
ಅಜಿತ್ ಪವಾರ್ ಮತ್ತು ಅಪಘಾತಕ್ಕೀಡಾದ ವಿಮಾನ
ಪುಣೆ: ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಮತ್ತು ಇತರ ನಾಲ್ವರು ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು ಆಕಸ್ಮಿಕ ಸಾವು ಪ್ರಕರಣ (ಎಡಿಆರ್) ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಜಿತ್ ಪವಾರ್ ಅವರು ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ವಿಮಾನ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ 8.50ಕ್ಕೆ ಪತನಗೊಂಡಿತ್ತು. ಅವಘಡದಲ್ಲಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಮಾಹಿತಿ ನೀಡಿದೆ.
ಘಟನೆ ಸಂಬಂಧ ಬಾರಾಮತಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ (ಎಡಿಆರ್) ದಾಖಲಿಸಲಾಗಿದೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಎಡಿಆರ್ ಅನ್ನು ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆ (ಸಿಐಡಿ) ಮತ್ತು ವಿಮಾನ ಅಪಘಾತ ತನಿಖಾ ಬ್ಯೂರೊಗೆ (ಎಎಐಬಿ) ಹಸ್ತಾಂತರಿಸಲಾಗುತ್ತದೆ ಎಂದೂ ಅವರು ವಿವರಿಸಿದ್ದಾರೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಎಐಬಿ, ಈಗಾಗಲೇ ವಿಮಾನ ಅಪಘಾತದ ತನಿಖೆಯನ್ನು ವಹಿಸಿಕೊಂಡಿದೆ. ಆದಾಗ್ಯೂ, ಸಿಐಡಿ ಆದೇಶದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಡಿಆರ್ ಕುರಿತು ತನಿಖೆ ನಡೆಸುವ ಸಾಧ್ಯತೆಯಿದೆ ಎಂದಿದ್ದಾರೆ.
ದುರಂತದಲ್ಲಿ ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ವಿದೀಪ್ ಜಾಧವ್, ವಿಮಾನ ಸಹಾಯಕಿ ಪಿಂಕಿ ಮಾಲಿ, ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್, ಸಹ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಮೃತಪಟ್ಟಿದ್ದಾರೆ. ಸುಮಿತ್ ಅವರು 15,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರೆ, ಶಾಂಭವಿ ಅವರು 1,500 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.