
ಮುಂಬೈ: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯದಲ್ಲಿ ಟಿಎಂಸಿಯು ಬಿಜೆಪಿಗಿಂತ ಮುಂದಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರೇ ಮುಂದಿನ ಸರ್ಕಾರವನ್ನು ರಚಿಸಲಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ರಾಜಕೀಯ ಸಂಖ್ಯೆಗಳಿಗಿಂತಲೂ ಕೋವಿಡ್-19 ಸಂಖ್ಯೆಗಳು ಹೆಚ್ಚಳವಾಗುತ್ತಿರುವುದರ ಬಗ್ಗೆಯೇ ಎಲ್ಲರೂ ಈಗ ಹೆಚ್ಚು ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆದ 292 ಸ್ಥಾನಗಳ ಪೈಕಿ 202 ರಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಂದಿದ್ದು, ಸರ್ಕಾರ ರಚನೆಗೆ ಬೇಕಾದ ಅರ್ಧದಷ್ಟು ಸಂಖ್ಯೆಯನ್ನು ದಾಟಿದೆ, ಬಿಜೆಪಿ 77 ಸ್ಥಾನಗಳಲ್ಲಿ ಹಿಂದುಳಿದಿದೆ.
ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮಹಾರಾಷ್ಟ್ರದಲ್ಲಿ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ಆದರೆ ಬ್ಯಾನರ್ಜಿಗೆ ಬೆಂಬಲವನ್ನು ಸೂಚಿಸಿತು.
ಇತ್ತೀಚಿನ ಮತದಾನ ಎಣಿಕೆಯ ಪ್ರವೃತ್ತಿಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲು ಸಜ್ಜಾಗಿದೆ, ಕೇರಳದಲ್ಲಿ ಎಲ್‌ಡಿಎಫ್ ಮುಂದಿದ್ದರೆ, ಅಸ್ಸಾಂನಲ್ಲಿ ಬಿಜೆಪಿ ಅನಾಯಾಸವಾಗಿ ಮುನ್ನಡೆ ಕಾಯ್ದುಕೊಂಡಿದೆ.
ಅಲ್ಲದೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪ್ರತಿಸ್ಪರ್ಧಿ ಡಿಎಂಕೆ ಅಧಿಕಾರಕ್ಕೇರುವ ಎಲ್ಲ ಸೂಚನೆಗಳು ಕಾಣಿಸುತ್ತಿದ್ದು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎಐಎನ್‌ಆರ್‌ಸಿ ನೇತೃತ್ವದ ಎನ್‌ಡಿಎ ಅಧಿಕಾರದತ್ತ ಸಾಗಿದೆ.ಪುದುಚೇರಿ ಮತ್ತು ತಮಿಳುನಾಡು ಹೊರತುಪಡಿಸಿ, ಇತರ ರಾಜ್ಯಗಳಲ್ಲಿ ರಾಜಕೀಯ ಚಿತ್ರಣವು ಯಾವುದೇ ಬದಲಾವಣೆ ಕಾಣುವುದಿಲ್ಲ ಎಂದು ರಾವುತ್ ಹೇಳಿದ್ದಾರೆ.
'ಮಮತಾ ದೀದಿ ಅವರು ಬಿಜೆಪಿಯ ಸವಾಲನ್ನು ಸ್ವೀಕರಿಸಿದರು ಮತ್ತು ಕೇವಲ ಒಂದು ಸ್ಥಾನದಿಂದ ಮಾತ್ರ ಸ್ಪರ್ಧಿಸಿದ್ದರು ಎಂಬುದಕ್ಕೆ ನಾವು ಅಭಿನಂದಿಸಬೇಕಾಗಿದೆ. ಮಮತಾರನ್ನು ಸೋಲಿಸಲು ಬಿಜೆಪಿ ಶ್ರಮವಹಿಸಿ ಸಾಕಷ್ಟು ಪ್ರಯತ್ನಿಸಿದರೂ ಸಹ ಮಮತಾ ಅವರನ್ನು ಸೋಲಿಸುವುದು ಸುಲಭವಲ್ಲ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುಂದಿನ ಸರ್ಕಾರವನ್ನು ರಚಿಸುತ್ತದೆ ಎಂಬುದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲ' ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬ್ಯಾನರ್ಜಿ ಅವರ ಒಂದು ಕಾಲದ ನಿಷ್ಠಾವಂತ ಮತ್ತು ಈಗ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯವರು ನಂದಿಗ್ರಾಮದಲ್ಲಿ ಹಿಂದುಳಿದಿರುವ ಕುರಿತು ಕೇಳಿದ ಪ್ರಶ್ನೆಗೆ, ಬ್ಯಾನರ್ಜಿ ಗೆಲ್ಲುತ್ತಾರೆ ಎಂಬ ಬಗ್ಗೆ ಶಿವಸೇನೆ ವಿಶ್ವಾಸ ಹೊಂದಿದೆ ಎಂದು ರಾವುತ್ ಹೇಳಿದ್ದಾರೆ.
'ನಾವು ಚುನಾವಣಾ ಪ್ರಚಾರ ಮಾಡಿದ್ದಕ್ಕಾಗಿ ಬೆಲೆ ತೆರುತ್ತಿದ್ದೇವೆ. ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಮತ್ತು ಅದನ್ನು ಮಾಡಲು ನಮಗೆ ಆಮ್ಲಜನಕವೂ ಬೇಕು' ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.