ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಆಗಮಿಸಿರುವ ಭಕ್ತರು ರಾಮ ಮಂದಿರ ಬಳಿ ಶನಿವಾರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
–ಪಿಟಿಐ ಚಿತ್ರ
ಅಯೋಧ್ಯೆ: ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ವರ್ಷ ತುಂಬಿದ್ದರಿಂದ ಅಯೋಧ್ಯೆ ನಗರ ಶನಿವಾರ ಭಕ್ತಿ, ಸಂಭ್ರಮದಲ್ಲಿ ಮಿಂದೆದ್ದಿತು.
ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೇಶದ ವಿವಿಧ ಭಾಗಗಳಿಂದ ಭಕ್ತರು ಭಾರಿ ಸಂಖ್ಯೆಯಲ್ಲಿ ಅಯೋಧ್ಯೆಗೆ ಬಂದಿದ್ದಾರೆ.
ಯಜುರ್ವೇದ ಪಠಣದೊಂದಿಗೆ ವಾರ್ಷಿಕೋತ್ಸವ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಗರ್ಭಗೃಹವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಾಲ ರಾಮನ ಮೂರ್ತಿಗೆ ಅಭಿಷೇಕ ನೆರವೇರಿಸಿದರು. ನಂತರ ಬಾಲ ರಾಮನ ಮೂರ್ತಿಗೆ ಮಹಾ ಆರತಿ ಮಾಡಿ, 56 ಭಕ್ಷ್ಯಗಳ ನೈವೇದ್ಯ ಸಮರ್ಪಿಸಲಾಯಿತು.
ಶುಭಾಶಯ ಕೋರಿದ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನತೆಗೆ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.
‘ಹಲವು ಶತಮಾನಗಳ ತ್ಯಾಗ, ತಪಸ್ಸು ಹಾಗೂ ಹೋರಾಟದ ಫಲವಾಗಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಈ ಮಂದಿರ ನಮ್ಮ ಸಂಸ್ಕೃತಿ ಮತ್ತು ಅಧ್ಯಾತ್ಮ ಪರಂಪರೆಯ ದ್ಯೋತಕವಾಗಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ವಿಕಸಿತ ಭಾರತ ನಿರ್ಮಾಣ ಮಾಡುವ ನಮ್ಮ ಸಂಕಲ್ಪ ಸಾಕಾರಗೊಳ್ಳುವುದಕ್ಕೆ ರಾಮ ಮಂದಿರವು ಸ್ಫೂರ್ತಿ ನೀಡಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ’ ಎಂದು ಅವರು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಭಕ್ತರು ತಂಡೋಪತಂಡವಾಗಿ ಶನಿವಾರ ಆಗಮಿಸಿದರು
* ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಅಂಗವಾಗಿ ಜ.13ರವರೆಗೆ ಉತ್ಸವಗಳು ನಡೆಯಲಿವೆ
* ಅಯೋಧ್ಯೆಯ ‘ಅಂಗದ ಟೀಲಾ’ ಪ್ರದೇಶದಲ್ಲಿ ಜರ್ಮನ್ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ 5 ಸಾವಿರ ಯಾತ್ರಿಗಳಿಗೆ ವಸತಿ ಕಲ್ಪಿಸಬಹುದಾಗಿದೆ
* ಗಣ್ಯರು ಸೇರಿದಂತೆ 110 ಜನ ಅತಿಥಿಗಳಿಗೆ ಅಮಂತ್ರಣ ಪತ್ರಿಕೆ ಕಳುಹಿಸಲಾಗಿದೆ
* ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಯಜ್ಞಶಾಲೆ’ಯಲ್ಲಿ ನಡೆಯಲಿವೆ
ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಆಗಮಿಸಿರುವ ಭಕ್ತರು ಶನಿವಾರ ಧಾರ್ಮಿಕ ಘೋಷಣೆಗಳನ್ನು ಕೂಗಿ ಗಮನ ಸೆಳೆದರು
ಕಳೆದ ವರ್ಷ ನಡೆದ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಜನರಿಗೆ ಈ ಮೂರು ದಿನಗಳ ಉತ್ಸವಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ. ‘ಅಂಗದ ಟೀಲಾ’ದಲ್ಲಿ ಮೂರು ದಿನ ನಡೆಯುವ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು–ಚಂಪತ್ ರಾಯ್ ಪ್ರಧಾನ ಕಾರ್ಯದರ್ಶಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.