ADVERTISEMENT

50ಕ್ಕೂ ಹೆಚ್ಚು ಬಾಲಕಿಯರು ಮತ್ತು ಮಹಿಳೆಯರಿಗೆ ಕಿರುಕುಳ: 19 ವರ್ಷದ ಯುವಕನ ಬಂಧನ

ಪಿಟಿಐ
Published 10 ಫೆಬ್ರುವರಿ 2021, 13:12 IST
Last Updated 10 ಫೆಬ್ರುವರಿ 2021, 13:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಕಲಿ ಖಾತೆಗಳ ಮೂಲಕ 50ಕ್ಕೂ ಹೆಚ್ಚು ಬಾಲಕಿಯರನ್ನು ಮತ್ತು ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸಿ ಅವರ ಚಿತ್ರಗಳನ್ನು ತಿರುಚುವ ಮೂಲಕ ಕಿರುಕುಳ ನೀಡಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಫರಿದಾಬಾದ್‌ನಲ್ಲಿ ಬಂಧಿಸಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆರೋಪಿಯನ್ನು ರಹೀಂ ಖಾನ್ ಎಂದು ಗುರುತಿಸಲಾಗಿದೆ. ಈತ 8 ನೇ ತರಗತಿವರೆಗೂ ಓದಿಕೊಂಡಿದ್ದು, ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಯುವತಿಯರ ಫೋಟೊವನ್ನು ತಿದ್ದುವಲ್ಲಿ ನಿರತನಾಗಿದ್ದ ಎಂದಿದ್ದಾರೆ.

ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ 50ಕ್ಕೂ ಹೆಚ್ಚು ಬಾಲಕಿಯರು ಮತ್ತು ಮಹಿಳೆಯರನ್ನು ಹಿಂಬಾಲಿಸುತ್ತಿದ್ದ ಆರೋಪಿಯು ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ನಕಲಿ ಗುರುತನ್ನು ಬಳಸಿಕೊಂಡು ಅವರ ಫೋಟೊಗಳನ್ನು ತಿರುಚುವ ಮೂಲಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಪರಿಚಿತ ವ್ಯಕ್ತಿಯೊಬ್ಬ ತನ್ನ ತಿರುಚಿದ ಚಿತ್ರಗಳನ್ನು ಇನ್‌ಸ್ಟಾಗ್ರಾಂ "ch_rahim_khan786" ಖಾತೆಯಿಂದ ಕಳುಹಿಸುತ್ತಿದ್ದಾನೆ ಮತ್ತು ಮತ್ತಷ್ಟು ನಗ್ನ ಚಿತ್ರಗಳನ್ನು ಕಳುಹಿಸುವಂತೆ ಬೇಡಿಕೆಯಿಟ್ಟಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯೊಬ್ಬರು ಮಂಗಳವಾರ ಆರ್‌ಪಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಖಾನ್‌ನನ್ನು ಬಂಧಿಸಲಾಗಿದೆ.

ತಾಂತ್ರಿಕ ವಿಚಾರಣೆ ಮತ್ತು ಇನ್‌ಸ್ಟಾಗ್ರಾಂನಿಂದ ಪಡೆದ ವಿವರಗಳ ಆಧಾರದ ಮೇಲೆ ನೈರುತ್ಯ ಜಿಲ್ಲೆಯ ಸೈಬರ್ ಸೆಲ್ ತಂಡವು ಆರೋಪಿಯ ಸ್ಥಳವನ್ನು ಪತ್ತೆ ಮಾಡಿದೆ. ಹರಿಯಾಣದ ಫರಿದಾಬಾದ್‌ನಲ್ಲಿರುವ ಆತನ ಮನೆಯಿಂದ ಖಾನ್‌ನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ನೈರುತ್ಯ) ಇಂಗಿತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ವಿಚಾರಣೆ ವೇಳೆ ಖಾನ್ ತಾನು ಅಪರಾಧದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಮತ್ತು ವೈಯಕ್ತಿಕ ತೃಪ್ತಿಗಾಗಿ ದೇಶದಾದ್ಯಂತ 50ಕ್ಕೂ ಹೆಚ್ಚು ಬಾಲಕಿಯರನ್ನು ಮತ್ತು ಮಹಿಳೆಯರನ್ನು ಬಳಸಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಯ ಮೊಬೈಲ್ ಫೋನ್‌ನಿಂದ ಚಾಟ್ ವಿವರಗಳು, ವಿಡಿಯೊ ತುಣುಕುಗಳು ಮತ್ತು ವಿವಿಧ ಮಹಿಳೆಯರ ಛಾಯಾಚಿತ್ರಗಳು ಸೇರಿದಂತೆ ಹಲವು ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ, ಇತರ ಸಂತ್ರಸ್ತರನ್ನು ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.