ADVERTISEMENT

ಶಬರಿಮಲೆ ದೇಗುಲ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಮಹಿಳೆಯರು

50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಿಂದು, ಕನಕದುರ್ಗಾರಿಂದ ದೇಗುಲ ಪ್ರವೇಶ

ಏಜೆನ್ಸೀಸ್
Published 2 ಜನವರಿ 2019, 5:06 IST
Last Updated 2 ಜನವರಿ 2019, 5:06 IST
   

ತಿರುವನಂತಪುರ: 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ಬುಧವಾರ ನಸುಕಿನಲ್ಲಿ ಶಬರಿಮಲೆ ದೇಗುಲ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿವಾಹಿನಿಗಳು ವರದಿ ಮಾಡಿವೆ.

ಸುಮಾರು 40 ವರ್ಷ ವಯಸ್ಸಿನ ಬಿಂದು ಮತ್ತುಕನಕದುರ್ಗಾ ಎಂಬುವವರುಮುಂಜಾವ ದೇಗುಲ ಪ್ರವೇಶಿಸಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ ಎನ್ನಲಾಗಿದೆ.

ಸೋಮವಾರ ಮಧ್ಯರಾತ್ರಿ ಶಬರಿಮಲೆ ಏರಲು ಆರಂಭಿಸಿದ್ದ ಭಕ್ತೆಯರು ನಸುಕಿನ ಜಾವ 3.45ಕ್ಕೆ ದೇಗುಲ ತಲುಪಿದ್ದು, ಅಯ್ಯಪ್ಪನಿಗೆ ಪ್ರಾರ್ಥನೆ ಸಲ್ಲಿಸಿ ವಾಪಸಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಮಫ್ತಿಯಲ್ಲಿದ್ದ ಹಾಗೂ ಸಮವಸ್ತ್ರದಲ್ಲಿದ್ದ ಪೊಲೀಸರ ತಂಡ ಮಹಿಳೆಯರಿಗೆ ಭದ್ರತೆ ಒದಗಿಸಿದೆ.

ಕನಕದುರ್ಗಾ ಮತ್ತು ಇತರರ ಜತೆಗೂಡಿ ಶಬರಿಮಲೆ ದೇಗುಲಕ್ಕೆ ತೆರಳಿ ದರ್ಶನ ಪಡೆದಿದ್ದೇವೆ ಎಂದು ಬಿಂದು ಅವರು ಏಷ್ಯಾನೆಟ್ ಸುದ್ದಿವಾಹಿನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಎಂದು ದಿ ನ್ಯೂಸ್‌ ಮಿನಿಟ್ ವರದಿ ಮಾಡಿದೆ. ಪಂಪಾ ತಲುಪಿದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಭಕ್ತರಿಂದ ಯಾವುದೇ ರೀತಿಯ ಪ್ರತಿಭಟನೆ ವ್ಯಕ್ತವಾಗಲಿಲ್ಲ ಎಂದೂ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಆದಾಗ್ಯೂ, ಮಹಿಳೆಯರು ಶಬರಿಮಲೆ ಪ್ರವೇಶಿಸಿದ ಬಗ್ಗೆ ಕೇರಳ ಸರ್ಕಾರವಾಗಲಿ, ಪೊಲೀಸರಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ.

ಶಬರಿಮಲೆ ದೇಗುಲ ಪ್ರವೇಶಿಸಲು ಡಿಸೆಂಬರ್‌ ಕೊನೆಯ ವಾರ ಇಬ್ಬರು ಮಹಿಳೆಯರು ಪ್ರಯತ್ನಿಸಿದ್ದರು. ಆದರೆ, ತೀವ್ರ ಪ್ರತಿಭಟನೆ ಎದುರಾಗಿದ್ದರಿಂದ ಅವರು ಅರ್ಧದಲ್ಲೇ ವಾಪಸಾಗಿದ್ದರು.

ಋತುಮತಿಯಾಗುವ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಇದ್ದ ಶತಮಾನಗಳ ನಿರ್ಬಂಧವನ್ನು ಇತ್ತೀಚೆಗೆ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಎಲ್ಲ ವಯಸ್ಸಿನ ಸ್ತ್ರೀಯರೂ ದೇಗುಲ ಪ್ರವೇಶಿಸಬಹುದು ಎಂದು ಆದೇಶಿಸಿತ್ತು. ಇದರ ವಿರುದ್ಧ ಹಲವು ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದವು. ಈ ಮಧ್ಯೆ, ತೀರ್ಪಿನ ವಿರುದ್ಧಪುನರ್‌ಪರಿಶೀಲನಾ ಅರ್ಜಿ ಸಲ್ಲಿಸದ ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿತ್ತು.

ಸ್ತ್ರೀಯರ ಪ್ರವೇಶ ವಿರೋಧಿಸಿ ಶಬರಿಮಲೆ, ಪಂಪಾ, ನಿಲಕ್ಕಲ್ ಮತ್ತಿತರೆಡೆಗಳಲ್ಲಿ ನಡೆದ ಪ್ರತಿಭಟನೆಗಳು ಹಿಂಸಾರೂಪ ತಾಳಿದ್ದವು. ಘಟನೆಗೆ ಸಂಬಂಧಿಸಿ ನೂರಾರು ಜನರನ್ನು ಬಂಧಿಸಲಾಗಿತ್ತು.

ಮತ್ತೊಂದೆಡೆ, ಸುಪ್ರೀಂ ಕೋರ್ಟ್‌ ತೀರ್ಪಿನ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿರುವುದಕ್ಕೂ ವ್ಯಾಪಕ ವಿರೋಧ ವ್ಯಕ್ತವಾಗಿದೆ.ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಅಡ್ಡಿ ಮಾಡುತ್ತಿರುವುದನ್ನು ಖಂಡಿಸಿ ಕೇರಳದ ಲಕ್ಷಾಂತರ ಮಹಿಳೆಯರು 620 ಕಿ.ಮೀ ಉದ್ದದ ‘ಮಹಿಳೆಯರ ಗೋಡೆ’ ನಿರ್ಮಿಸುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.