ಭದ್ರತಾ ಪಡೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪಟ್ಟಣದ ಸಮೀಪ ಉಗ್ರರು ಮಂಗಳವಾರ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಿ ತಾಣವಾದ ಹುಲ್ಲುಗಾವಲಿನಲ್ಲಿ ವಿಹರಿಸುತ್ತಿದ್ದ 28 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಡೆದ ಈ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಕರ್ನಾಟಕದವರು ಹಾಗೂ ಇಬ್ಬರು ವಿದೇಶಿಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣಿವೆಯಲ್ಲಿ ಕಳೆದ 25 ವರ್ಷಗಳಲ್ಲಿ (2000ನೇ ಇಸವಿಯಿಂದ) ಈವರೆಗೆ ನಾಗರಿಕರನ್ನು ಗುರಿಯಾಗಿಸಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳ ಮಾಹಿತಿ ಇಲ್ಲಿದೆ.
ಮಾರ್ಚ್ 2000
ಅಲ್ಪಸಂಖ್ಯಾತ ಸಿಖ್ ಸಮುದಾಯದವರನ್ನು ಗುರಿಯಾಗಿಸಿದ್ದ ಉಗ್ರರು ಅನಂತನಾಗ್ ಜಿಲ್ಲೆಯ ಛತ್ತಿಸಿಂಘ್‌ಪೋರಾ ಗ್ರಾಮದ ಮೇಲೆ 2000ನೇ ಇಸವಿಯ ಮಾರ್ಚ್ 21ರಂದು ದಾಳಿ ಮಾಡಿದ್ದರು. ಉಗ್ರರ ಕೃತ್ಯದಿಂದಾಗಿ 36 ಮಂದಿ ಮೃತಪಟ್ಟಿದ್ದರು.
ಆಗಸ್ಟ್ 2000
ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ನುನ್ವಾನ್ ಶಿಬಿರದ ಮೇಲೆ ಆಗಸ್ಟ್‌ನಲ್ಲಿ ದಾಳಿ ನಡೆಸಲಾಗಿತ್ತು. ಆ ವೇಳೆ 20ಕ್ಕೂ ಹೆಚ್ಚು ಯಾತ್ರಿಕರು ಸೇರಿದಂತೆ ಮೂವತ್ತೆರೆಡು ಮಂದಿ ಪ್ರಾಣ ಕಳೆದುಕೊಂಡಿದ್ದರು.
ಜುಲೈ 2001
2001ರ ಜುಲೈನಲ್ಲಿ ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ಮತ್ತೊಮ್ಮೆ ದಾಳಿ ನಡೆದಿತ್ತು. ಈ ಬಾರಿ ಶೇಷನಾಗ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 13 ಮಂದಿ ಸಾವಿಗೀಡಾಗಿದ್ದರು.
ಅಕ್ಟೋಬರ್ 2001
ಶ್ರೀನಗರದಲ್ಲಿನ ಜಮ್ಮು ಮತ್ತು ಕಾಶ್ಮೀರ ಶಾಸಕಾಂಗ ಭವನದ ಮೇಲೆ 2001ರ ಅಕ್ಟೋಬರ್ 1ರಂದು ನಡೆದ ಆತ್ಮಾಹುತಿ ದಾಳಿಯಲ್ಲಿ 36 ಮಂದಿ ಸಾವನ್ನಪ್ಪಿದ್ದರು.
ಆಗಸ್ಟ್ 2002
ಉಗ್ರರು ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ 2002ರ ಆಗಸ್ಟ್‌ನಲ್ಲಿ ಛಂದನ್‌ವಾರಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ 11 ಯಾತ್ರಿಕರು ಮೃತಪಟ್ಟಿದ್ದರು.
ನವೆಂಬರ್ 2002
ದಕ್ಷಿಣ ಕಾಶ್ಮೀರದಲ್ಲಿ ಹಾದುಹೋಗುವ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಮೀಪದ ಲೋವರ್ ಮುಂಡಾದಲ್ಲಿ ಎಲ್‌ಇಡಿ ಸ್ಫೋಟದಲ್ಲಿ 9 ಯೋಧರು, ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 19 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಕೃತ್ಯವು 2002ರ ನವೆಂಬರ್ 23ರಂದು ನಡೆದಿತ್ತು.
ಮಾರ್ಚ್ 2003
ಪುಲ್ವಾಮಾ ಜಿಲ್ಲೆಯ ನಂದಿಮಾರ್ಗ್ ಗ್ರಾಮದಲ್ಲಿ 11 ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 24 ಕಾಶ್ಮೀರಿ ಪಂಡಿತರನ್ನು 2003ರ ಮಾರ್ಚ್ 23ರಂದು ಹತ್ಯೆ ಮಾಡಲಾಗಿತ್ತು.
ಜೂನ್ 2005
ಪುಲ್ವಾಮಾದ ಸರ್ಕಾರಿ ಶಾಲೆಯೊಂದರ ಮುಂಭಾಗ ಜನದಟ್ಟಣೆಯಿಂದ ಕೂಡಿದ್ದ ಮಾರುಕಟ್ಟೆಯಲ್ಲಿ ಸ್ಫೋಟಕಗಳಿದ್ದ ಕಾರು 2005ರ ಜೂನ್ 13ರಂದು ಸ್ಫೋಟಗೊಂಡಿತ್ತು. ದುರಂತದಲ್ಲಿ, ಇಬ್ಬರು ಶಾಲಾ ಮಕ್ಕಳು, ಸಿಆರ್‌ಪಿಎಫ್‌ನ ಮೂವರು ಅಧಿಕಾರಿಗಳು ಹಾಗೂ 13 ನಾಗರಿಕರು ಸಾವಿಗೀಡಾಗಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಜೂನ್ 2006
ಉಗ್ರರು ಕುಲ್ಗಾಮ್ ಜಿಲ್ಲೆಯಲ್ಲಿ 2006ರ ಜೂನ್ 12ರಂದು ಬಿಹಾರ ಹಾಗೂ ನೇಪಾಳದ 9 ಕಾರ್ಮಿಕರನ್ನು ಹತ್ಯೆ ಮಾಡಿದ್ದರು.
ಜುಲೈ 2017
ಅಮರನಾಥ ಯಾತ್ರಿಕರಿದ್ದ ಬಸ್ ಮೇಲೆ 2017ರ ಜುಲೈ 10ರಂದು ಉಗ್ರರು ದಾಳಿ ಮಾಡಿದ್ದರು. ಬಸ್‌ನಲ್ಲಿದ್ದ 8 ಮಂದಿ ಮೃತಪಟ್ಟಿದ್ದರು.
ಈ ದಾಳಿಗಳಷ್ಟೇ ಅಲ್ಲದೆ, ಉಗ್ರರು ಸೇನಾ ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಂಘರ್ಷ ನಡೆಸುತ್ತಿದ್ದಾರೆ. ಸಿಆರ್‌ಪಿಎಫ್ ಯೋಧರನ್ನು ಗುರಿಯಾಗಿಸಿ ಪುಲ್ವಾಮಾದಲ್ಲಿ 2019ರಲ್ಲಿ ನಡೆಸಿದ ದಾಳಿ ಅದಕ್ಕೆ ಪ್ರಮುಖ ಉದಾಹರಣೆಯಾಗಿದೆ. ಆ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.