ADVERTISEMENT

ಬಿಹಾರ | ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪು: ಐವರು ಸಿಬ್ಬಂದಿಗೆ ಗಾಯ

ಪಿಟಿಐ
Published 16 ಮಾರ್ಚ್ 2025, 5:16 IST
Last Updated 16 ಮಾರ್ಚ್ 2025, 5:16 IST
<div class="paragraphs"><p>ಗುಂಪು ಹಲ್ಲೆ</p></div>

ಗುಂಪು ಹಲ್ಲೆ

   

– ಗೆಟ್ಟಿ ಚಿತ್ರ

ಭಾಗಲ್ಪುರ: ಬಿಹಾರ ಭಾಗಲ್ಪುರ ಜಲ್ಲೆಯಲ್ಲಿ ಗುಂಪೊಂದು ಹಲ್ಲೆ ನಡೆಸಿದ್ದರಿಂದ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ADVERTISEMENT

ಕಹಾಲ್‌ಗಾಂವ್ ಉಪ ವಿಭಾಗದ ಆಂಟಿಚಕ್‌ ಪ್ರದೇಶದಲ್ಲಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭಿಸಿ ಪೊಲೀಸರು ಅಲ್ಲಿಗೆ ತೆರಳಿದ್ದರು.

ಇದು ಕಳೆದ ಐದು ದಿನಗಳಲ್ಲಿ ಪೊಲೀಸರ ಮೇಲೆ ನಡೆಯುತ್ತಿರುವ ಮೂರನೇ ಹಲ್ಲೆ ಘಟನೆ. ಮುಂಗೇರ್ ಜಿಲ್ಲೆಯಲ್ಲಿ ಶನಿವಾರ ಜನರ ಗುಂಪೊಂದು ಹಲ್ಲೆ ನಡೆಸಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸಾವನ್ನಪ್ಪಿದ್ದರೆ, ಬುಧವಾರ ಅರಾರಿಯಾ ಜಿಲ್ಲೆಯಲ್ಲಿ ಪೊಲೀಸರು ಮತ್ತು ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಮತ್ತೊಬ್ಬ ಪೊಲೀಸ್ ಸಾವನ್ನಪ್ಪಿದ್ದಾರೆ.

ಶನಿವಾರ ರಾತ್ರಿ ನಡೆದ ಘಟನೆಯಲ್ಲಿ ಓರ್ವ ಸಬ್ ಇನ್‌ಸ್ಪೆಕ್ಟರ್, ಮೂವರು ಕಾನ್‌ಸ್ಟೆಬಲ್‌ಗಳು ಮತ್ತು ಒಬ್ಬ ಚೌಕಿದಾರ್ ಗಾಯಗೊಂಡಿದ್ದಾರೆ.

‘ಇಬ್ಬರು ಹುಡುಗರ ನಡುವಿನ ಜಗಳವನ್ನು ತನಿಖೆ ಮಾಡಲು ಪೊಲೀಸರ ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ ಜಗಳ ಉಲ್ಬಣಗೊಂಡು ಹುಡುಗರಲ್ಲಿ ಓರ್ವ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಈ ವೇಳೆ ಸ್ಥಳೀಯರು ಕೂಡ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದ್ದಾರೆ ಎಂದು ಆಂಟಿಚಕ್‌ ‍ಪೊಲೀಸ್ ಠಾಣೆಯ ಠಾಣಾಧಿಕಾರಿ ಅಶುತೋಷ್ ಕುಮಾರ್ ತಿಳಿಸಿದ್ದಾರೆ.

ತಕ್ಷಣವೇ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಗಾಯಗೊಂಡ ಪೊಲೀಸರನ್ನು ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗಿದ್ದು, ಘಟನೆ ನಡೆದಾಗ ಸ್ಥಳೀಯ ಮ್ಯಾಜಿಸ್ಟ್ರೇಟ್ ಸಂಜೀವ್ ಚೌಧರಿ ಕೂಡ ಅಲ್ಲಿದ್ದರು. ಚೌಧರಿ ನೀಡಿದ ಹೇಳಿಕೆಯ ಆಧಾರದ ಮೇಲೆ, ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.