ADVERTISEMENT

ಜಮ್ಮು–ಕಾಶ್ಮೀರ: ಭಾರತದ ಗಡಿಯೊಳಕ್ಕೆ ನುಸುಳಿದ ಪಾಕಿಸ್ತಾನ ಡ್ರೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮೇ 2022, 15:38 IST
Last Updated 7 ಮೇ 2022, 15:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಭಾರತದ ಗಡಿಯೊಳಕ್ಕೆ ನುಸುಳಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಶನಿವಾರ ಹಿಮ್ಮೆಟ್ಟಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಆರ್‌ಎಸ್ ಪುರ ಉಪ ವಿಭಾಗದ ಅರ್ನಿಯಾ ಪ್ರದೇಶದಲ್ಲಿ ಸಂಜೆ 7.25ರ ಹೊತ್ತಿಗೆ ಅಂತರರಾಷ್ಟ್ರೀಯ ಗಡಿ ದಾಟಿ ಡ್ರೋನ್‌ ಭಾರತ ವಾಯು ಪ್ರದೇಶಕ್ಕೆ ಬಂದಿದೆ. ಯೋಧರು 8 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಅದು ವಾಪಸಾಗಿದೆ ಎಂದು ಬಿಎಸ್‌ಎಫ್‌ ನೀಡಿರುವ ಹೇಳಿಕೆ ಉಲ್ಲೇಖಿಸಿ ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಪಾಕಿಸ್ತಾನದಿಂದ ಭಾರತದ ಗಡಿಯೊಳಕ್ಕೆ ನುಸುಳುತ್ತಿದ್ದ ಚೀನಾ ನಿರ್ಮಿತ ಡ್ರೋನ್ ಅನ್ನು ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಏಪ್ರಿಲ್ 29ರಂದು ಬಿಎಸ್‌ಎಫ್‌ ಹೊಡೆದುರುಳಿಸಿತ್ತು.

ಪಂಜಾಬ್ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಭಾರತದೊಳಕ್ಕೆ ನುಸುಳಲು ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಬಾರಿ ವಿಫಲ ಯತ್ನ ನಡೆಸಿವೆ. ಇದೀಗ ಜಮ್ಮು ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿಯೂ ಅಂಥದ್ದೇ ಪ್ರಕರಣ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.