ADVERTISEMENT

ಆರೋಪ ಸಾಬೀತುಪಡಿಸುವಲ್ಲಿ ಸಿಬಿಐ ಸಂಪೂರ್ಣ ವಿಫಲ: ಸಿಬಿಐನ ವಿಶೇಷ ನ್ಯಾಯಾಲಯ

2008ರಲ್ಲಿ ನ್ಯಾಯಮೂರ್ತಿಯೊಬ್ಬರ ಮನೆ ಬಾಗಿಲಿನಲ್ಲಿ ನಗದು ಪತ್ತೆಯಾದ ಪ್ರಕರಣ

ಪಿಟಿಐ
Published 3 ಏಪ್ರಿಲ್ 2025, 14:05 IST
Last Updated 3 ಏಪ್ರಿಲ್ 2025, 14:05 IST
   

ಚಂಡೀಗಢ: ‘2008ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ನಿವಾಸದ ಬಾಗಿಲಿನಲ್ಲಿ ನಗದು ಸಿಕ್ಕಿದ್ದ  ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಆಪಾದನೆಗಳನ್ನು ಸಾಬೀತುಪಡಿಸುವಲ್ಲಿ ಸಿಬಿಐ ಸಂಪೂರ್ಣ ವಿಫಲವಾಗಿದೆ’ ಎಂದು ಸಿಬಿಐನ ವಿಶೇಷ ನ್ಯಾಯಾಲಯವೊಂದು ಹೇಳಿದೆ.

‘ಸಿಬಿಐ ಈ ಮೊದಲು ಪ್ರಕರಣ ಮುಕ್ತಾಯಗೊಳಿಸಲು ನಿರ್ಧರಿಸಿತ್ತು. ಈ ನಿಲುವಿಗೇ ಅದು ಅಂಟಿಕೊಂಡಿರಬೇಕಿತ್ತು’ ಎಂದು ವಿಶೇಷ ಸಿಬಿಐ ನ್ಯಾಯಾಧೀಶೆ ಅಲ್ಕಾ ಮಲಿಕ್‌ ಹೇಳಿದ್ದಾರೆ.

ಪ್ರಕರಣದಲ್ಲಿ ಆರೋಪಿಗಳಾಗಿದ್ದ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಿರ್ಮಲ್ ಯಾದವ್ ಹಾಗೂ ಇತರ ನಾಲ್ವರನ್ನು ದೋಷಮುಕ್ತಗೊಳಿಸಿ ಮಾರ್ಚ್ 29ರಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಮಾರ್ಚ್ 3ರಂದು ಈ ತೀರ್ಪನ್ನು ಬಿಡುಗಡೆ ಮಾಡಲಾಗಿದೆ.

ADVERTISEMENT

₹15 ಲಕ್ಷ ನಗದು ಇರುವ ಪೊಟ್ಟಣವನ್ನು 2008ರ ಆಗಸ್ಟ್‌ 13ರಂದು ನ್ಯಾಯಮೂರ್ತಿ ನಿರ್ಮಲ್‌ಜಿತ್ ಕೌರ್ ನಿವಾಸಕ್ಕೆ ತಪ್ಪಾಗಿ ತಲುಪಿಸಲಾಗಿತ್ತು. ಆಸ್ತಿ ವಿವಾದವೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಭಾವ ಬೀರಲು ನ್ಯಾಯಮೂರ್ತಿ ಯಾದವ್ ಅವರಿಗೆ ತಲುಪಿಸಬೇಕಿದ್ದ ಹಣ ಇದಾಗಿತ್ತು ಎಂದು ಆರೋಪಿಸಲಾಗಿತ್ತು.

'ಆರೋಪಿಗಳ ವಿರುದ್ಧದ ಆಪಾದನೆ ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ. ಇದರ ಪರಿಣಾಮವಾಗಿ ಆರೋಪಿಗಳಾದ ರವೀಂದ್ರ ಭಾಸಿನ್, ರಾಜೀವ್ ಗುಪ್ತಾ, ನಿರ್ಮಲ್‌ ಸಿಂಗ್‌ ಹಾಗೂ ನಿವೃತ್ತ ನ್ಯಾಯಮೂರ್ತಿ ನಿರ್ಮಲ್‌ ಯಾದವ್‌ ಅವರನ್ನು ಖುಲಾಸೆಗೊಳಿಸಲಾಗಿದೆ’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ಮುಕ್ತಾಯಗೊಳಿಸಿ 2009ರ ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಸಿಬಿಐ ವರದಿ ಸಲ್ಲಿಸಿತ್ತು. ಇದನ್ನು ತಿರಸ್ಕರಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯ, ಪ್ರಕರಣ ಕುರಿತು ಮರುತನಿಖೆ ನಡೆಸುವಂತೆ 2010ರ ಮಾರ್ಚ್‌ನಲ್ಲಿ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.