ಕೊಚ್ಚಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇರಳದಲ್ಲಿ ಟ್ವೆಂಟಿ-20 ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಭಾನುವಾರ ಘೋಷಿಸಿದ್ದಾರೆ.
ಈ ಮೈತ್ರಿಕೂಟಕ್ಕೆ ‘ಜನ ಕಲ್ಯಾಣ ಮೈತ್ರಿ’(ಪೀಪಲ್ಸ್ ವೆಲ್‌ಫೇರ್ ಅಲಯನ್ಸ್–ಪಿಡಬ್ಲ್ಯೂಎ) ಎಂದು ಹೆಸರಿಡಲಾಗಿದೆ.
‘ಟ್ವೆಂಟಿ20’ ಅಸಾಂಪ್ರದಾಯಿಕ ರಾಜಕೀಯ ಪಕ್ಷವಾಗಿದ್ದು, ಲಾಭರಹಿತ ದತ್ತಿ ಸಂಸ್ಥೆಯಾಗಿ ಪ್ರಾರಂಭವಾಯಿತು. ಅದರ ವಾರ್ಷಿಕೋತ್ಸವದಲ್ಲಿ ಅರವಿಂದ ಕೇಜ್ರಿವಾಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಉಚಿತ ವಿದ್ಯುತ್ ನೀಡುವುದಾಗಿ ಕೇಜ್ರಿವಾಲ್ ಘೋಷಿಸಿದರು.
‘ದೆಹಲಿಯಲ್ಲಿ ದಿನದ 24 ಗಂಟೆಯ ವಿದ್ಯುತ್ ಪೂರೈಕೆಯಿಂದಾಗಿ ಜನರೇಟರ್ ಅಂಗಡಿಗಳನ್ನು ಮುಚ್ಚಲಾಗಿದೆ’ ಎಂದು ಅವರು ಸಮಾರಂಭವೊಂದರಲ್ಲಿ ಹೇಳಿದರು.
ರಾಜಕೀಯ ರಂಗದ ‘ಸ್ಟಾರ್ಟ್ ಅಪ್’ ರೀತಿ ಕಾರ್ಯನಿರ್ವಹಿಸುತ್ತಿರುವ ಟ್ವೆಂಟಿ20, ಈಗಾಗಲೇ ಕೇರಳದ ಕಿಝಕ್ಕಂಬಲಂ ಗ್ರಾಮ ಪಂಚಾಯಿತಿಯನ್ನು ಗೆಲ್ಲುವ ಮೂಲಕ ಛಾಪು ಮೂಡಿಸಿದೆ. ಪ್ರಸ್ತುತ, ಟ್ವೆಂಟಿ20ಯು ಕಿಝಕ್ಕಂಬಲಂ ಗ್ರಾಮ ಪಂಚಾಯಿತಿಯ ಸುತ್ತಲ ನಾಲ್ಕು ಪಂಚಾಯಿತಿಗಳಲ್ಲಿ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.