ADVERTISEMENT

ಅದಾನಿ ಸಮೂಹದಿಂದ ಅಕ್ರಮ ಆರೋಪ: 2 ತಿಂಗಳಲ್ಲಿ ತನಿಖೆಗೆ ಸುಪ್ರೀಂ ಕೋರ್ಟ್‌ ಸೂಚನೆ

ಅದಾನಿ ಸಮೂಹದಿಂದ ಅಕ್ರಮ ಆರೋಪ: ಸೆಬಿಗೆ ಸುಪ್ರೀಂ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 21:07 IST
Last Updated 2 ಮಾರ್ಚ್ 2023, 21:07 IST
   

ನವದೆಹಲಿ: ಅದಾನಿ ಸಮೂಹವು ಷೇರು ದರಗಳನ್ನು ಅಕ್ರಮವಾಗಿ ಏರಿಳಿತ ಮಾಡಿದೆಯೇ ಎಂಬ ಕುರಿತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಎರಡು ತಿಂಗಳಲ್ಲಿ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಆದೇಶ ನೀಡಿದೆ. ಕಡ್ಡಾಯವಾಗಿ ತಿಳಿಸಬೇಕಾಗಿದ್ದ ಯಾವುದಾದರೂ ಮಾಹಿತಿಯನ್ನು ಮುಚ್ಚಿಡಲಾಗಿದೆಯೇ ಎಂಬ ಕುರಿತೂ ತನಿಖೆಗೆ ಸೂಚಿಸಲಾಗಿದೆ.

ಭಾರತದ ಹೂಡಿಕೆದಾರರ ಹಿತರಕ್ಷಣೆಗಾಗಿ ಏನು ಮಾಡಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡಲು ಆರು ಸದಸ್ಯರ ಸಮಿತಿಯೊಂದನ್ನು ಕೂಡ ಸುಪ್ರೀಂ ಕೋರ್ಟ್ ರಚಿಸಿದೆ. ಅದಾನಿ ಸಮೂಹವು ಷೇರು ದರಗಳಲ್ಲಿ ಅಕ್ರಮವಾಗಿ ಏರಿಳಿತ ಮಾಡಿದೆ ಎಂದು ಆರೋಪಿಸಿ ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ವರದಿಯೊಂದನ್ನು ಇತ್ತೀಚೆಗೆ ಪ್ರಕಟಿಸಿತ್ತು. ಅದಾದ ಬಳಿಕ ಅದಾನಿ ಸಮೂಹದ ಷೇರುಗಳ ದರದಲ್ಲಿ ಭಾರಿ ಕುಸಿತವಾಗಿತ್ತು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ಅವರು ನಿಯಂತ್ರಣ ಚೌಕಟ್ಟಿನ ಮೌಲ್ಯಮಾಪನ ಮತ್ತು ಬದಲಾವಣೆಗೆ ಸಲಹೆ ನೀಡಲು ರಚಿಸಿರುವ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಕೇಂದ್ರ ಸರ್ಕಾರ ಮತ್ತು ಸೆಬಿಯಂತಹ ಸಂಸ್ಥೆಗಳು ಈ ಸಮಿತಿಗೆ ನೆರವು ನೀಡಬೇಕು ಎಂದು ಕೋರ್ಟ್‌ ಹೇಳಿದೆ.

ADVERTISEMENT

ಹೂಡಿಕೆದಾರರಲ್ಲಿ ಜಾಗೃತಿ ಹೆಚ್ಚಳ ಮಾಡುವುದಕ್ಕೆ ಏನು ಮಾಡಬೇಕು ಎಂಬ ಸಲಹೆಯನ್ನೂ ಈ ಸಮಿತಿಯು ನೀಡಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವು ಹೇಳಿದೆ. ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರು ಪೀಠದಲ್ಲಿ ಇದ್ದರು. ಅದಾನಿ ಸಮೂಹ ಅಥವಾ ಇತರ ಕಂಪನಿಗಳಿಗೆ ಸಂಬಂಧಿಸಿ ಷೇರು ಮಾರುಕಟ್ಟೆಯಲ್ಲಿ ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದ ಕುರಿತಂತೆಯೂ ಸಮಿತಿಯು ಪರಿಶೀಲನೆ ನಡೆಸಲಿದೆ.

