ಇಲಿ (ಸಾಂದರ್ಭಿಕ ಚಿತ್ರ)
ಜೈಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕನ ಕಾಲಿಗೆ ಇಲಿ ಕಚ್ಚಿದ್ದರಿಂದ ಮೃತಪಟ್ಟಿದ್ದಾನೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ರಾಜ್ಯ ಕ್ಯಾನ್ಸರ್ ಸಂಸ್ಥೆಯಲ್ಲಿ (ಸವಾಯಿ ಮಾನ್‌ಸಿಂಗ್ ಮೆಡಿಕಲ್ ಕಾಲೇಜು) ಡಿ. 11ರಂದು ಬಾಲಕನನ್ನು ದಾಖಲಿಸಲಾಗಿತ್ತು. ಆದರೆ ಬಾಲಕ ಇಲಿ ಕಡಿತದಿಂದ ಮೃತಪಟ್ಟಿದ್ದಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತನಿಖೆಗೆ ರಾಜಸ್ಥಾನ ಸರ್ಕಾರ ಸಮಿತಿ ರಚನೆ ಮಾಡಿದೆ.
‘ಬಾಲಕನಿಗೆ ಜ್ವರ ಹಾಗೂ ನ್ಯುಮೋನಿಯಾ ಇತ್ತು. ಅತಿಯಾದ ಸೋಂಕು ಸೆಪ್ಟಿಸೆಮಿಯಾ ಆಘಾತದಿಂದ ಶುಕ್ರವಾರ ಮೃತಪಟ್ಟಿದ್ದಾನೆ’ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಡಾ. ಸಂದೀಪ್ ಜಸುಜಾ ತಿಳಿಸಿದ್ದಾರೆ.
ಘಟನೆ ಸಂಬಂಧ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ಅಂಬರೀಷ್ ಕುಮಾರ್ ಅವರು, ಸವಾಯಿ ಮಾನ್‌ಸಿಂಗ್ ಮೆಡಿಕಲ್ ಕಾಲೇಜ್‌ನ ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಬಾಲಕ ಅಳಲು ಪ್ರಾರಂಭಿಸಿದ್ದ. ಕುಟುಂಬ ಸದಸ್ಯರು ಹೊದಿಕೆಯನ್ನು ತೆಗೆದಾಗ, ಇಲಿ ಕಡಿತದಿಂದ ಕಾಲ್ಬೆರಳುಗಳಿಂದ ರಕ್ತ ಸೋರುವುದು ಕಂಡಿತ್ತು.
ಕೂಡಲೇ ಅಲ್ಲಿದ್ದ ನರ್ಸ್‌ಗೆ ಮಾಹಿತಿ ನೀಡಿದ್ದು, ಪ್ರಥಮ ಚಿಕಿತ್ಸೆ ನೀಡಿ ಕಾಲಿಗೆ ಬ್ಯಾಂಡೇಜ್ ಹಾಕಿದ್ದಾರೆ.
ಇಲಿ ಕಚ್ಚಿದ ಮಾಹಿತಿ ಬಂದ ಕೂಡಲೇ ಮಗುವಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ಜಸುಜಾ ತಿಳಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಕಾಪಾಡಲು ನಿರ್ದೇಶನವೂ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.