ADVERTISEMENT

ಅದಾನಿ ಸಮೂಹದ ಹಗರಣ: ನಿರಂತರ ತನಿಖೆ ಅಗತ್ಯ–ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 10:03 IST
Last Updated 19 ಸೆಪ್ಟೆಂಬರ್ 2025, 10:03 IST
   

ನವದೆಹಲಿ: ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರುವ ಕೆಲಸಗಳಲ್ಲಿ ತೊಡಗಿದ್ದ ಆರೋಪದಿಂದ ಅದಾನಿ ಸಮೂಹವನ್ನು ಮುಕ್ತಗೊಳಿಸಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ಆದೇಶಿಸಿದ ಬೆನ್ನಲ್ಲೇ, ಈ ಉದ್ಯಮ ಸಮೂಹದ ‘ಹಗರಣ’ ಕುರಿತಂತೆ ಎಲ್ಲ ಆಯಾಮಗಳಲ್ಲಿ ನಿರಂತರ ತನಿಖೆ ಅಗತ್ಯ ಎಂದು ಕಾಂಗ್ರೆಸ್‌ ಶುಕ್ರವಾರ ಹೇಳಿದೆ.

‘ಈ ವಿಚಾರದಲ್ಲಿ ಸೆಬಿ ನಡೆಸಿದ ತನಿಖೆ ಸಾಕಾಗದು. ಸೆಬಿ ನಡೆಸುವ ತನಿಖೆ ವ್ಯಾಪ್ತಿಗೆ ಒಳಪಡದ ಅನೇಕ ಸಂಗತಿಗಳು ಇದ್ದು, ಅವು ಹೊರಬರಬೇಕಿದೆ. ಹೀಗಾಗಿ, ‘ಮೋದಾನಿ ಹಗರಣ’ ಕುರಿತು ನಿರಂತರ ತನಿಖೆಯ ಅಗತ್ಯ ಇದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಈ ಕುರಿತು ಅವರು ಪ್ರಕಟಣೆ ನೀಡಿದ್ದಾರೆ. ಅದಾನಿ ಸಮೂಹದಿಂದ ನಡೆದಿದೆ ಎನ್ನಲಾದ ಅಕ್ರಮ ಕುರಿತು ಈ ಹಿಂದೆ ಪಕ್ಷವು ಕೇಳಿದ್ದ 100 ಪ್ರಶ್ನೆಗಳನ್ನು ಹಂಚಿಕೊಂಡಿರುವ ಅವರು, ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆತಿಲ್ಲ ಎಂದು ಚಾಟಿ ಬೀಸಿದ್ದಾರೆ.

ADVERTISEMENT

ಅದಾನಿ ಸಮೂಹದ ವಿರುದ್ಧ ಹಿಂಡನ್‌ಬರ್ಗ್‌ ಸಂಸ್ಥೆ ಆರೋಪ ಹೊರಿಸಿದ್ದ ವೇಳೆ, ಕಾಂಗ್ರೆಸ್‌ ಪಕ್ಷವು ‘ಹಮ್‌ ಅದಾನಿ ಕೆ ಹೈ ಕೌನ್’(ಎಚ್‌ಎಎಚ್‌ಕೆ) ಎಂಬ ಅಭಿಯಾನ ಆರಂಭಿಸಿತ್ತು. ಆರೋಪಗಳಿಗೆ ಸಂಬಂಧಿಸಿ ನಿತ್ಯವೂ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು.

ಅದಾನಿ ಸಮೂಹ ವಿರುದ್ಧದ ಆರೋಪಗಳ ಕುರಿತು ಎರಡು ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಬೇಕು ಎಂದು 2023ರ ಮಾರ್ಚ್ 2ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ, ಹಲವು ಬಾರಿ ತನಿಖೆಯ ಅವಧಿ ವಿಸ್ತರಣೆ ಹಾಗೂ ವಿಳಂಬದ ಬಳಿಕ ಎರಡು ವರ್ಷ ಏಳು ತಿಂಗಳ ನಂತರ ಸೆಬಿ ತನ್ನ ಆದೇಶ ಪ್ರಕಟಿಸಿದೆ’ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

‘10ಕ್ಕೂ ಅಧಿಕ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ’

ಅದಾನಿ ಸಮೂಹ ಹಾಗೂ ಅದರ ಸಾಗರೋತ್ತರ ಸಂಸ್ಥೆಗಳು ಷೇರು ನಿಯಮಗಳನ್ನು ಉಲ್ಲಂಘಿಸಿರುವ ಕುರಿತ 10ಕ್ಕೂ ಹೆಚ್ಚು ಆರೋಪಗಳ ಬಗ್ಗೆ ಸೆಬಿ ಈಗಲೂ ತನಿಖೆ ನಡೆಸುತ್ತಿದೆ ಎಂದು  ಮೂಲಗಳು ಶುಕ್ರವಾರ ಹೇಳಿವೆ. ಅದರ ವಿರುದ್ಧ ಕೇಳಿಬಂದಿದ್ದ ಎರಡು ಆರೋಪಗಳಿಂದ ಅದಾನಿ ಸಮೂಹವನ್ನು ಮುಕ್ತಗೊಳಿಸಿ ಸೆಬಿ ಆದೇಶ ಹೊರಡಿಸಿದ ಮಾರನೇ ದಿನವೇ ಈ ಮೂಲಗಳು ಈ ಮಾಹಿತಿ ಬಹಿರಂಗಪಡಿಸಿವೆ. ಸೆಬಿ ಈಗಲೂ ತನಿಖೆ ನಡೆಸುತ್ತಿದೆ ಎನ್ನಲಾದ ವಿಚಾರಗಳ ಕುರಿತಂತೆ ಕೆಲವು ಪ್ರಶ್ನೆಗಳನ್ನು ಕೇಳಿ ತಾನು ಕಳುಹಿಸಿದ್ದ ಇ–ಮೇಲ್‌ಗೆ ಅದಾನಿ ಸಮೂಹ ಉತ್ತರಿಸಿಲ್ಲ. ಸೆಬಿ ಕೂಡ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್‌ ವರದಿ ಮಾಡಿದೆ. ‘10ಕ್ಕೂ ಅಧಿಕ ಆರೋಪಗಳ ಕುರಿತು ಸೆಬಿ ಯಾವುದೇ ಅಂತಿಮ ಆದೇಶ ಹೊರಡಿಸಿಲ್ಲ. ಸಮೂಹದ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ತಳ್ಳಿಹಾಕಬೇಕೇ ಅಥವಾ ತನಿಖೆ ನಂತರ ಸಮೂಹಕ್ಕೆ ದಂಡ ವಿಧಿಸಬೇಕೆ ಎಂಬ ಬಗ್ಗೆ ಕೂಡ ನಿರ್ಧಾರ ಕೈಗೊಂಡಿಲ್ಲ ಎಂದು ಇವೇ ಮೂಲಗಳು ಹೇಳಿವೆ’ ಎಂದು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.