ಪತ್ರಿಕಾಗೋಷ್ಠಿಯಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ಪ್ರತಾಪ್ ಸಿಂಗ್ ಬಜ್ವಾ
– ಪಿಟಿಐ ಚಿತ್ರ
ನವದೆಹಲಿ: 1984ರ ಸ್ವರ್ಣ ಮಂದಿರದ ಮೇಲಿನ ದಾಳಿ ತಪ್ಪಾದ ನಿರ್ಧಾರವಾಗಿತ್ತು. ಅದಕ್ಕೆ ತಮ್ಮ ಪಕ್ಷ ಕ್ಷಮೆಯನ್ನೂ ಕೋರಿದೆ. ಸೇನಾ ಕಾರ್ಯಾಚರಣೆ ನಡೆಸಲು ಬಿಜೆಪಿ –ಆರ್‌ಎಸ್‌ಎಸ್ ಸರ್ಕಾರದ ಮೇಲೆ ಒತ್ತಡ ಹೇರಿದ್ದವು ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸ್ವರ್ಣ ಮಂದಿರದಲ್ಲಿ ಕಾರ್ಯಾಚರಣೆ ನಡೆಸಲು ಹಲವು ಕಾರಣಗಳು ಇದ್ದಿರಬಹುದು. ಆದರೆ ಬಿಜೆಪಿ ದೇಶದಾದ್ಯಂತ ಮೆರವಣಿಗೆ ಮಾಡಿ ಕಾರ್ಯಾಚರಣೆ ನಡೆಸಲು ಒತ್ತಡ ಹೇರಿದ್ದು ಪ್ರಮುಖ ಕಾರಣಗಳಲ್ಲಿ ಒಂದು. ಇದಕ್ಕಾಗಿ ಬಿಜೆಪಿಯವರು ಸಿಖ್ಖರು ಹಾಗೂ ಹರ್ ಮಂದಿರ್ ಸಾಹೆಬ್‌ಗೆ ತೆರಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸಿಖ್ ದಂಗೆಯ ಆರೋಪ ಎದುರಿಸಿದ್ದ ಜಗದೀಶ್ ಟೈಟ್ಲರ್ ಅವರನ್ನು ಪಕ್ಷದಿಂದ ಯಾಕೆ ಉಚ್ಛಾಟಿಸಲಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಅವಧಿಯಲ್ಲಿ ಗಲಭೆ ಹಾಗೂ ದಾಳಿ ನಡೆದಿದ್ದರಿಂದ ನಾವು ಒಂದಲ್ಲ, ಹಲವು ಬಾರಿ ಕ್ಷಮೆ ಕೇಳಿದ್ದೇವೆ. ಹರ್ಮಂದಿರ್ ಸಾಹಿಬ್ ಮೇಲಿನ ದಾಳಿ ತಪ್ಪು. ಇದನ್ನು ಒಪ್ಪಿಕೊಂಡು ಕಾಂಗ್ರೆಸ್ ಕ್ಷಮೆ ಕೇಳಿದೆ’ ಎಂದು ಅವರು ಹೇಳಿದ್ದಾರೆ.
10 ವರ್ಷಗಳಿಂದ ಬಿಜೆಪಿ ಅಧಿಕಾರಿಲ್ಲಿದೆ. ಯಾರನ್ನು ಶಿಕ್ಷಿಸಬೇಕೋ ಅವರಿಗೆ ಶಿಕ್ಷೆ ನೀಡಬಹುದಿತ್ತು ಎಂದು ಹೇಳಿದರು.
‘ಎಐಸಿಸಿ ಕಚೇರಿಯಲ್ಲಿ ಕುಳಿತು ನಾನು ಹೇಳುತ್ತಿದ್ದೇನೆ. 1984ರ ಸ್ವರ್ಣ ಮಂದಿರ ದಾಳಿ ತಪ್ಪು. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ದಾಳಿಯ ಹಿಂದೆ ಬಿಜೆಪಿಯ ಚಳವಳಿಯ ಒತ್ತಡ ಇತ್ತು. ಸ್ವರ್ಣ ಮಂದಿರಕ್ಕೆ ಸೇನೆ ನುಗ್ಗಿಸಬೇಕು ಎಂದು ಆಗ್ರಹಿಸಿದ್ದರು. ಅದೊಂದು ಚಳವಳಿ ಎಂದೆ ಎಲ್.ಕೆ ಅಡ್ವಾಣಿ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
‘ಸ್ವರ್ಣ ಮಂದಿರಕ್ಕೆ ಸೇನೆ ಕಳುಹಿಸಿ ಅಲ್ಲಿದ್ದವರನ್ನು ಬಂಧಿಸಿಲು, ಕೊಲ್ಲಲು ಬಿಜೆಪಿ ಚಳವಳಿ ನಡೆಸಿತ್ತು. ಇದು ದಾಖಲೆಯಲ್ಲಿದೆ. ಕಾಂಗ್ರೆಸ್ ಅದಕ್ಕೆ ಕ್ಷಮೆ ಯಾಚಿಸಿದೆ. ಬಿಜೆಪಿ ಕ್ಷಮೆ ಯಾಚಿಸಲಿದೆಯೇ ಎಂದು ನಾನು ಕೇಳಬಸುತ್ತೇನೆ’ ಎಂದು ಚನ್ನಿ ಹೇಳಿದ್ದಾರೆ.
ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಭಯೋತ್ಪಾದಕರನ್ನು ಸೆದೆಬಡಿಯಲು ಭಾರತೀಯ ಸೇನೆಯು 1984ರ ಜೂನ್‌ನಲ್ಲಿ ಆಪರೇಷನ್ ಬ್ಲೂಸ್ಟಾರ್ ಕೈಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.