ADVERTISEMENT

ಕೇಂದ್ರದ ಕೃಷಿ ಮಸೂದೆಗೆ ಬಿಜೆಪಿ ನಾಯಕರಿಂದಲೇ ವಿರೋಧ

ಪಿಟಿಐ
Published 26 ಸೆಪ್ಟೆಂಬರ್ 2020, 4:02 IST
Last Updated 26 ಸೆಪ್ಟೆಂಬರ್ 2020, 4:02 IST
ಕೃಷಿ ಮಸೂದೆ ವಿರೋಧಿಸಿ ಕೋಲ್ಕತಾದಲ್ಲಿ ರೈತರ ಪ್ರತಿಭಟನೆ
ಕೃಷಿ ಮಸೂದೆ ವಿರೋಧಿಸಿ ಕೋಲ್ಕತಾದಲ್ಲಿ ರೈತರ ಪ್ರತಿಭಟನೆ    

ಚಂಡೀಗಡ: ಹರಿಯಾಣ ಬಿಜೆಪಿ ನಾಯಕರಾದ ಪಮಿಂದರ್ ಸಿಂಗ್ ಧುಲ್ ಮತ್ತು ರಾಂಪಾಲ್ ಮಜ್ರಾ ಕೇಂದ್ರದ ಕೃಷಿ ಮಸೂದೆಗಳನ್ನು ‘ರೈತ ವಿರೋಧಿ’ ಎಂದು ಕರೆದಿದ್ದಾರೆ. ಅಲ್ಲದೆ, ಕನಿಷ್ಠ ಬೆಂಬಲ ಬೆಲೆಯ ಬಗೆಗಿನ ಆತಂಕಗಳು ಆಧಾರರಹಿತವಾದುದಲ್ಲ ಎಂದೂ ಅವರು ತಿಳಿಸಿದ್ದಾರೆ.

ಕೃಷಿ ಸುಧಾರಣಾ ಮಸೂದೆಯ ವಿಚಾರವಾಗಿ ಅನೇಕ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮತ್ತು, ಅವರ ವಾದವನ್ನು ಕೇಂದ್ರ ಕೇಳಬೇಕು ಎಂದು ಇಬ್ಬರೂ ಮಾಜಿ ಶಾಸಕರು ಒತ್ತಾಯಿಸಿದ್ದಾರೆ.

‘ಕೃಷಿಗೆ ಸಂಬಂಧಿಸಿದ ಕೇಂದ್ರದ ಮಸೂದೆಗಳು ರೈತ ವಿರೋಧಿ, ಹಾಗೂ ಜನ ವಿರೋಧಿ. ಈ ಸುಧಾರಣೆಗಳು ರೈತೋದ್ಧಾರಕ ಎಂದೇ ಕರೆಯಲಾಗುವ ಸರ್. ಚೋಟು ರಾಮ್ ಅವರ ಕನಸುಗಳಿಗೆ ವಿರುದ್ಧವಾದವು. ಅವರು ರೈತರನ್ನು ಸಮೃದ್ಧಗೊಳಿಸಲು, ರೈತರು ಸಂತೋಷದಿಂದ ಇರಬೇಕು ಎಂದು ಬಯಸಿದ್ದರು,’ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ADVERTISEMENT

‘ಕೋವಿಡ್‌ ಸಾಂಕ್ರಾಮಿಕದ ಹೊತ್ತಿನಲ್ಲಿ ಆರ್ಥಿಕತೆಯು ಪ್ರತಿಕೂಲಕಾರಿಯಾಗಿ ಪರಿಣಮಿಸಿದ್ದಾಗ ಎಲ್ಲರಲ್ಲೂ ಭರವಸೆ ಮೂಡಿಸಿದ್ದದ್ದು ಕೃಷಿ ಮಾತ್ರ. ಆದರೆ ಈಗ, ಈ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವಾಗ, ನಾವು ಅವರ ಧ್ವನಿಯನ್ನು ಕೇಳಬೇಕು,’ ಎಂದು ಪಮಿಂದರ್‌ ಸಿಂಗ್‌ ಧುಲ್‌ ಒತ್ತಿಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ ಸಂಸತ್ತಿನ ಒಳ‌–ಹೊರಗೆ ವಿರೋಧ ವ್ಯಕ್ತವಾಗಿದೆ. ಮುಖ್ಯವಾಗಿ ಪಂಜಾಬ್‌, ಹರಿಯಾಣ, ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ರೈತರ ಹೋರಾಟಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಮಸೂದೆಗಳನ್ನು ವಿರೋಧಿಸಿ ಶುಕ್ರವಾರ ಬಂದ್‌ ಆಚರಣೆಯನ್ನೂ ಮಾಡಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್‌ ಸೇರಿದಂತೆ ಹಲವು ವಿರೋಧ ಪಕ್ಷಗಳೂ ಬೆಂಬಲ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.