‘ಇಂಡಿಯಾ’ ಮೈತ್ರಿಕೂಟ ಸಭೆ
(ಸಂಗ್ರಹ ಚಿತ್ರ)
ನವದೆಹಲಿ: ಬೆಳಗಾವಿಯಲ್ಲಿ ಕಾಂಗ್ರೆಸ್‌ನ ವಿಸ್ತೃತ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯುತ್ತಿರುವ ಹೊತ್ತಿನಲ್ಲೇ ‘ಇಂಡಿಯಾ’ ಮೈತ್ರಿಕೂಟದಲ್ಲಿ ಮತ್ತೆ ಬಿಕ್ಕಟ್ಟು ಕಾಣಿಸಿಕೊಂಡಿದೆ.
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ‘ದೇಶವಿರೋಧಿ’ ಎಂದು ಕರೆದಿರುವ ಹಿರಿಯ ನಾಯಕ ಅಜಯ್ ಮಾಕನ್ ವಿರುದ್ಧ 24 ಗಂಟೆಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪಕ್ಷವನ್ನು ಮೈತ್ರಿಕೂಟದಿಂದ ಕೈಬಿಡುವಂತೆ ಮಿತ್ರಪಕ್ಷಗಳನ್ನು ಒತ್ತಾಯಿಸುವುದಾಗಿ ಎಎಪಿ ಗುರುವಾರ ಎಚ್ಚರಿಸಿದೆ. ಇದಕ್ಕೆ ಕಾಂಗ್ರೆಸ್‌ನ ದೆಹಲಿ ಘಟಕವು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಬಿಜೆಪಿ ಹಾಗೂ ಎಎಪಿಯನ್ನು ಗುರಿಯಾಗಿಸಿಕೊಂಡು 12 ಅಂಶಗಳ ‘ಶ್ವೇತಪತ್ರ’ವನ್ನು ಬುಧವಾರ ಬಿಡುಗಡೆ ಮಾಡಿದ್ದ ಮಾಕನ್, ‘ಕೇಜ್ರಿವಾಲ್ ಅವರು ‘ದೇಶವಿರೋಧಿ. ಏಕರೂಪ ನಾಗರಿಕ ಸಂಹಿತೆ ಮತ್ತು ಸಂವಿಧಾನದ 370ನೇ ವಿಧಿಯ ರದ್ದತಿ ಸಂದರ್ಭದಲ್ಲಿ ಬಿಜೆಪಿಗೆ ಸೈದ್ಧಾಂತಿಕ ಬೆಂಬಲ ನೀಡಿದ್ದರು’ ಎಂದು ಆರೋಪಿಸಿದ್ದರು. ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಜತೆಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆಯೇ ಎಂದು ಎಎಪಿ ಪ್ರಶ್ನಿಸಿದೆ.
ಕೇಜ್ರಿವಾಲ್ ಹಾಗೂ ಮನೀಷ್ ಸಿಸೋಡಿಯಾ ವಿರುದ್ಧ ಕಣಕ್ಕಿಳಿದಿರುವ ಸಂದೀಪ್ ದೀಕ್ಷಿತ್ ಹಾಗೂ ಫರ್ಹಾದ್ ಸೂರಿ ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಗಳು ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂದು ಎಎಪಿ ಆರೋಪಿಸಿದೆ. ಮಾಕನ್ ಹಾಗೂ ದೆಹಲಿಯ ಇತರ ನಾಯಕರು ಬಿಜೆಪಿಯನ್ನು ರಾಷ್ಟ್ರ ವಿರೋಧಿಯೆಂದು ಏಕೆ ಕರೆಯುತ್ತಿಲ್ಲ ಎಂದು ಪ್ರಶ್ನಿಸಿರುವ ಪಕ್ಷವು, ಕೇಜ್ರಿವಾಲ್ ಹಾಗೂ ದೆಹಲಿ ಮುಖ್ಯಮಂತ್ರಿ ಆತಿಶಿ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಯುವ ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಮೌನವಾಗಿರುವುದು ಏಕೆ ಎಂದು ಕೇಳಿದೆ.
