫೇಸ್‌ಬುಕ್‌ ಪುಟಗಳಲ್ಲಿ ಮತ್ತು ಗ್ರೂಪ್‌ಗಳಲ್ಲಿ ಈ ಸಂದೇಶ ಹರಿದಾಡುತ್ತಿದೆ. ಟ್ವಿಟರ್‌ನಲ್ಲೂ ಶೇರ್ ಆಗಿದೆ.

ADVERTISEMENT

ನಿಜವೇನು?

ಇದು ಅಭಿನಂದನ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರ ಚಿತ್ರವನ್ನು ಬಳಸಿಕೊಂಡು ಹರಡಲಾಗಿರುವ ಸುಳ್ಳು ಸುದ್ದಿ ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.

ಚಿತ್ರ ಕೃಪೆ: ಆಲ್ಟ್‌ನ್ಯೂಸ್

ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಚಿತ್ರದಲ್ಲಿರುವ ವ್ಯಕ್ತಿ ದೊಡ್ಡದಾದ ಕನ್ನಡಕ ಧರಿಸಿರುವುದರಿಂದ ಮುಖದ ಭಾಗ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಆ ವ್ಯಕ್ತಿಯ ಬಲಗಣ್ಣಿನ ಬದಿಯಲ್ಲಿ ಮಚ್ಚೆ ಇದೆ. ಆದರೆ ಅಭಿನಂದನ್ ಬಲಗಣ್ಣಿನ ಬದಿಯಲ್ಲಿ ಮಚ್ಚೆ ಇಲ್ಲ. ಅಭಿನಂದನ್ ತುಟಿಯ ಕೆಳಭಾಗದಲ್ಲಿ ಮಚ್ಚೆ ಇದೆ. ಆದರೆ ಫೋಟೊದಲ್ಲಿರುವ ವ್ಯಕ್ತಿಯ ತುಟಿಯ ಕೆಳಭಾಗದಲ್ಲಿ ಮಚ್ಚೆ ಇಲ್ಲ. ಅಭಿನಂದನ್ ಮತ್ತು ಫೋಟೊದಲ್ಲಿರುವ ವ್ಯಕ್ತಿಯ ಗಡ್ಡ, ಕತ್ತಿನ ಭಾಗದಲ್ಲಿಯೂ ವ್ಯತ್ಯಾಸಗಳನ್ನು ಕಾಣಬಹುದು ಎಂದು ವರದಿ ಉಲ್ಲೇಖಿಸಿದೆ.

ಇನ್ನೊಂದು ಮುಖ್ಯ ಅಂಶವೆಂದರೆ, ಅಭಿನಂದನ್ ಅವರು ತಮಿಳುನಾಡಿನವರು. ಅವರಿಗೆ ತಮಿಳುನಾಡಿನಲ್ಲಿ ಮತದಾನದ ಹಕ್ಕಿರುವ ಸಾಧ್ಯತೆಯೇ ಹೆಚ್ಚು. ಆದರೆ, ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ತಮಿಳುನಾಡಿನಲ್ಲಿ ಮತದಾನ ಇರಲಿಲ್ಲ ಎಂಬುದು ಗಮನಾರ್ಹ.

ನಿಯಮಗಳ ಪ್ರಕಾರ, ಭಾರತೀಯ ವಾಯುಪಡೆಯ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಅಭಿನಂದನ್ ಅವರು ಬಿಜೆಪಿ ಪರ ಪ್ರಚಾರ ಮಾಡುವಂತೆಯೂ ಇಲ್ಲ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.