ಇತರ ಆರೋಪಗಳ ಕುರಿತೂ ಸೆಬಿ ತನಿಖೆಯನ್ನು ನಡೆಸಬೇಕು. ಷೇರು ಗುತ್ತಿಗೆಗಳ (ನಿಯಂತ್ರಣ) ನಿಯಮಗಳಲ್ಲಿ ಉಲ್ಲಂಘನೆ ಆಗಿದೆಯೇ ಎಂಬುದನ್ನೂ ತನಿಖೆ ಮಾಡಬೇಕು ಎಂದು ನ್ಯಾಯಾಲಯವು ಸೆಬಿಗೆ ನಿರ್ದೇಶನ ನೀಡಿದೆ.

ತನ್ನ ನಿರ್ದೇಶನಗಳ ಆಚೆಗೆ ಇರುವ ವಿಚಾರಗಳ ಕುರಿತು ಕೂಡ ತನಿಖೆ ನಡೆಸುವ ಸ್ವಾತಂತ್ರ್ಯ ಸೆಬಿಗೆ ಇದೆ ಎಂದು ಪೀಠ ಹೇಳಿದೆ. ತನಿಖೆಯನ್ನು ತ್ವರಿತವಾಗಿ ನಡೆಸಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಸಮಿತಿ ರಚನೆಗೆ ಸಂಬಂಧಿಸಿದಂತೆ ಒಂಬತ್ತು ಪುಟಗಳ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಬರೆದಿದ್ದಾರೆ. ಈಗ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿ ಕೋರ್ಟ್‌ನ ನಿರ್ದೇಶನಗಳು ಪಾಲನೆ ಆಗಿವೆಯೇ ಎಂಬುದರ ಕುರಿತು ಸೆಬಿಯು ತಜ್ಞರ ಸಮಿತಿಗೆ ಮಾಹಿತಿ ನೀಡಬೇಕು. ತಜ್ಞರ ಸಮಿತಿ ರಚನೆಯಾಗಿದೆ ಎಂಬ ಕಾರಣಕ್ಕೆ ಸೆಬಿಯ ಅಧಿಕಾರ ಅಥವಾ ಹೊಣೆಗಾರಿಕೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಪೀಠ ವಿವರಿಸಿದೆ.

ಷೇರುಪೇಟೆಯಲ್ಲಿ ಇತ್ತೀಚೆಗೆ ಆಗಿರುವ ಏರಿಳಿತಗಳ ಹಿಂದಿನ ಕಾರಣಗಳೇನು ಎಂಬುದನ್ನು ಗುರುತಿಸುವುದೂ ಸೇರಿದಂತೆ ಒಟ್ಟು ಸನ್ನಿವೇಶದ ಮೌಲ್ಯಮಾಪನವು ಸಮಿತಿಯ ಹೊಣೆಗಾರಿಕೆಯಾಗಿದೆ.

‘ಸಮಿತಿಗೆ ಅಗತ್ಯವಾದ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಸೆಬಿ ಅಧ್ಯಕ್ಷರನ್ನು ಕೋರಲಾಗಿದೆ. ಕೇಂದ್ರ ಸರ್ಕಾರವೂ ಸೇರಿದಂತೆ ಸಂಬಂಧಪಟ್ಟ ಎಲ್ಲ ಹಣಕಾಸು ಸಂಸ್ಥೆಗಳು, ಕಾನೂನು ಜಾರಿ ಸಂಸ್ಥೆಗಳು ಸಮಿತಿಗೆ ಸಹಕಾರ ನೀಡಬೇಕು. ಇತರ ತಜ್ಞರ ನೆರವನ್ನೂ ಸಮಿತಿ ಪಡೆದುಕೊಳ್ಳಬಹುದು’ ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.