‘ಇಂಡಿಯಾ’ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಲು ಸಿದ್ಧ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಈ ಹೇಳಿಕೆಗೆ ಲಾಲೂ ಪ್ರಸಾದ್ ಸೇರಿದಂತೆ ಹಲವು ನಾಯಕರು ಬೆಂಬಲ ವ್ಯಕ್ತಪಡಿಸಿದ್ದರು. ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಸೋಲಿನ ನಂತರ ಕಾಂಗ್ರೆಸ್ ನಾಯಕತ್ವದ ವಿರುದ್ಧ ಮಿತ್ರಪಕ್ಷಗಳ ನಾಯಕರು ಧ್ವನಿ ಎತ್ತಲಾರಂಭಿಸಿದ್ದಾರೆ. ಎಎಪಿ ಡಿಸೆಂಬರ್ 16ರಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾಗವಹಿಸಿದ್ದರು.
ಗುರುವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆತಿಶಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಮಾಕನ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೆಹಲಿ ಹಾಗೂ ಚಂಡೀಗಢದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೇಜ್ರಿವಾಲ್ ಪ್ರಚಾರ ನಡೆಸಿದ್ದರು. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ದರೂ ಕಾಂಗ್ರೆಸ್ ವಿರುದ್ಧ ಕೇಜ್ರಿವಾಲ್ ಟೀಕೆ ಮಾಡಿರಲಿಲ್ಲ ಎಂದು ಅವರು ನೆನಪಿಸಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಅವರು ಎಎಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕಾಂಗ್ರೆಸ್ ಬಿಡುಗಡೆ ಮಾಡಿರುವ ಶ್ವೇತಪತ್ರದಿಂದ ಎಎಪಿಯ ವಿಶ್ವಾಸಾರ್ಹತೆ ತಳಮಟ್ಟಕ್ಕೆ ಕುಸಿದಿದೆ ಎಂದರು. ಭ್ರಷ್ಟ ನಾಯಕರ ಗುಂಪು ತಮ್ಮ ಛಿದ್ರಗೊಂಡ ವರ್ಚಸ್ಸು ಹಾಗೂ ಮತದಾರರ ಬೆಂಬಲ ಗಳಿಸಲು ಹತಾಶರಾಗಿ ಪ್ರಯತ್ನಿಸುತ್ತಿದ್ದಾರೆ ಎಂದರು.
ಇನ್ನೊಂದೆಡೆ, ಮಹಿಳಾ ಸಮ್ಮಾನ್ ಯೋಜನೆಯ ಬಗ್ಗೆ ಸಂದೀಪ್ ದೀಕ್ಷಿತ್ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ದೂರು ನೀಡಿದ್ದಾರೆ. ಆಡಳಿತ ಪಕ್ಷವು ದೆಹಲಿಯ ಮಹಿಳೆಯರಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
‘ಎಎಪಿ ಕಾರ್ಯಕರ್ತರು ಅಸ್ತಿತ್ವದಲ್ಲಿಲ್ಲದ ಯೋಜನೆಗಾಗಿ ಫಾರ್ಮ್‌ಗಳನ್ನು ಭರ್ತಿ ಮಾಡುವ ಮೂಲಕ ಮಹಿಳೆಯರ ದೂರವಾಣಿ ಸಂಖ್ಯೆಗಳು ಮತ್ತು ವಿಳಾಸಗಳನ್ನು ಸಂಗ್ರಹಿಸುತ್ತಿದ್ದಾರೆ. ಆದರೆ, ಈ ಯೋಜನೆಯೇ ಚಾಲ್ತಿಯಲ್ಲಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೇ ಜಾಹೀರಾತು ನೀಡಿದ್ದಾರೆ. ಇದೊಂದು ವಂಚನೆ ಪ್ರಕರಣ. ಈ ಬಗ್ಗೆ ತನಿಖೆ ನಡೆಸಿ ಕೇಜ್ರಿವಾಲ್ ಹಾಗೂ ಆತಿಶಿ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.