ADVERTISEMENT

ತೆಲಂಗಾಣ: ಡಿಜಿಪಿ ಮುಂದೆ ಶರಣಾಗಿ ಮುಖ್ಯವಾಹಿನಿಗೆ ಬಂದ 37 ಮಾವೋವಾದಿಗಳು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 13:29 IST
Last Updated 22 ನವೆಂಬರ್ 2025, 13:29 IST
<div class="paragraphs"><p>ಶರಣಾದ ನಕ್ಸಲರು</p></div>

ಶರಣಾದ ನಕ್ಸಲರು

   

– ಪಿಟಿಐ

ಹೈದರಾಬಾದ್: ಸಿಪಿಐ (ಮಾವೋವಾದಿ)ನ ತೆಲಂಗಾಣ ರಾಜ್ಯ ಸಮಿತಿ ಸದಸ್ಯರಾದ ಕೊಯ್ಯಡ ಸಂಭಯ್ಯ ಅಲಿಯಾಸ್ ಅಜಾದ್, ಅಪ್ಪಾಸಿ ನಾರಾಯಣ ಅಲಿಯಾಸ್ ರಮೇಶ್ ಮತ್ತು ದಂಡಕಾರಣ್ಯ ರಾಜ್ಯ ವಲಯ ಸಮಿತಿಯ ಮುಚಾಕಿ ಸೊಮಡಾ ಅಲಿಯಾಸ್ ಎರ್ರಾ ಸೇರಿ ಸುಮಾರು 37 ಮಂದಿ ಭೂಗತ ಮಾವೋವಾದಿಗಳು ಶನಿವಾರ ತೆಲಂಗಾಣ ಡಿಜಿಪಿಯವರ ಮುಂದೆ ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ.

ADVERTISEMENT

ಶರಣಾಗುವುದರ ಜೊತೆಗೆ ಎ.ಕೆ–47, ಎರಡು ಎಸ್‌ಎಲ್‌ಆರ್‌ಎಸ್‌, ನಾಲ್ಕು 303 ರೈಫಲ್ಸ್ ಹಾಗೂ ಒಂದು ಜಿ3 ರೈಫಲ್ ಸೇರಿದಂತೆ 8ಕ್ಕೂ ಅಧಿಕ ಶಸ್ತ್ರಗಳನ್ನು, 343 ಜೀವಂತ ಮದ್ದುಗುಂಡುಗಳನ್ನು ಒಪ್ಪಿಸಿದ್ದಾರೆ.

ಸಿಪಿಐ (ಮಾವೋವಾದಿ) ಸಂಘಟನಾ ಶಕ್ತಿ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳಲ್ಲಿ ಗಮನಾರ್ಹ ಕುಸಿತ ಉಂಟಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಈ ಸಂಘಟನೆಯು ಭದ್ರತಾ ಪಡೆಗಳಿಂದ ನಿರಂತರ ಒತ್ತಡವನ್ನು ಎದುರಿಸುತ್ತಿದೆ. ಪರಿಣಾಮ ನೆಲೆಗಳು ಕುಗ್ಗುತ್ತಿವೆ. ಸಂಘಟನೆಯೊಳಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಹೊರಹೊಮ್ಮಿವೆ ಎಂದು ತೆಲಂಗಾಣ ಡಿಜಿಪಿ ಬಿ ಶಿವಧರ್ ರೆಡ್ಡಿ ಹೇಳಿದ್ದಾರೆ.

ಹಿರಿಯ ಮುಖಂಡರ ಬಗ್ಗೆ ನಂಬಿಕೆ ಕುಸಿದು, ಅವರಲ್ಲೇ ಬಿರುಕು ಮೂಡಿದೆ. ಸರ್ಕಾರದ ಪುನರ್‌ ವಸತಿ ಯೋಜನೆಯ ಫಲವಾಗಿ ಮಾವೋವಾದಿಗಳು ಶರಣಾಗುತ್ತಿದ್ದಾರೆ’ ಎಂದು ಡಿಜಿಪಿ ತಿಳಿಸಿದ್ದಾರೆ.

2025ರಲ್ಲಿ ಈವರೆಗೆ 465 ಭೂಗತ ಕೇಡರ್‌ಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ಇವರ ಮಾಹಿತಿ ಕೊಟ್ಟವರಿಗೆ ಘೋಷಿಸಿದ್ದ ₹1.41 ಕೋಟಿಗೂ ಹೆಚ್ಚು ಬಹುಮಾನವನ್ನು ಶರಣಾದವರಿಗೆ ಪರಿಹಾರ ರೂಪದಲ್ಲಿ ವಿತರಿಸಲಾಗಿದೆ. ಜೊತೆಗೆ ಸರ್ಕಾರದ ಪುನರ್‌ವಸತಿ ಯೋಜನೆಯ ಸವಲತ್ತುಗಳೂ ಸಿಗಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.