ADVERTISEMENT

ಅಂಬೇಡ್ಕರ್ ಜ್ಞಾನ ಪಡೆಯಲು ‘ವೈದಿಕ ಬ್ರಾಹ್ಮಣ’ರಾಗಿದ್ದರು: ನಟ ರಾಹುಲ್ ವಿವಾದ

ಪಿಟಿಐ
Published 10 ಫೆಬ್ರುವರಿ 2025, 6:05 IST
Last Updated 10 ಫೆಬ್ರುವರಿ 2025, 6:05 IST
<div class="paragraphs"><p>ಮರಾಠಿ ನಟ ರಾಹುಲ್ ಸೋಲಾಪುರ್‌ಕರ್</p></div>

ಮರಾಠಿ ನಟ ರಾಹುಲ್ ಸೋಲಾಪುರ್‌ಕರ್

   

Credit: X/@rahul_girish

ಪುಣೆ: ಇತ್ತೀಚೆಗೆ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದ ಮರಾಠಿ ನಟ ರಾಹುಲ್ ಸೋಲಾಪುರ್‌ಕರ್ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ADVERTISEMENT

‘ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಜ್ಞಾನ ಪಡೆಯುವ ಸಂದರ್ಭದಲ್ಲಿ ‘ವೈದಿಕ ಬ್ರಾಹ್ಮಣ’ರಾಗಿದ್ದರು’ ಎಂದು ಹೇಳುವ ನಟ ರಾಹುಲ್ ಸೋಲಾಪುರ್‌ಕರ್ ಹೊಸ ಗದ್ದಲ ಎಬ್ಬಿಸಿದ್ದಾರೆ.

ಅಂಬೇಡ್ಕರ್ ಹೇಳಿಕೆ ವಿವಾದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಮಾಜ ಸುಧಾರಕ ಮತ್ತು ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತು ನಾನು ಬಳಸಿದ ಪದಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.

‘ನಾನು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಹಲವು ಉಪನ್ಯಾಸಗಳನ್ನು ನೀಡಿದ್ದೇನೆ. ಇಂತಹ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಏಕೆ ಹರಿಬಿಡಲಾಗುತ್ತಿದೆ ಎಂಬುದು ನನಗೆ ಸಂಪೂರ್ಣವಾಗಿ ತಿಳಿದಿಲ್ಲ. ನಾನು ಮಾಡಿದ ಟೀಕೆಗಳಿಗಾಗಿ ಮತ್ತೊಮ್ಮೆ ನಾನು ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಮುಂಬರುವು ದಿನಗಳಲ್ಲಿ ನಾನು ರಾಷ್ಟ್ರೀಯ ನಾಯಕರ ಬಗ್ಗೆ ಯಾವುದೇ ತಪ್ಪು ಹೇಳಿಕೆಗಳನ್ನು ನೀಡುವುದಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ.

ರಾಹುಲ್ ಸೋಲಾಪುರ್‌ಕರ್ ಹೇಳಿದ್ದೇನು?: ‘ಅಂಬೇಡ್ಕರ್ ಅವರು ಬಹುಜನ ಕುಟುಂಬದಲ್ಲಿ ರಾಮ್‌ಜಿ ಸಕ್ಪಾಲ್‌ ಅವರಿಗೆ ಜನಿಸಿದ್ದರು. ನಂತರ ಅಂಬೇಡ್ಕರ್ ಅವರನ್ನು ಶಿಕ್ಷಕರೊಬ್ಬರು ದತ್ತು ಪಡೆದಿದ್ದರು. ವೇದಗಳಲ್ಲಿ, ಜ್ಞಾನವನ್ನು ಗಳಿಸುವವನು ಬ್ರಾಹ್ಮಣನಾಗುತ್ತಾನೆ ಎಂದು ಹೇಳಲಾಗುತ್ತದೆ. ಅಂಬೇಡ್ಕರ್ ಅವರು ಜ್ಞಾನವನ್ನು ಗಳಿಸಿದ್ದರಿಂದ ಬ್ರಾಹ್ಮಣರಾಗಿದ್ದರು’ ಎಂದು ರಾಹುಲ್ ಸೋಲಾಪುರ್‌ಕರ್ ಹೇಳಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

‘ರಾಹುಲ್ ಸೋಲಾಪುರ್‌ಕರ್ ಅವರು ಈಗ ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಅವರನ್ನು ಎಲ್ಲಿಯಾದರೂ ನೋಡಿದರೂ ಬೂಟಿನಿಂದ ಹೊಡೆಯಬೇಕು. ಅವರಂತಹವರು ಜಾತಿವಾದಿ ಸಿದ್ಧಾಂತಗಳಿಂದ ಮಹಾರಾಷ್ಟ್ರ ಮತ್ತು ದೇಶವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಎನ್‌ಸಿಪಿ (ಎಸ್‌ಪಿ) ಶಾಸಕ ಜಿತೇಂದ್ರ ಅವ್ಹಾದ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಛತ್ರಪತಿ ಶಿವಾಜಿ ಬಗ್ಗೆ ಸೋಲಾಪುರ್‌ಕರ್ ಹೇಳಿದ್ದು ಹೀಗೆ...

‘1666ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮೊಘಲ್ ಚಕ್ರವರ್ತಿ ಔರಂಗಜೇಬನ ಅಧಿಕಾರಿಗಳಿಗೆ ‘ಲಂಚ’ವನ್ನು ನೀಡಿ ಆಗ್ರಾದಿಂದ ತಪ್ಪಿಸಿಕೊಂಡಿದ್ದರು’ ಎಂದು ಹೇಳುವ ಮೂಲಕ ಇತ್ತೀಚೆಗೆ ರಾಹುಲ್ ಸೋಲಾಪುರ್‌ಕರ್ ವಿವಾದ ಹುಟ್ಟುಹಾಕಿದ್ದರು.

ಮರಾಠ ಸಂಘಟನೆಗಳ ಪ್ರತಿಭಟನೆಯ ನಂತರ ಸೋಲಾಪುರ್‌ಕರ್‌ ಅವರು ಪುಣೆ ಮೂಲದ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ (ಬಿಒಆರ್‌ಐ) ಟ್ರಸ್ಟಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ‘ಲಂಚ’ ಪದವನ್ನು ಬಳಸಿದ್ದಕ್ಕಾಗಿ ಮತ್ತು ಶಿವಾಜಿ ಮಹಾರಾಜರನ್ನು ಗೌರವಿಸುವವರ ಭಾವನೆಗಳನ್ನು ಘಾಸಿಗೊಳಿಸುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.