ADVERTISEMENT

ನಕ್ಸಲರಿಂದ ಬಸ್‌ ಸ್ಫೋಟ: ಯೋಧ ಸೇರಿ ನಾಲ್ವರ ಬಲಿ

ಛತ್ತೀಸಗಡದ ದಾಂತೇವಾಡದಲ್ಲಿ ಕೃತ್ಯ

ಪಿಟಿಐ
Published 8 ನವೆಂಬರ್ 2018, 20:06 IST
Last Updated 8 ನವೆಂಬರ್ 2018, 20:06 IST

ರಾಯ‍ಪುರ: ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲೀಯರು ಗುರುವಾರ ಬಸ್‌ನಲ್ಲಿ ಕಚ್ಚಾ ಬಾಂಬ್‌ ಸ್ಫೋಟಿಸಿದ್ದು, ಮೂವರು ನಾಗರಿಕರು ಮತ್ತು ಒಬ್ಬ ಯೋಧ ಬಲಿಯಾಗಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ.

ಸ್ಫೋಟದಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ದಾಂತೇವಾಡದ ಎಸ್ಪಿ ಅಭಿಷೇಕ್‌ ಪಲ್ಲವ ತಿಳಿಸಿದ್ದಾರೆ.

ಯೋಧರು ಮಾರುಕಟ್ಟೆಯಲ್ಲಿ ದಿನಸಿ ಸಾಮಾನುಗಳನ್ನು ಖರೀದಿಸಿ ಬಸ್‌ನಲ್ಲಿ ತಮ್ಮ ಕ್ಯಾಂಪ್‌ಗೆ ವಾಪಸಾಗುತ್ತಿದ್ದಾಗ ಬಚೇಲಿಯ ಗುಡ್ಡಗಾಡು ಪ‍್ರದೇಶದಲ್ಲಿ ಸ್ಫೋಟ ನಡೆದಿದೆ ಎಂದು ಅವರು ಹೇಳಿದ್ದಾರೆ. ಬಸ್‌ ಚಾಲಕ, ನಿರ್ವಾಹಕ ಮತ್ತು ಕ್ಲೀನರ್‌ ಮೃತರಾಗಿದ್ದಾರೆ.

ADVERTISEMENT

ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿರುವ ಪ್ರದೇಶಗಳಿಗೆ ಈ ಸಿಐಎಸ್‌ಎಫ್ ಘಟಕವನ್ನು ನಿಯೋಜಿಸಲಾಗಿತ್ತು. ಇದೇ 12 ಮತ್ತು 20ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನದಲ್ಲಿ, ನಕ್ಸಲ್‌ ಪೀಡಿತ ಬಸ್ತಾರ್‌ ಪ್ರಾಂತ್ಯ ಸಹ ಸೇರಿದೆ.

**

ಉಗ್ರರ ಅಡಗುತಾಣ ಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ಅಡಗುತಾಣವನ್ನು ಪತ್ತೆಹಚ್ಚಿರುವ ಭದ್ರತಾ ಪಡೆಗಳು, ಕಚ್ಚಾ ಬಾಂಬ್‌ ತಯಾರಿಕೆಗೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಿಖರ ಮಾಹಿತಿ ಪಡೆದಿದ್ದ ಪೊಲೀಸ್‌ ಮತ್ತು ಯೋಧರ ಜಂಟಿ ತಂಡ, ರಾಮಗಿರಿ ಎಂಬಲ್ಲಿ ಈ ಅಡಗುತಾಣವನ್ನು ಪತ್ತೆ ಹಚ್ಚಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.