ಗೊಂಡಾ (ಉತ್ತರ ಪ್ರದೇಶ): ಪಂಜಾಬ್‌ನಲ್ಲಿ ಎಎಪಿ (ಆಮ್ ಆದ್ಮಿ ಪಕ್ಷ) ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮತ್ತೆಂದೂ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ನಿಪಾನಿಯಾದಲ್ಲಿ ಬಿಜೆಪಿಯ ಮಾಜಿ ಶಾಸಕ ದಿವಂಗತ ದಶರಥ್ ಸಿಂಗ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಭವಿಷ್ಯ ನುಡಿಯುತ್ತಿಲ್ಲ. ಆದರೆ, ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಭವಿಷ್ಯ ಸಂಕಷ್ಟದಲ್ಲಿದೆ ಎಂದು ನಾನು ಹೇಳುತ್ತಿದ್ದೇನೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು’ ಎಂದು ತಿಳಿಸಿದ್ದಾರೆ.
ಬಿಜೆಪಿಗರು ಹಿಂದೂಗಳಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಭೂಷಣ್, ‘ಇವು ರಾಜಕೀಯ ವಿಷಯಗಳು. ನಾನು ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ’ ಎಂದು ಹೇಳಿದ್ದಾರೆ.
2023ರ ಕುಸ್ತಿಪಟುಗಳ ಪ್ರತಿಭಟನೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಂದು ಪಿತೂರಿ ರೂಪಿಸಲಾಗಿತ್ತು. ಅದನ್ನು ನಡೆಸಿದ ಮತ್ತು ಬೆಂಬಲಿಸಿದ ಜನರ ನಾಶ ಖಚಿತ. ಎಲ್ಲವೂ ಶೀಘ್ರದಲ್ಲೇ ಸ್ಪಷ್ಟವಾಗುತ್ತದೆ’ ಎಂದು ತಿಳಿಸಿದ್ದಾರೆ.
ಫೆಬ್ರುವರಿ 5ರಂದು ನಡೆದ 70 ಸದಸ್ಯ ಬಲದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಎಎಪಿ 22 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಹಿನ್ನಡೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.