ADVERTISEMENT

18 ವರ್ಷ ಮೀರಿದವರಿಗಾಗಿ 188 ಕೋಟಿ ಡೋಸ್‌ ಲಸಿಕೆ ಅಗತ್ಯ: ಕೇಂದ್ರ ಸರ್ಕಾರ

ಪಿಟಿಐ
Published 20 ಜುಲೈ 2021, 11:52 IST
Last Updated 20 ಜುಲೈ 2021, 11:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ 18 ವರ್ಷದ ಮೀರಿದ ಜನಸಂಖ್ಯೆ 94 ಕೋಟಿ ಇದ್ದು, ಇವರೆಲ್ಲರಿಗೂ ನೀಡಲು ಒಟ್ಟು 188 ಕೋಟಿ ಡೋಸ್‌ ಲಸಿಕೆ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಒಂದೇ ಡೋಸ್ ನೀಡಬಹುದಾದ ಲಸಿಕೆಗೆ ಅನುಮೋದನೆ ಮತ್ತು ಅದರ ಬಳಕೆ ಆರಂಭವಾದ ಬಳಿಕ ಈ ಸಂಖ್ಯೆ ಕಡಿಮೆಯೂ ಆಗಬಹುದು ಎಂದು ಸರ್ಕಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದೆ.

ಬೇಡಿಕೆಯಿರುವ ಲಸಿಕೆ ಉತ್ಪಾದನೆಗೆ ಕಂಪನಿಗಳು ಶಕ್ತವಾಗಿವೆಯೇ ಎಂಬ ಪ್ರಶ್ನೆಗೆ, ಆರೋಗ್ಯ ಸಚಿವಾಲಯದ ರಾಜ್ಯ ಸಚಿವ ಭಾರತಿ ಪ್ರವೀಣ್‌ ಪವಾರ್ ಅವರು, ಜನವರಿ ಮತ್ತು ಡಿಸೆಂಬರ್ 2021ರ ಅವಧಿಯಲ್ಲಿ ಒಟ್ಟಾರೆ 187 ಕೋಟಿ ಲಸಿಕೆಯು ಬಳಕೆಗೆ ಲಭ್ಯವಿರುತ್ತದೆ ಎಂದು ಉತ್ತರಿಸಿದ್ದಾರೆ.

ADVERTISEMENT

ಹೆಚ್ಚುವರಿಯಾಗಿ ಇನ್ನೂ ಕೆಲವು ಲಸಿಕೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಇವುಗಳ ಬಳಕೆಗೆ ಅನುಮೋದನೆ ದೊರೆತಲ್ಲಿ ಅರ್ಹ ಜನಸಂಖ್ಯೆಗೆ ಲಸಿಕೆಯನ್ನು ಕೊಡಬಹುದಾಗಿದೆ ಎಂದು ತಿಳಿಸಿದರು.

ಇನ್ನೊಂದು ಉತ್ತರದಲ್ಲಿ ಸಚಿವರು, ಎರಡು ಲಸಿಕೆ ಉತ್ಪಾದಕ ಸಂಸ್ಥೆಗಳು ಕ್ರಮವಾಗಿ ಈ ಲಸಿಕೆಗಳ ದರವನ್ನು ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್‌ಗೆ ₹ 600 ಮತ್ತು ಕೋವ್ಯಾಕ್ಸಿನ್‌ಗೆ ₹ 12,00 ನಿಗದಿಪಡಿಸಿವೆ. ಸದ್ಯ ಆಮದು ಮಾಡಿಕೊಳ್ಳಲಾಗುತ್ತಿರುವ ಸ್ಪುಟ್ನಿಕ್‌ ವಿ ಲಸಿಕೆಗೆ ₹ 948 ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಇದರ ಹೊರತಾಗಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಗರಿಷ್ಠ ₹ 150 ಸೇವಾ ಶುಲ್ಕವನ್ನು ನಿಗದಿಪಡಿಸಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಲಸಿಕೆ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.