ADVERTISEMENT

ಸಮಾಜಕ್ಕೆ ಸ್ಫೂರ್ತಿಯಾಗುವೆ: ಕೇರಳದ ಲಿಂಗ ಪರಿವರ್ತಿತೆ ಹೇಳಿಕೆ

ಎನ್‌ಸಿಸಿ ಸೇರಲು ಕೇರಳ ಹೈಕೋರ್ಟ್‌ ಅನುಮತಿ ನೀಡಿದ ಬಳಿಕ ಹೀನಾ ಹನೀಫ್‌ ಪ್ರತಿಕ್ರಿಯೆ

ಪಿಟಿಐ
Published 18 ಮಾರ್ಚ್ 2021, 10:06 IST
Last Updated 18 ಮಾರ್ಚ್ 2021, 10:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಚ್ಚಿ: ಎನ್‌ಸಿಸಿಗೆ ಸೇರಲು ಕೇರಳ ಹೈಕೋರ್ಟ್‌ನಿಂದ ಐತಿಹಾಸಿಕ ತೀರ್ಪು ಪಡೆದ ಯುವ ಲಿಂಗ ಪರಿವರ್ತಿತೆ ಹೀನಾ ಹನೀಫಾ, ‘ಸಮಾಜದಲ್ಲಿರುವ ನಮ್ಮಂತಹ ಸಣ್ಣ ಸಮುದಾಯದವರಿಗೆ ಸ್ಫೂರ್ತಿಯಾಗಲು ಬಯಸುತ್ತೇನೆ‘ ಎಂದು ಹೇಳಿದ್ದಾರೆ.

ಮಲಪ್ಪುರಂ ಜಿಲ್ಲೆಯ ಮುಸ್ಲಿಂ ಕುಟುಂಬದಲ್ಲಿ ಮೂವರು ಸಹೋದರಿಯರಿಗೆ ಸಹೋದರನಾಗಿ ಜನಿಸಿದ ಹನೀಫಾ, 10+2 ಓದುವಾಗ ತಾನೊಬ್ಬ ಹೆಣ್ಣು ಅಂದು ಗುರುತಿಸಿಕೊಂಡ ಮೇಲೆ, ಬಹಳ ಸಮಸ್ಯೆಗಳನ್ನು ಎದುರಿಸಿದರು.

ನಂತರ, 2017ರಲ್ಲಿ ತನ್ನ ಕುಟುಂಬವನ್ನು ತೊರೆದು ಜೀವನವನ್ನು ನಡೆಸಲು ಆರಂಭಿಸಿದ ಹನೀಫಾ, ಮುಸ್ಲಿಂ ಆಗಿದ್ದರೂ, ಜಾತ್ಯತೀತ ಮೌಲ್ಯಗಳೊಂದಿಗೆ ಜೀವಿಸುತ್ತಿದ್ದಾರೆ. ಕುಟುಂಬ ತೊರೆದು ಮೂರು ವರ್ಷಗಳ ನಂತರ 20ನೇ ವಯಸ್ಸಿನಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹೀನಾ ಹನೀಫಾ ಆದರು. ಸದ್ಯ ಅವರು, ಕೇರಳ ವಿಶ್ವವಿದ್ಯಾಲಯದ ತಿರುವನಂತಪುರ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ(ಇತಿಹಾಸ) ಪದವಿಗೆ ಸೇರಿದ್ದಾರೆ.

ADVERTISEMENT

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹೀನಾ ‘ನಾನು ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಜೂನಿಯರ್‌ ಹಂತದ ಎನ್‌ಸಿಸಿಗೆ ಸೇರಿದ್ದೆ. ಆನಂತರ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಕಾಲೇಜಿನಲ್ಲಿ ಎನ್‌ಸಿಸಿಗೆ ಸೇರಲು ಕಾನೂನಾತ್ಮಕ ತೊಡಕುಗಳು ಎದುರಾದವು. ಕೊನೆಗೆ ಕಾನೂನು ಹೋರಾಟ ನಡೆಸಿ, ಗೆಲುವು ಸಾಧಿಸಿದೆ‘ ಎಂದು ಹೇಳಿದ್ದಾರೆ.

ಕಾನೂನು ಪ್ರಕಾರ ಎನ್‌ಸಿಸಿಗೆ ಸೇರಲು ಅವಕಾಶ ಸಿಗದಿದ್ದಾಗ ಹನೀಫಾ ಹೈಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಮಾರ್ಚ್ 15ರಂದು ಲಿಂಗ ಪರಿವರ್ತಿತಸಮುದಾಯದ ಹಕ್ಕುಗಳನ್ನು ರಕ್ಷಿಸುವ ಜತೆಗೆ, ಹೀನಾ ಇವರಿಗೆ ಎನ್‌ಸಿಸಿಗೆ ಪ್ರವೇಶ ನೀಡಬೇಕೆಂಬ ಐತಿಹಾಸಿಕ ತೀರ್ಪು ಪ್ರಕಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.