ADVERTISEMENT

ಬಿಹಾರ: 14 ಸಚಿವರ ಪೈಕಿ ಎಂಟು ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣ

ಪಿಟಿಐ
Published 18 ನವೆಂಬರ್ 2020, 12:49 IST
Last Updated 18 ನವೆಂಬರ್ 2020, 12:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಹಾರದಲ್ಲಿ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ 14 ಸಚಿವರ ಪೈಕಿ ಎಂಟು ಸಚಿವರು ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌’ (ಎಡಿಆರ್‌) ತಿಳಿಸಿದೆ.

ಎಂಟು ಸಚಿವರ ಪೈಕಿ ಆರು ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್‌ ಪ್ರಕರಣಗಳಿವೆ. ಇಂಥ ಪ್ರಕರಣಗಳು ಜಾಮೀನು ರಹಿತವಾಗಿದ್ದು, ಐದು ವರ್ಷಕ್ಕಿಂತಲೂ ಅಧಿಕ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಕ್ರಿಮಿನಲ್‌ ಪ್ರಕರಣಗಳನ್ನು ಹೊಂದಿರುವ ಸಚಿವರುಗಳ ಪೈಕಿ ಇಬ್ಬರು ಜೆಡಿಯುನವರಾಗಿದ್ದು, ನಾಲ್ವರು ಬಿಜೆಪಿ ಹಾಗೂ ತಲಾ ಒಬ್ಬರು ಹಿಂದೂಸ್ತಾನಿ ಅವಾಮ್‌ ಮೋರ್ಚಾ (ಜಾತ್ಯತೀತ) ಹಾಗೂ ವಿಕಾಸ್‌ಶೀಲ್‌ ಇನ್ಸಾನ್‌ ಪಕ್ಷದವರು.

14 ಸಚಿವರ ಪೈಕಿ 13 ಸಚಿವರು ಕೋಟ್ಯಾಧೀಶರಾಗಿದ್ದು, ಇವರ ಸರಾಸರಿ ಆಸ್ತಿ ₹3.93 ಕೋಟಿ ಇದೆ. ತಾರಾಪುರ ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ಮೇವಾ ಲಾಲ್‌ ಚೌಧರಿ ಅವರ ಆಸ್ತಿ ₹12.31 ಕೋಟಿ ಇದ್ದು, ಸಚಿವ ಅಶೋಕ್‌ ಚೌಧರಿ ಅವರು ಕನಿಷ್ಠ ಆಸ್ತಿ (₹72.89 ಲಕ್ಷ) ಹೊಂದಿದ್ದಾರೆ.

ADVERTISEMENT

ಇತ್ತೀಚೆಗೆ ನಡೆದಿದ್ದ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿತ್ತು. ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಹಾಗೂ ಸಚಿವರಾಗಿ 14 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.